ಅಧಿಕಾರಿಗಳ ನಿವಾಸದಲ್ಲಿ ಚಿನ್ನ, ಸಚಿವರ ನಿವಾಸದಲ್ಲಿ?

Update: 2021-11-27 07:57 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

 ಕೃಷಿಯ ಮೂಲಕ ಸಾಲಸೋಲಗಳು ಬೆಳೆದು ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವ ದಿನಗಳಲ್ಲಿ, ಕೃಷಿ ಇಲಾಖೆಯ ಅಧಿಕಾರಿಗಳ ಮನೆಯಲ್ಲಿ ಚಿನ್ನದ ಗಟ್ಟಿಗಳು ಪತ್ತೆಯಾದ ವರದಿಗಳು ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸುತ್ತಿವೆ. ಗದಗ ಜಿಲ್ಲೆಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ನಿವಾಸದ ಮೇಲೆ ದಾಳಿ ನಡೆಸಿದಾಗ ಸಿಕ್ಕಿದ್ದು 10 ಕೆಜಿ ಚಿನ್ನದ ಬಿಸ್ಕೆಟ್, ಮೂರು ಕೆಜಿ ಬೆಳ್ಳಿ, ನಾಲ್ಕು ನಿವೇಶನಗಳು, ಎರಡು ಮನೆಗಳು, ಎಂಟು ಎಕರೆ ಕೃಷಿ ಜಮೀನು. ಕೃಷಿಯಿಂದ ಸಂಪಾದಿಸುವುದಕ್ಕಾಗುವುದಿಲ್ಲ ಎಂದವರು ಈ ಸುದ್ದಿಯನ್ನು ಓದಿ ನಿಜಕ್ಕೂ ಬೆಚ್ಚಿ ಬೀಳಬೇಕು. ಹೇಗೆ ಕೃಷಿ ಇಲಾಖೆಗಳು ರೈತರ ಹೆಸರಿನಲ್ಲಿ ಸರಕಾರದ ಹಣವನ್ನು ಮೇಯುತ್ತಾ, ರೈತರ ರಕ್ತವನ್ನು ಕುಡಿದು ಕೊಬ್ಬಿವೆ ಎನ್ನುವುದನ್ನು ಇದು ಹೇಳುತ್ತಿದೆ. ಸದ್ಯಕ್ಕೆ ರಾಜ್ಯದಲ್ಲಿ ಎಸಿಬಿ ನಡೆಸಿದ ದಾಳಿ ಭಾರೀ ಸುದ್ದಿ ಮಾಡುತ್ತಿದೆೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಯ ಮನೆಯ ಪೈಪ್‌ನ್ನು ಅಲ್ಲಾಡಿಸಿದರೆ ಅಲ್ಲಿಂದ ಲಕ್ಷಾಂತರ ರೂಪಾಯಿ ನೋಟುಗಳು ಉದುರಿದವು. ಅಂದ ಹಾಗೆ ಇವೆಲ್ಲ ನೋಟು ನಿಷೇಧದ ಮುಂಚಿನ ಒಂದು ಸಾವಿರ ಮತ್ತು ಐನೂರು ರೂಪಾಯಿಯ ನೋಟುಗಳಲ್ಲ. ನೋಟು ನಿಷೇಧದ ಬಳಿಕ ಮುದ್ರಣಗೊಂಡ ನೋಟುಗಳು. ಹಾಗಾದರೆ ಪ್ರಧಾನಿ ಮೋದಿಯವರ ನೋಟು ನಿಷೇಧ ಸಾಧಿಸಿದ್ದಾದರೂ ಏನು?

ನೋಟು ನಿಷೇಧದಿಂದ ಕಪ್ಪು ಹಣ ಬೆಳಕಿಗೆ ಬರುತ್ತದೆ ಎಂದು ಮೋದಿ ಐವತ್ತು ದಿನಗಳ ಕಾಲ ಕಾದರು. ಆದರೆ ಕಪ್ಪು ಹಣ ಬರಲೇ ಇಲ್ಲ. ಹಾಗಾದರೆ ದೇಶದೊಳಗೆ ಕಪ್ಪು ಹಣ ಇರಲೇ ಇಲ್ಲವೆ? ಇತ್ತು. ಅಂದರೆ ಮೋದಿಯ ಕಾಲದಲ್ಲಿ ಈ ಕಪ್ಪು ಹಣವೆಲ್ಲ ಗುಟ್ಟಾಗಿ ಬಿಳಿಯಾದವು. ಸರಕಾರದ ಸಹಕಾರವಿಲ್ಲದೆ ಕಪ್ಪು ಹಣ ಬಿಳಿಯಾಗುವುದಕ್ಕೆ ಸಾಧ್ಯವೆ? ಕಪು ಹಣ ಬರುವುದಿಲ್ಲ ಎನ್ನುವುದು ಖಚಿತವಾದಂತೆಯೇ, ಉಗ್ರಗಾಮಿಗಳಿಗೆ, ಭಯೋತ್ಪಾದಕರಿಗೆ ನೋಟು ನಿಷೇಧದಿಂದ ಹೊಡೆತ ಬಿತ್ತು ಎಂದು ಮಾಧ್ಯಮಗಳು ಪುಂಗಿ ಊದಿದವು. ಭ್ರಷ್ಟಾಚಾರ ಬಹಳಷ್ಟು ಕಡಿಮೆಯಾಗಿದೆ ಎಂದೂ ಬರೆದವು. ಡಿಜಿಟಲ್ ಬ್ಯಾಂಕಿಂಗ್‌ನಿಂದಾಗಿ ಲಂಚ ಕೊಡುವುದು ನಿಂತೇ ಬಿಟ್ಟಿದೆ ಎಂಬ ವದಂತಿಗಳನ್ನು ಹರಡಲಾಯಿತು. ಆದರೆ ಭಾರತದಲ್ಲಿ ಲಂಚ, ಭ್ರಷ್ಟಾಚಾರ ಹೆಚ್ಚಿವೆ ಎನ್ನುವುದನ್ನು ಅಂತರ್‌ರಾಷ್ಟ್ರೀಯ ಸಮೀಕ್ಷೆಗಳು ಹೇಳುತ್ತವೆ. ಅಷ್ಟೇ ಅಲ್ಲ, ಭಾರತದಲ್ಲಿ ನೋಟು ನಿಷೇಧದ ಬಳಿಕ ಎಷ್ಟರಮಟ್ಟಿಗೆ ಭ್ರಷ್ಟಾಚಾರ ಇಳಿಕೆಯಾಗಿದೆ ಎನ್ನುವುದನ್ನು, ಇತ್ತೀಚಿನ ಎಸಿಬಿ ದಾಳಿ ಬಹಿರಂಗಪಡಿಸಿದೆ. ಆತಂಕಕಾರಿ ವಿಷಯ ಇದಲ್ಲ. ಈ ಅಧಿಕಾರಿಗಳ ಮನೆಯಲ್ಲೇ ಇಷ್ಟರಮಟ್ಟಿಗೆ ಹಣ ಕೊಳೆಯುತ್ತಾ ಬಿದ್ದಿದೆಯಾದರೆ ಇವರೊಂದಿಗೆ ಪ್ರಮುಖ ಪಾಲುದಾರರಾಗಿರುವ ರಾಜಕಾರಣಿಗಳ ಮನೆಯಲ್ಲಿ ಅದೆಷ್ಟು ಹಣ ಕೊಳೆಯುತ್ತಿರಬಹುದು? ನೋಟು ನಿಷೇಧದ ಬಳಿಕ ಆಡಳಿತದಲ್ಲಿರುವ ಸಚಿವರು, ಮುಖ್ಯಮಂತ್ರಿಗಳು ಬಿಳಿಯಾಗಿಸಿಕೊಂಡ ನೋಟುಗಳು ಇದೀಗ ಅದೆಷ್ಟು ಮನೆಗಳ ಪೈಪ್‌ಗಳಲ್ಲಿ, ಮಂಚದಡಿಯಲ್ಲಿ, ಗೋದಾಮಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿರಬಹುದು ಎಂಬುದನ್ನೊಮ್ಮೆ ಊಹಿಸಿದರೆ ಸಾಕು, ಈ ದೇಶ ನಿಜಕ್ಕೂ ತತ್ತರಿಸಿ ಕೂತಿರುವುದು ಕೊರೋನದಿಂದಲ್ಲ ಎನ್ನುವುದು ನಮಗೆ ಅರಿವಾಗಿ ಬಿಡುತ್ತದೆ.

ಇಂದು ಅಧಿಕಾರಿಗಳ ಮೇಲೆ ದಾಳಿ ನಡೆದಂತೆಯೇ, ಇನ್ನೊಂದೆಡೆ ರಾಜಕಾರಣಿಗಳ ಮೇಲೂ ನಡೆಯಬೇಕು. ರಾಜಕಾರಣಿಗಳ ಮೇಲೆ ದಾಳಿ ನಡೆಯಬೇಕಾದರೆ ಅವರು ವಿರೋಧ ಪಕ್ಷಕ್ಕೆ ಸೇರಿರುವುದು ಕಡ್ಡಾಯವಾಗಿರಬಾರದು. ಭ್ರಷ್ಟಾಚಾರ ನಡೆಸಲು ಆಡಳಿತದಲ್ಲಿರುವ ರಾಜಕಾರಣಿಗಳಿಗೆ ಹೆಚ್ಚು ಅವಕಾಶಗಳಿರುವುದರಿಂದ, ದಾಳಿಗಳು ಮುಖ್ಯವಾಗಿ ಆಡಳಿತ ಪಕ್ಷದ ಸಚಿವರು, ಶಾಸಕರ ಮನೆಗಳ ಮೇಲೆ ನಡೆಯಬೇಕು. ಆದರೆ ಅಂತಹ ದಾಳಿಗಳನ್ನು ನಾವು ಕನಸು ಮನಸಲ್ಲೂ ಊಹಿಸುವುದಕ್ಕೆ ಸಾಧ್ಯವಿಲ್ಲ. ಸಂತೋಷ್ ಹೆಗ್ಡೆ ಯವರು ಲೋಕಾಯುಕ್ತದ ಮುಖ್ಯಸ್ಥರಾಗಿದ್ದಾಗ, ಬಿಜೆಪಿ ಸರಕಾರದೊಳಗಿರುವ ನಾಯಕರ ಮೇಲೆ ಅಂತಹದೊಂದು ದಾಳಿ ನಡೆಸುವ ಸಣ್ಣದೊಂದು ಪ್ರಯತ್ನ ನಡೆಯಿತು. ಸಂತೋಷ್ ಹೆಗ್ಡೆಯವರ ದಾಳಿ ರಾಜ್ಯದಲ್ಲಿ ಗಣಿ ಮಾಫಿಯಾವನ್ನು ಬಯಲಿಗೆಳೆಯಿತು. ಸರಕಾರವೇ ಉರುಳುವ ಸನ್ನಿವೇಶ ನಡೆಯಿತು. ಆದರೆ ಯಾವಾಗ ಸಂತೋಷ್ ಹೆಗ್ಡೆಯವರು ಆ ಸ್ಥಾನದಿಂದ ಕೆಳಗಿಳಿದರೋ ಅಂದಿನಿಂದ ಲೋಕಾಯುಕ್ತವನ್ನು ಸಂಪೂರ್ಣ ದುರ್ಬಲಗೊಳಿಸಲಾಯಿತು. ಅದರ ರೆಕ್ಕೆ ಪುಕ್ಕವನ್ನು ಕತ್ತರಿಸಿ ಇದೀಗ ಹೆಸರಿಗಷ್ಟೇ ಲೋಕಾಯುಕ್ತ ಸಂಸ್ಥೆಯಿದೆ. ಕೇವಲ ತಳ ಮಟ್ಟದ ಅಧಿಕಾರಿಗಳನ್ನು ಬೆದರಿಸುವುದಕ್ಕೆ, ಮಣಿಸುವುದಕ್ಕಾಗಿ ಮಾತ್ರ ಅದನ್ನು ಬಳಸಲಾಗುತ್ತದೆ.

ಯುಪಿಎ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಅಣ್ಣಾ ಹಝಾರೆ ಬಳಗ ಒಂದಾಗಿ ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿದಂತೆ ನಟಿಸಿತು. ‘ಜನ ಲೋಕಪಾಲ’ ಸ್ಥಾಪನೆಯಾಗಬೇಕು ಎಂದು ಒತ್ತಾಯಿಸಿತು. ಇಡೀ ಬಿಜೆಪಿ ಒಳಗೊಳಗೆ ಆ ಪ್ರತಿಭಟನೆಯಲ್ಲಿ ಸೇರಿಕೊಂಡಿತು. ಯುಪಿಎ ಸರಕಾರವನ್ನು ‘ಪರಮ ಭ್ರಷ್ಟ ಸರಕಾರ’ ಎಂದು ಬಿಂಬಿಸುವಲ್ಲಿ ಅವುಗಳು ಯಶಸ್ವಿಯಾದವು. ಆ ಹೋರಾಟವನ್ನು ‘ಎರಡನೇ ಸ್ವಾತಂತ್ರ ಹೋರಾಟ’ ಎಂಬ ರೀತಿಯಲ್ಲಿ ಮಾಧ್ಯಮಗಳು ಬಿಂಬಿಸಿದವು. ಆದರೆ ಇಂದು ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ‘ಲೋಕಪಾಲ’ ಜೀವ ಪಡೆಯುವುದು ಇರಲಿ, ಇರುವ ಎಲ್ಲ ತನಿಖಾ ಸಂಸ್ಥೆಗಳನ್ನು ರಾಜಕೀಯ ಸೇಡನ್ನು ತೀರಿಸುವುದಕ್ಕಾಗಿ ಆಡಳಿತ ಪಕ್ಷ ದುರ್ಬಳಕೆ ಮಾಡುತ್ತಿದೆ. ಲೋಕಪಾಲ ಮತ್ತು ಲೋಕಾಯುಕ್ತಕ್ಕೆ ಜೀವಕೊಟ್ಟರೆ ಅದು ಮೊದಲು ಕಚ್ಚುವುದು ರಾಜಕಾರಣಿಗಳನ್ನೇ ಎನ್ನುವುದು ತಿಳಿದೇ ಅವುಗಳನ್ನು ಸರಪಳಿಯಲ್ಲಿ ಕಟ್ಟಿ ಹಾಕಲಾಗಿದೆ. ಇಂದಿಗೂ ಲೋಕಾಯುಕ್ತ ಕೆಲವೇ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿದೆೆ. ಕೇವಲ ಅಧಿಕಾರಿಗಳನ್ನು ಬೇಟೆಯಾಡುವುದಕ್ಕಷ್ಟೇ ಅದು ಸೀಮಿತವಾಗಿದೆ. ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಎಸಿಬಿಗೂ ರಾಜಕಾರಣಿಗಳ ಮೇಲೆ ದಾಳಿ ನಡೆಸುವ ಯಾವುದೇ ಶಕ್ತಿಯಿಲ್ಲ. ಭ್ರಷ್ಟಾಚಾರದ ಮೂಲವೇ ಭ್ರಷ್ಟ ಸರಕಾರ. ಯಾವ ಸರಕಾರ ಹೆಚ್ಚು ಭ್ರಷ್ಟವಾಗಿರುತ್ತದೆಯೋ ಆ ಸರಕಾರದಡಿಯಲ್ಲಿರುವ ಅಧಿಕಾರಿಗಳೂ ಅಷ್ಟೇ ಭ್ರಷ್ಟರಾಗಿರುತ್ತಾರೆ. ಒಬ್ಬ ಕೃಷಿ ಇಲಾಖೆಯ ನಿರ್ದೇಶಕರ ಮನೆಯಲ್ಲಿ 10 ಕೆಜಿ ಚಿನ್ನದ ಬಿಸ್ಕೆಟ್ ಸಿಗುತ್ತದೆಯಾದರೆ, ಕೃಷಿ ಖಾತೆಯ ಸಚಿವನ ಮನೆಯಲ್ಲಿ ಅದೆಷ್ಟು ಕೆಜಿ ಚಿನ್ನ ದಾಸ್ತಾನಿರಬಹುದು ಎನ್ನುವುದರ ಬಗ್ಗೆ ನಾವು ಆತಂಕ ಪಡಬೇಕು.

ಇಂದು ವ್ಯವಸ್ಥೆ ಯಾವ ದಾರಿಯಲ್ಲಿ ಸಾಗುತ್ತಿದೆಯೆಂದರೆ, ಶ್ರೀಸಾಮಾನ್ಯರೇ ಮುಂದಾಗಿ ಅಧಿಕಾರಿಗಳಿಗೆ ಲಂಚ ನೀಡುತ್ತಾರೆ. ‘ಲಂಚ ಕೊಟ್ಟರೂ ಅವನು ತಕ್ಷಣ ಕೆಲಸ ಮಾಡಿ ಕೊಡುತ್ತಾನೆ. ಒಳ್ಳೆಯ ಅಧಿಕಾರಿ’ ಎಂದು ಜನರು ಹೇಳುವಷ್ಟು ಮಟ್ಟಿಗೆ ಲಂಚದೊಂದಿಗೆ ಜನರು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಎಲ್ಲ ಇಲಾಖೆಗಳು ಮಧ್ಯವರ್ತಿಗಳಿಂದ ತುಂಬಿ ಹೋಗಿವೆ. ಕೊರೋನದಂತಹ ಸಂದರ್ಭದಲ್ಲೂ ಹೇಗೆ ಮಧ್ಯವರ್ತಿಗಳು ಪರಿಸ್ಥಿತಿಯನ್ನು ಬಿಗಡಾಯಿಸಿದರು ಎನ್ನುವುದನ್ನು ನಾವು ನೋಡಿದ್ದೇವೆ. ಜನರೂ ಹೆಚ್ಚು ಹೆಚ್ಚು ಭ್ರಷ್ಟರಾಗಿದ್ದಾರೆ. ಪರಿಣಾಮವಾಗಿ ಸರಕಾರವನ್ನೇ ಅವರು ಸಮರ್ಥಿಸುವ ಮಟ್ಟಕ್ಕೆ ತಲುಪಿದ್ದಾರೆ. ಜನಜಾಗೃತಿ, ಸರಕಾರವನ್ನು ಪ್ರಶ್ನಿಸುವುದು ದೇಶದ್ರೋಹದ ಭಾಗವೆಂದು ಶ್ರೀಸಾಮಾನ್ಯನೇ ನಂಬಿದ ಮೇಲೆ, ದೇಶ ಹೆಚ್ಚು ಭ್ರಷ್ಟಗೊಳ್ಳದೆ ಇನ್ನೇನಾದೀತು? ಶ್ರೀಸಾಮಾನ್ಯ ಎಚ್ಚೆತ್ತುಕೊಳ್ಳುವುದು, ಜಾಗೃತರಾಗುವುದೇ ಭ್ರಷ್ಟಾಚಾರ ತಡೆಯಲಿರುವ ಒಂದೇ ಒಂದು ಮಾರ್ಗ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News