ಮತಾಂತರ ನಿಷೇಧ ಮಸೂದೆ: ಮುಖ್ಯಮಂತ್ರಿಗೆ ಜಮಾಅತೆ ಇಸ್ಲಾಮಿ ಹಿಂದ್ ಪತ್ರ

Update: 2021-11-26 18:31 GMT

ಬೆಂಗಳೂರು, ನ.26: ರಾಜ್ಯ ವಿಧಾನಮಂಡಲದ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಸರಕಾರ ಮತಾಂತರ ನಿಷೇಧü ಮಸೂದೆ ತರಲು ಗಂಭೀರವಾಗಿ ಯೋಚಿಸುತ್ತಿರುವ ವಿಷಯ ಕೇಳಿಬರುತ್ತಿದೆ. ಈ ಕುರಿತು ನಾವು ಈ ಕೆಳಗಿನ ವಿಷಯಗಳನ್ನು ವಿನಮ್ರವಾಗಿ ತಮ್ಮ ಅವಗಾಹನೆಗೆ ತರಲು ಬಯಸುತ್ತೇವೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಸಅದ್ ಬೆಳಗಾಮಿ ತಿಳಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, ನಮ್ಮ ರಾಜ್ಯವು ತನ್ನ ಧಾರ್ಮಿಕ ಸೌಹಾರ್ದತೆ ಹಾಗೂ ವಿವಿಧ ಸಮುದಾಯಗಳ ಮಧ್ಯೆ ಪರಸ್ಪರ ವಿಶ್ವಾಸ, ಗೌರವ ಮತ್ತು ಸಹಕಾರಗಳಿಗೆ ಹೆಸರು ವಾಸಿಯಾಗಿದೆ. ಇತ್ತೀಚಿನ ದಿನಗಳಲ್ಲಿ ನೈತಿಕ ಪೋಲೀಸ್‍ಗಿರಿ, ಕಾವಲುದಾರಿಕೆ ಮತ್ತು ‘ಲವ್ ಜಿಹಾದ್’ ಎಂದು ಕರೆಯಲ್ಪಡುವ ಹಲವು ಪ್ರಕರಣಗಳು ರಾಜ್ಯದ ಶಾಂತಿಯನ್ನು ಕದಡಿವೆ. ಹಲಾಲ್ ಮಾಂಸ ಮತ್ತು ಧಾರ್ಮಿಕ ಸ್ಥಾನ ಇತ್ಯಾದಿಗಳ ಕುರಿತು ಉಗ್ರ ಮತ್ತು ಪ್ರಚೋದನಾಕಾರಿ ಹೊಣೆಗೇಡಿ ಹೇಳಿಕೆಗಳೂ ಕೇಳಿ ಬರುತ್ತಿವೆ ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮತಾಂತರ ನಿಷೇಧ ಮಸೂದೆಯೂ ಚರ್ಚಾ ವಿಷಯವಾಗಿದೆ. ಕ್ರೈಸ್ತ ಸಮುದಾಯವನ್ನು ಗುರಿಯಾಗಿಸುವುದರೊಂದಿಗೆ ಅವರ ಧಾರ್ಮಿಕ ಸ್ಥಾನ ಮತ್ತು ಚರ್ಚ್‍ಗಳ ವಿವರಗಳನ್ನು ಸಂಗ್ರಹಿಸುವ ಆದೇಶ ಹೊರಡಿಸಲಾಗಿದೆ. ಕೆಲವು ಮುಸ್ಲಿಮ್ ವಿದ್ವಾಂಸರನ್ನು ಉತ್ತರ ಭಾರತದಲ್ಲಿ ಬಂಧಿಸಲಾಗಿದೆ. ಧಾರ್ಮಿಕ ಸ್ವಾತಂತ್ರ್ಯ, ತನ್ನಿಷ್ಟದ ಧರ್ಮವನ್ನು ಅನುಸರಿಸುವುದು, ಅದರ ಪ್ರಚಾರ ಮಾಡುವುದು ಸಂವಿಧಾನದಲ್ಲಿ ಖಾತರಿಪಡಿಸಿರುವ ಮೂಲಭೂತ ಹಕ್ಕು ಎಂದು ನಾವು ನೆನಪಿಸ ಬಯಸುತ್ತೇವೆ. ಅದರ ಅತಿಕ್ರಮ ನಿಜವಾಗಿಯೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಕಸಿಯುವಿಕೆಯಾಗಿದೆ ಎಂದು ಮುಹಮ್ಮದ್ ಸಅದ್ ಬೆಳಗಾಮಿ ಹೇಳಿದ್ದಾರೆ.

ಧಾರ್ಮಿಕತೆ ಒಂದು ಖಾಸಗಿ ವಿಷಯವಾಗಿದ್ದು, ಮತಾಂತರಕ್ಕೆ  ಸರಕಾರವು ಅನುಮೋದನೆಗೊಳಪಡಿಸುವುದು ಅತಿರೇಕವಾಗಿದೆ. ಪ್ರತಿಯೋರ್ವ ಪ್ರೌಢ ನಾಗರಿಕನಿಗೆ ತನ್ನ ಆತ್ಮ ಸಾಕ್ಷಿಯಂತೆ ಆಯ್ಕೆಯ ಸ್ವಾತಂತ್ರ್ಯವಿದ್ದು, ಈ ಆಯ್ಕೆಯನ್ನು ಪ್ರಶ್ನಿಸುವುದು ಮಾನವ ಘನತೆಯ ಅಪಮಾನವಾಗಿದೆ. ಮತಾಂತರದಲ್ಲಿ ಯಾವುದೇ ವಂಚನೆ, ಕಾಪಟ್ಯಗಳಿದ್ದರೆ ಅದರ ವಿರುದ್ಧ ಕ್ರಮ ಕೈಗೊಳ್ಳಲು ಈಗಿರುವ ಕಾನೂನಿನಲ್ಲಿ ವಿಪುಲ ಅವಕಾಶಗಳಿವೆ. ಅದನ್ನು ಸಾರ್ವತ್ರಿಕಗೊಳಿಸುವ ಬದಲು ಪೀಡಿತರ ನಿರ್ದಿಷ್ಟ ದೂರನ್ನು ಕೂಲಂಕಷ ವಿಚಾರಣೆಗೆ ಒಳಪಡಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಆಚಾರ ವಿಚಾರಗಳ ವಿನಿಮಯ ಮತ್ತು ಹೊಸ ಪರ್ಯಾಯ ಚಿಂತನೆಗಳ ಸ್ವೀಕಾರ ಶತಮಾನಗಳಿಂದ ಚಾಲ್ತಿಯಲ್ಲಿರುವ ಮಾನವರೂಢಿಯಾಗಿದೆ. ಈ ನೈಸರ್ಗಿಕ ಹಕ್ಕನ್ನು ಕಸಿಯುವ ಬದಲು ಜನರನ್ನು ಮತಾಂತರಕ್ಕೆ ಬಲವಂತ ಪಡಿಸುವ, ಸಮಾಜದಲ್ಲಿ ವ್ಯಾಪಕವಾಗಿರುವ ತಾರತಮ್ಯತೆ, ಅನ್ಯಾಯಗಳ ಕುರಿತು ಸಮಾಜ ಆತ್ಮಾವಲೋಕನ ನಡೆಸಬೇಕು ಎಂದು ಮುಹಮ್ಮದ್ ಸಅದ್ ಬೆಳಗಾಮಿ ತಿಳಿಸಿದ್ದಾರೆ.

ಮತಾಂತರ ನಿಷೇಧ ಕಾನೂನು ಸಮಾಜ ವಿರೋಧಿ ಶಕ್ತಿಗಳಿಗೆ ಕಾನೂನು ಕೈಗೆತ್ತಿಕೊಳ್ಳಲು ನೆಪ ಮತ್ತು ಸಮಾಜದಲ್ಲಿ ಅಶಾಂತಿ ಹರಡುವ ಒಂದು ಸಾಧನವಾಗಬಹುದು. ಈಗಾಗಲೇ ಸರಕಾರ ಮತ್ತು ಜನತೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಲು ಹರ ಸಾಹಸ ಪಡುತ್ತಿದೆ. ಇಂತಹ ಸಂದರ್ಭದಲ್ಲಿ ಸತ್ಯ, ನ್ಯಾಯ ಮತ್ತು ಕೋಮು ಸೌಹಾರ್ದತೆಯ ಹಿತದೃಷ್ಟಿಯಿಂದ ಈ ಕಾನೂನನ್ನು ತರುವ ಮೊದಲು ಗಂಭೀರವಾಗಿ ಪುನರ್ ಪರಿಶೀಲಿಸುವಂತೆ ನಾವು ತಮ್ಮನ್ನು ವಿನಂತಿಸುತ್ತೇವೆ ಎಂದು ಅವರು ಪತ್ರದಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News