ಮಾಂಸಾಹಾರ ನಿಷೇಧದ ಸುತ್ತ ಮುತ್ತ

Update: 2021-11-26 19:30 GMT

ಗುಜರಾತಿನ ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಶೇ. 15 ಪರಿಶಿಷ್ಟ ಪಂಗಡಗಳು, ಶೇ. 10 ಮುಸ್ಲಿಮರು, ಶೇ. 7.5 ಪರಿಶಿಷ್ಟ ಜಾತಿಗಳು ಮತ್ತು ಶೇ. 50 ಇತರ ಹಿಂದುಳಿದ ವರ್ಗಗಳು ಮತ್ತು ವಲಸಿಗರು ಇದ್ದಾರೆ. ಇವರಲ್ಲಿ ಹೆಚ್ಚಿನವರಿಗೆ ಜೈನರಿಗೆ ಹಾಗೂ ವೈಷ್ಣವರಿಗಿರುವಂತೆ ಮಾಂಸದ ಬಗ್ಗೆ ಸೈದ್ಧಾಂತಿಕ ಮಡಿವಂತಿಕೆಯಾಗಲೀ, ವಿರೋಧವಾಗಲೀ ಇಲ್ಲ. ಹೀಗಾಗಿ ಗುಜರಾತಿನ ಜನಸಂಖ್ಯೆಯ ಒಂದು ಬಹುದೊಡ್ದ ಭಾಗ ಮಾಂಸಾಹಾರಿಗಳೆಂದು ನಾವು ಯಾವ ಮುಲಾಜಿಲ್ಲದೆ ಹೇಳಬಹುದು.

ಇತ್ತೀಚೆಗೆ ವಡೋದರ, ರಾಜ್ ಕೋಟ್, ಭಾವನಗರ ಮತ್ತು ಜುನಾಗಡದ ಬಿಜೆಪಿ ಆಡಳಿತವಿರುವ ನಗರ ಸಭೆಗಳು ಬೀದಿಗಳ ಉದ್ದಕ್ಕೂ ಹಾಗೂ ಫುಟ್‌ಪಾತ್‌ಗಳಲ್ಲಿ ಮಾಂಸಾಹಾರ ನೀಡುವ ಸಣ್ಣಪುಟ್ಟ ಬೀದಿಬದಿ ವ್ಯಾಪಾರಿಗಳ ವಿರುದ್ಧ ಕಾರ್ಯಾಚರಣೆ ನಡೆಸಿದವು. ತೆರೆದ ಬಯಲಲ್ಲಿ ಅಂತಹ ಆಹಾರಗಳನ್ನು ಮಾರುವುದರಿಂದ ಜನರ ಧಾರ್ಮಿಕ ಭಾವನೆಗಳಿಗೆ ನೋವಾಗುತ್ತದೆ ಎನ್ನುವುದು ಕಾರ್ಯಾಚರಣೆಗೆ ಅವುಗಳು ನೀಡಿದ ಕಾರಣವಾಗಿತ್ತು. ಪರಿಣಾಮವಾಗಿ ಆ ಬಳಿಕ ಬೀದಿ ಬದಿಗಳಲ್ಲಿ ಮಾಂಸಾಹಾರ ಮಾರಾಟ ಮಾಡುತ್ತಿದ್ದ ನೂರಾರು ಗಾಡಿ ಅಂಗಡಿಗಳನ್ನು ಅಥವಾ ಸ್ಟಾಲ್‌ಗಳನ್ನು ಮುಚ್ಚಿಸಲಾಯಿತು. ಗುಜರಾತ್ ಒಂದು ಸಸ್ಯಾಹಾರಿ ರಾಜ್ಯ ಎಂದು ಹೇಳಿದರೆ ಅಲ್ಲಿ ಮದ್ಯಪಾನ ನಿಷೇಧ ಇರುವುದರಿಂದ ಅಲ್ಲಿ ಯಾರೂ ಮದ್ಯಪಾನಿಗಳಿಲ್ಲ ಎಂದು ಹೇಳುವುದಕ್ಕೆ ಸಮನಾಗುತ್ತದೆ. ಸರಕಾರದ ಕಣ್ಣೆದುರೇ ಅಲ್ಲಿ ಮದ್ಯ ಮುಕ್ತವಾಗಿ ಹರಿಯುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಅದೇ ರೀತಿಯಾಗಿ ಅಲ್ಲಿ ಜನರು ಮಾಂಸಾಹಾರ ಸೇವಿಸುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಆದರೆ, ಮುಕ್ತವಾಗಿ ಮಾಂಸಾಹಾರ ಸೇವಿಸಲು ಜನರು ಸ್ವಲ್ಪಹಿಂಜರಿಯಲು ಕಾರಣ: ಗುಜರಾತ್‌ನ ಸಾಮಾಜಿಕ-ಸಾಂಸ್ಕೃತಿಕ ರಂಗದಲ್ಲಿ ಜೈನರು ಮತ್ತು ವೈಷ್ಣವರ ಪ್ರಾಬಲ್ಯವಿದೆ. ಈ ಅನುಕೂಲಸ್ತ ಜನರಿಗಾಗಿಯೇ ಪಿಜ್ಜಾ ಹಟ್ ಅಹ್ಮದಾಬಾದ್‌ನಲ್ಲಿ ತನ್ನ ಸಂಪೂರ್ಣ ಸಸ್ಯಾಹಾರಿ ರೆಸ್ಟೋರೆಂಟ್ ಅನ್ನು ತೆರೆಯಿತು. ಈ ಎರಡು ಪ್ರಬಲ ಸಮುದಾಯಗಳ ಸಂಸ್ಕೃತಿಯಲ್ಲಿ ಸಸ್ಯಾಹಾರ ಕೇಂದ್ರ ಸ್ಥಾನ ಪಡೆದಿರುವುದರಿಂದ ಸಮಾಜದ ಬಹುದೊಡ್ಡ ವರ್ಗಗಳು ಮಾಂಸಾಹಾರಿಗಳಾದಾಗ್ಯೂ ಮಾಂಸ ಸೇವನೆ ನಿಷಿದ್ಧ ಎನ್ನುವಂತಾಗಿದೆ.

ಮಾಂಸವನ್ನು ಮಾರುವ ರಸ್ತೆ ಬದಿಯ ಹೆಚ್ಚಿನ ಫುಡ್‌ಸ್ಟಾಲ್‌ಗಳನ್ನು ನಡೆಸುವವರು ಅಲ್ಪಸಂಖ್ಯಾತರು, ಕೆಳವರ್ಗದ, ಕೆಳಜಾತಿಯ ಹಿಂದೂಗಳು ಅಥವಾ ವಲಸಿಗರು. ಇವರು ಗುಜರಾತ್‌ನ ರಾಜಕೀಯ ವ್ಯವಹಾರಗಳಲ್ಲಿ ಯಾವುದೇ ರೀತಿಯ ಗಣನೀಯ ಧ್ವನಿಯಿಲ್ಲದವರು. ಎರಡು ದಶಕಗಳಿಗಿಂತಲೂ ಹೆಚ್ಚು ಸಮಯದಿಂದ ಅಲ್ಲಿ ಬಿಜೆಪಿ ಅಧಿಕಾರದಲ್ಲಿದೆಯಾದರೂ, ಬನಿಯಾಗಳು, ಪಟೇಲರು ಹಾಗೂ ಬ್ರಾಹ್ಮಣರಂತಹ ಕೇವಲ ಮೇಲ್ಜಾತಿಗಳವರು ಮಾತ್ರ ಸರಕಾರದ ಉನ್ನತ ಹುದ್ದೆಗಳಲ್ಲಿದ್ದಾರೆ. ಇವರ ಸಾಮಾಜಿಕ ಹಾಗೂ ಸಾಂಸ್ಕೃತಿಕ ನಂಬಿಕೆಗಳು ಸಾಮಾಜಿಕ ನೀತಿ ನಿಯಮಗಳನ್ನು, ರೀತಿರಿವಾಜುಗಳನ್ನು ನಿರ್ಧರಿಸುತ್ತವೆ. ಸಾರ್ವಜನಿಕ ರಸ್ತೆಗಳ ಬದಿಯಲ್ಲಿ ಮಾಂಸಾಹಾರ ಮಾರಾಟ ಮಾಡುವ ಸ್ಟಾಲ್‌ಗಳ ಮೇಲೆ ನಿಷೇಧ ಹೇರಿದ ಅಹ್ಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ನಗರ ಯೋಜನಾ ಸಮಿತಿಯ ಅಧ್ಯಕ್ಷ ದೇವಾಂಗ್ ದನಿ ಓರ್ವ ಬನಿಯಾ. ಹಾಗೆಯೇ ವಡೋದರದಲ್ಲಿ ಇಂತಹ ಸ್ಟಾಲ್‌ಗಳಿಗೆ ಮುಚ್ಚಿಗೆ ಅಳವಡಿಸದಿದ್ದಲ್ಲಿ ಅವುಗಳನ್ನು ಅಲ್ಲಿಂದ ತೆರವುಗೊಳಿಸಬೇಕೆಂದು ನಿರ್ದೇಶ ಹೊರಡಿಸಿದ ಮುನ್ಸಿಪಲ್ ಕಾರ್ಪೊರೇಷನ್‌ನ ಅಧ್ಯಕ್ಷರು, ಹಿತೇಂದ್ರ ಪಟೇಲ್.

ಇಂತಹ ಸ್ಟಾಲ್‌ಗಳ ಮೇಲೆ ಹೇರಿದ ನಿಷೇಧವನ್ನು ವಿರೋಧಿಸಿ ಜನರು ಪ್ರತಿಭಟಿಸಿದಾಗ ಮಾಂಸಾಹಾರವನ್ನು ಮಾರುವ ಸ್ಟಾಲ್‌ಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲವೆಂದೂ, ತಾನು ಈ ಸ್ಟಾಲ್‌ಗಳ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳಬಾರದೆಂದು ಎಲ್ಲಾ ನಗರಗಳ ಮೇಯರ್‌ಗಳಿಗೆ ನಿರ್ದೇಶ ನೀಡುವುದಾಗಿಯೂ ಗುಜರಾತ್‌ನ ಬಿಜೆಪಿ ಮುಖ್ಯಸ್ಥ ಸಿ.ಆರ್. ಪಾಟೀಲ ಹೇಳಿದ್ದಾರೆ. ಜನರು ಏನನ್ನು ತಿನ್ನುತ್ತಾರೆ ಎಂಬ ಬಗ್ಗೆ ಸರಕಾರ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ‘ಅನಾರೋಗ್ಯಕರ’ವಾದ (ಆನ್‌ಹೈಜಿನಿಕ್) ಆಹಾರ ವಸ್ತುಗಳನ್ನು ಮಾರುವ ಬೀದಿಬದಿ ಗಾಡಿಗಳ ವಿರುದ್ಧವಷ್ಟೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದು, ಅಂತಹ, ರಸ್ತೆ ಸಂಚಾರಕ್ಕೆ ಅಡ್ಡಿಪಡಿಸುವ ರೀತಿಯಲ್ಲಿ ತಮ್ಮ ಸ್ಟಾಲ್‌ಗಳನ್ನು ನಡೆಸುವವರ ವಿರುದ್ಧವಷ್ಟೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದರೂ ಸರಕಾರ ತಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು ಎಂಬ ಭಯ ಬೀದಿಬದಿ ಮಾಂಸಾಹಾರ ಮಾರಾಟ ವ್ಯಾಪಾರಿಗಳಲ್ಲಿ ಹಾಗೆಯೇ ಉಳಿದಿದೆ.

ಇಂತಹ ನಿಷೇಧಗಳು, ಅವುಗಳ ತಾತ್ಕಾಲಿಕ ಕ್ರಮಗಳೇ ಆದರೂ ಅವುಗಳು ಸಮಾಜದ ಅಂಚಿನಲ್ಲಿರುವ ಸಮುದಾಯಗಳನ್ನು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರನ್ನು ಮುಖ್ಯ ಪ್ರವಾಹದಿಂದ ಇನ್ನಷ್ಟು ದೂರ ತಳ್ಳುತ್ತವೆ. ಇನ್ನಷ್ಟು ಸಾಮಾಜಿಕ ಬಹಿಷ್ಕಾರಕ್ಕೊಳಗಾಗಿಸುತ್ತವೆ. ಯಾವುದೇ ಪ್ರತಿರೋಧವಿಲ್ಲದೆ ಮಾಂಸಾಹಾರ ಮಾರಾಟದ ಮೇಲೆ ಇಂತಹ ನಿಷೇಧಗಳು ಹೇರಲ್ಪಡುತ್ತವೆ ಎಂಬುದು, ರಾಜ್ಯದ ಪ್ರಬಲ ಸಮುದಾಯಗಳು ಹೇಗೆ ತಮ್ಮ ಪ್ರಾಬಲ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತವೆ ಮತ್ತು ಹೇಗೆ ಜನರ ಹೊಟ್ಟೆ ಪಾಡಿಗೆ ಹಾಗೂ ಶಾಂತಿಗೆ ಬೆದರಿಕೆಯೊಡ್ಡುತ್ತವೆ ಎಂಬುದನ್ನು ತೋರಿಸುತ್ತದೆ.

ಕೃಪೆ:TheHindu

Writer - ಮಹೇಶ್ ಲಂಗಾ

contributor

Editor - ಮಹೇಶ್ ಲಂಗಾ

contributor

Similar News