40 ಶೇ. ಕಮಿಷನ್ ಆರೋಪ: ಪ್ರಧಾನಿ ಮೋದಿ ಪ್ರಾಮಾಣಿಕರಾಗಿದ್ದರೆ ರಾಜ್ಯ ಸರಕಾರ ವಜಾ ಮಾಡಲಿ: ಸಿದ್ದರಾಮಯ್ಯ

Update: 2021-11-27 08:14 GMT

ಮೈಸೂರು, ನ.27: ರಾಜ್ಯ ಸರ್ಕಾರದ ವಿರುದ್ಧ 40 ಶೇ. ಕಮಿಷನ್ ಆರೋಪ ವಿಚಾರಕ್ಕೆ ಸಂಬಂಧಿಸಿ ಪ್ರಧಾನಿ ಮೋದಿ ಪ್ರಾಮಾಣಿಕರಾಗಿದ್ದರೆ ರಾಜ್ಯ ಸರಕಾರವನ್ನು ವಜಾ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಮೈಸೂರಿನಲ್ಲಿ‌ ಇಂದು ಮಾಧ್ಯಮ ಪ್ರತಿನಿಧಿಗಳ‌ ಜೊತೆ ಅವರು ಮಾತನಾಡುತ್ತಿದ್ದರು.

ಗುತ್ತಿಗೆದಾರರ ಸಂಘದವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಆದ್ರೆ ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಮುಖ್ಯ ಕಾರ್ಯದರ್ಶಿ ತನಿಖೆಗೆ ಆದೇಶ ಮಾಡಿದ್ದಾರೆ. ಆದರೆ ಯಾವ ಇಲಾಖೆ ವಿರುದ್ದ ಭ್ರಷ್ಟಾಚಾರದ ಆರೋಪ ಇದೆಯೋ ಅದೇ ಇಲಾಖೆಯ ಅಧಿಕಾರಿಗಳನ್ನು ತನಿಖೆಗೆ ನೇಮಿಸಿದರೆ ಹೇಗೆ..? ಇದರಿಂದ ಸತ್ಯ ಹೊರಬರಲು ಸಾಧ್ಯವೇ ? ಆದ್ದರಿಂದ ಸುಪ್ರೀಂ ಕೋರ್ಟ್ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಆಗ್ರಹಿಸಿದ್ದೇವೆ ಎಂದರು.

ಒಂದು ಲಕ್ಷ ಗುತ್ತಿಗೆದಾರರು ಸದಸ್ಯರಾಗಿರುವ  ಸಂಘದವರು ಪತ್ರ ಬರೆದಿದ್ದಾರೆ. ಸಂಘದ ಅಧ್ಯಕ್ಷ‌ ಕೆಂಪಣ್ಣ ಸುದ್ದಿಗೋಷ್ಠಿ ನಡೆಸಿ ಈ ಹೇಳಿಕೆ ಕೊಟ್ಟಿದ್ದಾರೆ. ಕೆಂಪಣ್ಣನವರ ಆರೋಪ ಸತ್ಯ 35ರಿಂದ 40 ಶೇ. ಸರಕಾರ ಇದು. ಸಚಿವರು, ಶಾಸಕರು, ಸಂಸದರು ಪರ್ಸೆಂಟೆಜ್ ತೆಗೆದುಕೊಂಡಿದ್ದಾರೆ. ಕೆಂಪಣ್ಣ ಅವರು ಕೊಟ್ಟಿರುವ ಹೇಳಿಕೆಯನ್ನು ಆಧರಿಸಿ ನಾನು ರಾಜ್ಯಪಾಲರಿಗೆ ಕೊಟ್ಟಿದ್ದೇನೆ. ಮೊದಲು ಈ ಸರಕಾರ ವಜಾ ಮಾಡಿ ಅಂತ ಪ್ರಧಾನಿಗೆ ಆಗ್ರಹ ಮಾಡುತ್ತೇನೆ ಎಂದರು.

ಪರ್ಸೆಂಟೆಜ್ ಏನು ತೆಗೆದುಕೊಂಡಿಲ್ಲ ಅಂತ ಸರ್ಕಾರ ಹೇಳುವುದಾರೆ ಕಾರ್ಯದರ್ಶಿ ಬಳಿ ತನಿಖೆ ಮಾಡಿಸುವುದಾಗಿ ಸಿಎಂ ಏಕೆ ಹೇಳಬೇಕಿತ್ತು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರದ ಅವಧಿಯ ಟೆಂಡರ್ ಗಳ ಬಗ್ಗೆಯೂ ತನಿಖೆ ನಡೆಸುವ ಮುಖ್ಯಮಂತ್ರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನಡೆದಿರುವ ಟೆಂಡರ್ ಗಳ ಬಗ್ಗೆಯೂ ತನಿಖೆ ನಡೆಯಲಿ. ಇದಕ್ಕೆ ನಮ್ಮ ಆಕ್ಷೇಪ ಏನೂ ಇಲ್ಲ ಎಂದರು.

ಉಪ್ಪು ತಿಂದವರು ನೀರು ಕುಡಿಯಲೇಬೇಕು. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಲಿ. ಅವರು ಯಾವುದೇ ಪಕ್ಷದವರಾಗಲಿ ಎಂದರು.

ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಹೊಂದಾಣಿಕೆ ಇಲ್ಲ. ನಾವು ಯಾವ ಕ್ಷೇತ್ರದಲ್ಲೂ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳಲ್ಲ. ನಮ್ಮ ಬೆಂಬಲಿತರಿಗೆ ಪಕ್ಷದ ಅಭ್ಯರ್ಥಿಗೆ ಸಿಂಗಲ್ ವೋಟ್ ಹಾಕಲು ಸೂಚನೆ ಕೊಟ್ಟಿದ್ದೇನೆ. ಬಿಜೆಪಿ - ಜೆಡಿಎಸ್ ನಡುವೆ ಒಳ ಒಪ್ಪಂದ ಇದ್ದೇ ಇದೆ. ಈ ಚುನಾವಣೆಯಲ್ಲಿ ಮಾತ್ರ ಅಲ್ಲ. ವಿಧಾನಸಭೆಯ ಎರಡು ಕ್ಷೇತ್ರಗಳಿಗೆ ಇತ್ತೀಚೆಗೆ ನಡೆದ ಉಪ ಚುನಾವಣೆ ಸೇರಿದಂತೆ ಎಲ್ಲ ಚುನಾವಣೆಗಳಲ್ಲೂ ಅವರಿಬ್ಬರೂ ಒಳ ಒಪ್ಪಂದ ಮಾಡಿಕೊಂಡೇ ಚುನಾವಣೆ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಬೆಳಗಾವಿ ವಿಧಾನ ಪರಿಷತ್ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಇರೋದು ಬಿಜೆಪಿಯಲ್ಲಿ. ಅವರು ಪಕ್ಷೇತರವಾಗಿ ಕಣಕ್ಕೆ ಇಳಿದಿರೋದು ಬಿಜೆಪಿಗೆ ವ್ಯತ್ಯಾಸ ಆಗಲಿದೆ. ನಮ್ಮವರು ನಮ್ಮ ಅಭ್ಯರ್ಥಿ ಪರ ಕೆಲಸ ಮಾಡ್ತಿದ್ದಾರೆ. ಲಖನ್ ಜಾರಕಿಹೋಳಿ ಬಿಜೆಪಿಯಲ್ಲೇ ಇದ್ದವರು. ಹೀಗಾಗಿ ಗೊಂದಲ ಇರೋದು ಬಿಜೆಪಿಯಲ್ಲಿ. ಕೊಡಗಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೇ ನೇರ ಹಣಾಹಣಿ ಇದೆ. ನಾವು ಕಳೆದ ಬಾರಿ ಅಲ್ಪ ಮತದಿಂದ ಸೋತಿದ್ದೇವೆ. ಈ ಬಾರಿ ನಮ್ಮ ಅಭ್ಯರ್ಥಿ ಗೆಲ್ಲಿಸಲು ಎಲ್ಲ ಪ್ರಯತ್ನ ಮಾಡುತ್ತೇವೆ ಎಂದವರು ಹೇಳಿದರು.

ಮಾಜಿ ಸಚಿವ ಎ.ಮಂಜು ಕಾಂಗ್ರೆಸ್ ಸೇರುವುದಿಲ್ಲ‌. ಅವರು ಕಾಂಗ್ರೆಸ್‌ಗೆ ಬರುವುದಾಗಿಯೂ ಕೇಳಿಲ್ಲ. ಬಂದರೂ ನಾವು ಸೇರಿಸಿಕೊಳ್ಳುವುದಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News