ಶಿವಮೊಗ್ಗ: ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಾಸ್ಸು ಪಡೆಯುವಂತೆ ರೈತ ಸಂಘಟನೆಗಳಿಂದ ಧರಣಿ

Update: 2021-11-26 17:13 GMT

ಶಿವಮೊಗ್ಗ, ನ.26: ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಾಸ್ಸು ತೆಗೆದುಕೊಂಡರೆ ಅಷ್ಟೆ ಸಾಲದು ವಾಪಾಸ್ಸು ತೆಗೆದುಕೊಂಡ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಿ ತಕ್ಷಣವೇ ವಾಪಾಸ್ಸು ಪಡೆಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಭಾರತ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನೂ ಸಂಸತ್ ನಲ್ಲಿ ಮಂಡಿಸಿ ವಾಪಾಸ್ಸು ಪಡೆಯಬೇಕು. ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆಯನ್ನೂ ರದ್ದುಮಾಡಬೇಕು. ಭತ್ತ, ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕು. ಬೆಂಬಲ ಬೆಲೆಯನ್ನು ಶಾಸನಬದ್ಧಗೊಳಿಸಬೇಕು. ಮಳೆ ಹಾನಿಗೆ ರೈತರು ಒಳಗಾಗಿದ್ದು, ಎಲ್ಲ ರೈತರ ಬೆಳೆಸಾಲವನ್ನು ಮನ್ನಾ ಮಾಡಬೇಕು ಮತ್ತು ಪರಿಹಾರ ನೀಡಬೇಕು. ವೈಜ್ಞಾನಿಕ ಬೆಲೆ ನಿಗಧಿ ಪಡಿಸುವ ವರೆಗೂ ರೈತರ ಬ್ಯಾಂಕಿನ ವ್ಯವಹಾರವನ್ನು ಸಿಬಿಲ್ ವ್ಯಾಪ್ತಿಗೆ ಒಳಪಡಿಸಬಾರದು ಎಂದು ಪ್ರತಿಭಟನಾ ನಿರತ ರೈತರು ಆಗ್ರಹಿಸಿದರು.

ಅಪಾರ ಮಳೆಗೆ ಕಂದುಜಿಗಿ ಹುಳುವಿನ ಬಾಧೆಗೆ ರೈತರ ಬೆಳೆಗಳು ತುತ್ತಾಗಿವೆ. ಮೇವಿನ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಮೇವು ಖರೀದಿಗಾಗಿ ತಕ್ಷಣವೇ 25 ಸಾವಿರ ರೂ. ಪರಿಹಾರ ಒದಗಿಸಬೇಕು. ವಿದೇಶಿ ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಬಾರದು. ಜಾನುವಾರು ಸಾಕಣೆ ದುಬಾರಿಯಾಗಿದ್ದು, ರೈತರಿಗೆ ಲೀಟರ್ಗೆ ಕನಿಷ್ಠ 40 ರೂ. ನಿಗಧಿ ಮಾಡಬೇಕು. ಕೃಷಿ ಉಪಕರಣಗಳಿಗೆ ಸಹಾಯಧನವನ್ನು ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ರೈತಸಂಘದ ವರಿಷ್ಟ ನಾಯಕ ಕೆ.ಟಿ. ಗಂಗಾಧರ್, ಪ್ರಮುಖರಾದ ಬೀರೇಶ್, ಮೋಹನ ಕೂಡ್ಲಿಗೆರೆ, ಯಶವಂತರಾವ್ ಘೋರ್ಪಡೆ, ಜಗದೀಶ್ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News