ಧಾರವಾಡ: ಎಸ್‌ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಮತ್ತೆ 77 ಮಂದಿಗೆ ಕೋವಿಡ್; ಒಟ್ಟು ಸಂಖ್ಯೆ 281ಕ್ಕೆ ಏರಿಕೆ

Update: 2021-11-27 04:23 GMT

ಧಾರವಾಡ, ನ.27: ಇಲ್ಲಿನ ಸತ್ತೂರು ಬಡಾಣೆಯಲ್ಲಿರುವ ಎಸ್‌ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಮತ್ತೆ 77 ಮಂದಿ ಕೋವಿಡ್-19 ಸೋಂಕಿಗೆ ಪಾಸಿಟಿವ್ ಆಗಿರುವುದು ಶನಿವಾರ ಬೆಳಗ್ಗೆ ದೃಢಪಟ್ಟಿದೆ. ಇದರೊಂದಿಗೆ ಈ ಕಾಲೇಜಿನಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 281ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ  ಕೋವಿಡ್ ಸೋಂಕಿನ ತೀವ್ರಗೆ ಕಡಿಮೆಯಾಗುತ್ತಿದೆ ಎಂದು ಅಂದುಕೊಳ್ಳುತ್ತಿರುವ ನಡುವೆಯೇ ಇಲ್ಲಿನ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಲ್ಲೇ ಸೋಂಕು ವ್ಯಾಪಕವಾಗಿ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ಆರಂಭದಲ್ಲಿ ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ನಲ್ಲಿರುವ ನಾಲ್ವರು ವಿದ್ಯಾರ್ಥಿಗಳಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಹಾಸ್ಟೆಲ್ ನಲ್ಲಿರುವ 300 ವಿದ್ಯಾರ್ಥಿಗಳನ್ನು ತಪಾಸಣೆ ನಡೆಸಿದಾಗ ಮತ್ತೆ 66 ವಿದ್ಯಾರ್ಥಿಗಳು ಕೋವಿಡ್ ಗೆ ಪಾಸಿಟಿವ್ ಆಗಿರುವುದು ದೃಢಪಟ್ಟಿತ್ತು. ಬಳಿಕ ಕೋವಿಡ್ ತಪಾಸಣೆಯನ್ನು ತೀವ್ರಗೊಳಿಸಲಾಯಿತು. ಅದರಂತೆ ಶುಕ್ರವಾರ ರಾತ್ರಿಯವರೆಗೆ 204 ಜನರಲ್ಲಿ ಸೋಂಕು ಪತ್ತೆಯಾಗಿತ್ತು. ಇದೀಗ ಮತ್ತೆ 77 ಮಂದಿ ಸೋಂಕಿಗೆ ಪಾಸಿಟಿವ್ ಆಗುವ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 281ಕ್ಕೆ ಏರಿಕೆಯಾಗಿದೆ. ಇನ್ನೂ 1,822 ಜನರ ತಪಾಸಣಾ ವರದಿಗಳು ಬರಬೇಕಾಗಿದೆ ಎಂದು ತಿಳಿದುಬಂದಿದೆ.

ಸೋಂಕು ವ್ಯಾಪಕವಾಗಿ ಹರಡಿದ್ದರಿಂದ ಈ ವೈದ್ಯಕೀಯ ಕಾಲೇಜಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಸೋಂಕಿತರನ್ನು ಕ್ವಾರಂಟೈನ್ ಮಾಡಲಾಗಿದ್ದು, ಎಲ್ಲರಿಗೂ ಚಿಕಿತ್ಸೆ, ಔಷಧೋಪಚಾರ ನಡೆಯುತ್ತಿದೆ. ಇನ್ನೂ 1,822 ಜನರ ತಪಾಸಣಾ ವರದಿಗಳು ಬರಬೇಕಾಗಿದೆ ಎಂದು ಜಿಲ್ಲಾಧಿಕಾರಿ ನಿತೀಶ್ ಜೆ. ಪಾಟೀಲ ತಿಳಿಸಿದ್ದಾರೆ.

ವರದಿಯಾಗಿರುವ 281 ಪ್ರಕರಣಗಳಲ್ಲಿ, ಕೇವಲ ಆರು ಮಂದಿಯಲ್ಲಿ ಮಾತ್ರ ರೋಗದ ಸಾಮಾನ್ಯ ಲಕ್ಷಣಗಳಿವೆ. ಉಳಿದ 275 ಜನರಲ್ಲಿ ರೋಗದ ಲಕ್ಷಣಗಳು ಇಲ್ಲ. ಯಾವುದೇ ಸಾವು ಸಂಭವಿಸಿಲ್ಲ ಎಂದು ಅವರು ಹೇಳಿದ್ದಾರೆ.

ಈಗಾಗಲೇ ಇಲ್ಲಿನ ಎರಡು ವಿದ್ಯಾರ್ಥಿ ನಿಲಯಗಳನ್ನು ಸೀಲ್‌ಡೌನ್ ಮಾಡಲಾಗಿದೆ. ‘ಕಾಲೇಜು ಸುತ್ತ 500 ಮೀ. ವ್ಯಾಪ್ತಿಯಲ್ಲಿರುವ ಶಾಲಾ, ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News