ಹಾಸನ: ಶಾರ್ಟ್ ಸರ್ಕ್ಯೂಟ್ ನಿಂದ ಎರಡು ಅಂಗಡಿಗಳು ಬೆಂಕಿಗಾಹುತಿ

Update: 2021-11-27 05:21 GMT

ಹಾಸನ, ನ.27: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣ ಎರಡು ಅಂಗಡಿಗಳು ಬೆಂಕಿಗಾಹುತಿಯಾದ ಘಟನೆ ಹಾಸನ ನಗರದಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಬೆಂಕಿಯಿಂದ ಬ್ಯಾಂಗಲ್ ಸ್ಟೋರ್ ವೊಂದು ಸಂಪೂರ್ಣ ಬೆಂಕಿಗಾಹುತಿಯಾಗಿದ್ದರೆ, ಪಕ್ಕದ ಚಪ್ಪಲಿ ಅಂಗಡಿ ಭಾಗಶಃ ಹಾನಿಗೀಡಾಗಿದೆ. ಇದರಿಂದ ಸುಮಾರು 12 ಲಕ್ಷ ರೂ. ನಷ್ಟವಾಗಿದೆ ಎಂದು ಅಂಗಡಿ ಮಾಲಕರು ಮಾಹಿತಿ ನೀಡಿದ್ದಾರೆ.

ನಗರದ ಕಸ್ತೂರಬಾ ರಸ್ತೆ, ಜಿ.ಎಲ್. ಆಚಾರ್ಯ ಜ್ಯುವೆಲರ್ಸ್ ಎದುರು ಇರುವ ಬುಡಾನ್ ಎಂಬವರ ಮಾಲಕತ್ವದ ಕೆ.ಎಂ.ಬ್ಯಾಂಗಲ್ಸ್ ಸ್ಟೋರ್, ಹಾಗೂ ಇದಕ್ಕೆ ಹೊಂದಿಕೊಂಡಿರುವ ಮುಹಮ್ಮದ್ ಗೌಸ್  ಎಂಬವರಿಗೆ ಸೇರಿದ ಮೊಹಿದೀನ್ ಫೂಟ್ ವೇರ್ ಶಾರ್ಟ್ ಸರ್ಕ್ಯೂಟ್ ನಿಂದ ಹಾನಿಗೊಳಗಾಗಿರುವ ಅಂಗಡಿಗಳಾಗಿವೆ.

 ಎಂದಿನಂತೆ ರಾತ್ರಿ 10 ಗಂಟೆಗೆ ಅಂಗಡಿ ಬಾಗಿಲು ಹಾಕಿಕೊಂಡು ಮನೆಗೆ ವಾಪಸ್ ಹೋಗಿದ್ದಾರೆ. ಆದರೆ ಬೆಳಗ್ಗಿನ ಜಾವ ಅಂಗಡಿಗಳಿಗೆ ಬೆಂಕಿ ಹತ್ತಿಕೊಂಡಿದೆ. ಇದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಎರಡು ವಾಹನ ಹಾಗೂ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಉಳಿದ ಅಂಗಡಿಗಳಿಗೆ ಹಬ್ಬುವುದನ್ನು ತಡೆದರು. ಆದರೆ ಕೆ.ಎಂ.ಬ್ಯಾಂಗಲ್ಸ್ ಸ್ಟೋರ್ ಬೆಂಕಿಯಿಂದ ಸಂಪೂರ್ಣ ಹಾನಿಗೀಡಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News