ರಾಜ್ಯದಲ್ಲಿ ಈ ಬಾರಿ ಎಸೆಸೆಲ್ಸಿ ಪಠ್ಯಕ್ಕೆ ಕತ್ತರಿ ?

Update: 2021-11-27 03:03 GMT

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ತರಗತಿ ಅವಧಿ ಲಭ್ಯತೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಹಾಲಿ ಇರುವ ಪಠ್ಯಕ್ರಮವನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲದ ಕಾರಣ 10ನೇ ತರಗತಿಯ ಪಠ್ಯವನ್ನು ಶೇಕಡ 20ರಷ್ಟು ಕಡಿತಗೊಳಿಸಲು ಕರ್ನಾಟಕ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ನಿರ್ಧರಿಸಿದೆ.

ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಆರಂಭದಿಂದಲೂ ಸರ್ಕಾರಕ್ಕೆ ಈ ಬಗ್ಗೆ ಒತ್ತಾಯ ಮಾಡುತ್ತಲೇ ಇದ್ದರು.

ಈ ಬಗ್ಗೆ ಒಂದೆರಡು ದಿನಗಳಲ್ಲಿ ಅಧಿಕೃತ ಘೋಷಣೆ ಹೊರಬೀಳಲಿದೆ. "ಶಾಲೆಗಳಿಗೆ ಭೇಟಿ ನಿಡಿದ ಸಂದರ್ಭದಲ್ಲಿ ಮತ್ತು ಹಲವು ಜಿಲ್ಲೆಗಳಲ್ಲಿ ಸಭೆ ನಡೆಸಿದಾಗ, ಕೋವಿಡ್-19 ಸಾಂಕ್ರಾಮಿಕದ ನಿರ್ಬಂಧಗಳಿಂದಾಗಿ ಶೈಕ್ಷಣಿಕ ಅವಧಿ ಕಡಿತಗೊಂಡಿರುವ ಹಿನ್ನೆಲೆಯಲ್ಲಿ ಪಾಠ ಪೂರ್ಣಗೊಳಿಸುವುದು ಅಸಾಧ್ಯ ಎಂಬ ಅಭಿಪ್ರಾಯವನ್ನು ಬಹಳಷ್ಟು ಶಿಕ್ಷಕರು ವ್ಯಕ್ತಪಡಿಸಿದ್ದಾರೆ. ಇದನ್ನು ಪರಿಗಣಿಸಿ, ಶೇಕಡ 20ರಷ್ಟು ಪಠ್ಯ ಕಡಿತಗೊಳಿಸಲು ನಿರ್ಧರಿಸಲಾಗಿದೆ" ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ರಾಜ್ಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಇಲಾಖೆ ಆಯಾ ಜಿಲ್ಲೆಗಳ ಅಧಿಕಾರಿಗಳಿಗೆ ಮುಂದಿನ ಕೆಲವೇ ದಿನಗಳಲ್ಲಿ ಪಠ್ಯಕ್ರಮ ಕಡಿತದ ಬಗ್ಗೆ ಮಾಹಿತಿ ನೀಡಲಿದೆ ಎಂದು ಅವರು ವಿವರಿಸಿದ್ದಾರೆ.

ಈ ನಿರ್ಧಾರವನ್ನು ಹಲವು ಶಿಕ್ಷಕ ಸಂಘಟನೆಗಳು, ವಿದ್ಯಾರ್ಥಿಗಳು, ಪೋಷಕ ಗುಂಪುಗಳು ಮತ್ತು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಸ್ವಾಗತಿಸಿವೆ. ಕಳೆದ ವರ್ಷ ಶೇಕಡ 30ರಷ್ಟು ಪಠ್ಯ ಕಡಿತಗೊಳಿಸಲಾಗಿತ್ತು. ಈ ವರ್ಷ ಭೌತಿಕ ತರಗತಿಗಳು ಅಕ್ಟೋಬರ್‌ನಲ್ಲಷ್ಟೇ ಆರಂಭವಾಗಿವೆ.

ಏತನ್ಮಧ್ಯೆ ದ್ವಿತೀಯ ಪಿಯುಸಿ ಪಠ್ಯವನ್ನು ಕೂಡಾ ಕಡಿತಗೊಳಿಸಬೇಕು ಎಂಬ ಆಗ್ರಹ ಕೇಳಿಬಂದಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉನ್ನತ ಮೂಲಗಳು ಹೇಳಿವೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಏಪ್ರಿಲ್‌ನಲ್ಲಿ ನಡೆಯುವ ಸಾಧ್ಯತೆ ಇದ್ದು, ಪ್ರಸಕ್ತ ವರ್ಷ 240 ಶೈಕ್ಷಣಿಕ ಗಂಟೆಗಳ ಬದಲಾಗಿ ಕೇವಲ 180 ಗಂಟೆಗಳು ಮಾತ್ರ ಪ್ರತಿ ವಿಷಯಕ್ಕೆ ಲಭ್ಯವಾಗಲಿವೆ ಎಂದು ಶಿಕ್ಷಕರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News