ರಾಜ್ಯಪಾಲರಿಗೆ ಜೋಗದ ವೈಭವ ತೋರಿಸಲು ಜಲವಿದ್ಯುತ್‌ಗೆ ಮೀಸಲಿಟ್ಟ 200 ಕ್ಯೂಸೆಕ್ ನೀರನ್ನು ಹರಿಬಿಟ್ಟ ಅಧಿಕಾರಿಗಳು!

Update: 2021-11-27 12:58 GMT
ವಿಶ್ವವಿಖ್ಯಾತ ಜೋಗ ಜಲಾಪಾತಕ್ಕೆ ಗುರುವಾರ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ ಭೇಟಿ ನೀಡಿದ್ದರು.

ಶಿವಮೊಗ್ಗ, ನ.27: ರಾಜ್ಯಪಾಲರಿಗೆ ವಿಶ್ವವಿಖ್ಯಾತ ಭೋರ್ಗರೆಯುವ ಜೋಗ ಜಲಾಪಾತ ತೋರಿಸಲು ಕೆಪಿಸಿಎಲ್ ಅಧಿಕಾರಿಗಳು ಕಸರತ್ತು ಮಾಡಿ ಪೇಚಿಗೆ ಸಿಲುಕಿದ ಘಟನೆ ಗುರುವಾರ ನಡೆದಿದೆ. ಜೋಗದ ವೈಭವ ನೋಡಲು ಆಗಮಿಸಿದ್ದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ಗೆ ನಿರಾಸೆಯಾಗುವಂತಾಗಿದೆ.

ಎರಡು ದಿನದ ಶಿವಮೊಗ್ಗ ಪ್ರವಾಸ ಕೈಗೊಂಡಿದ್ದ ರಾಜ್ಯಪಾಲರು ಗುರುವಾರ ಜೋಗ ಜಲಪಾತಕ್ಕೆ ಭೇಟಿ ನೀಡಲು ನಿರ್ಧರಿಸಿದ್ದರು. ಬುಧವಾರ ಶಿವಮೊಗ್ಗ ಜಿಲ್ಲೆಗೆ ಆಗಮಿಸಿದ್ದ ರಾಜ್ಯಪಾಲರು, ಕೆಲ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ನಂತರ ಗುರುವಾರ ಜೋಗ ಜಲಪಾತಕ್ಕೆ ಭೇಟಿ ನೀಡುವುದಾಗಿ ತಿಳಿಸಿ, ಜಲಪಾತದ ಬಳಿಯೇ ಇರುವ ಬಾಂಬೆ ಗೆಸ್ಟ್ ಹೌಸ್ ನಲ್ಲಿ ರಾತ್ರಿ ತಂಗಿದ್ದರು. ಗುರುವಾರ ಬೆಳಗ್ಗೆಯೇ ಜಲಪಾತಕ್ಕೆ ಭೇಟಿ ನೀಡಿದ್ದರು.

ರಾಜ್ಯಪಾಲರಿಗೆ ಜೋಗದ ವಿಹಂಗಮ ನೋಟ ತೋರಿಸುವುದಕ್ಕಾಗಿ ಜಲವಿದ್ಯುತ್‌ಗೆ ಮೀಸಲಿಡಲಾಗಿದ್ದ 200 ಕ್ಯೂಸೆಕ್ ನೀರನ್ನು ಲಿಂಗನಮಕ್ಕಿ ಜಲಾಶಯದಿಂದ ಗುರುವಾರ ಬೆಳಗ್ಗೆ ಹರಿಯಬಿಡಲಾಗಿತ್ತು. ರಾಜ್ಯಪಾಲರು ಜೋಗಕ್ಕೆ ಬಂದು 10 ನಿಮಿಷಗಳ ಕಾಲ ಇದ್ದು ಪ್ರಕೃತಿಯನ್ನು ಅಸ್ವಾದಿಸಿದರು. ಆದರೆ ಜಲಪಾತ ಧುಮ್ಮಿಕ್ಕಿ ಹರಿಯಲೇ ಇಲ್ಲ. ಅವರು ಬಂದು ಹೋದ ಸುಮಾರು ಅರ್ಧ ಗಂಟೆಯ ಬಳಿಕ ರಾಜಾ, ರಾಣಿ, ರಾಕೆಟ್, ರೋರರ್ ಧುಮ್ಮಿಕ್ಕಲು ಆರಂಭಿಸಿದ್ದವು. ಜಲಾಶಯದಿಂದ ಬಿಟ್ಟ ನೀರು ಜಲಪಾತದ ಬಳಿ ತಲುಪುವ ಸಮಯವನ್ನು ಅಂದಾಜಿಸುವಲ್ಲಿ ಅಧಿಕಾರಿಗಳು ಮಾಡಿದ ಎಡವಟ್ಟೇ ಇದಕ್ಕೆ ಕಾರಣ ಎನ್ನಲಾಗಿದೆ.

ಲಿಂಗನಮಕ್ಕಿಯಿಂದ ಜಲಪಾತ ಸುಮಾರು 12 ಕಿ.ಮೀ. ದೂರ ಇದೆ. ಇಷ್ಟು ದೂರ ನೀರು ಕ್ರಮಿಸಲು ಸುಮಾರು ಆರು ಗಂಟೆಗಳು ಬೇಕು. ಜಲಾಶಯದಿಂದ ಬಿಟ್ಟ ನೀರು ಜಲಪಾತ ತಲುಪದೆ ಕ್ಷೀಣ ಸ್ಥಿತಿಯಲ್ಲಿದ್ದ ಜಲಪಾತವನ್ನು ನೋಡುವುದಕ್ಕಷ್ಟೇ ಗೆಹ್ಲೋಟ್ ತೃಪ್ತಿಪಡಬೇಕಾಯಿತು.

ಒಟ್ಟಿನಲ್ಲಿ  ಅಧಿಕಾರಿಗಳ ಎಡವಟ್ಟಿನಿಂದ ಧುಮ್ಮುಕ್ಕಿ ಹರಿಯುವ ಜೋಗವನ್ನು ನೋಡಲು ರಾಜ್ಯಪಾಲರಿಗೆ ಅವಕಾಶ ಸಿಗದಂತಾಯಿತು.

ಈ ನಡುವೆ ಯಾವುದೇ ಮಾಹಿತಿ ನೀಡದೆ ಅಧಿಕಾರಿಗಳು ಹೆಚ್ಚಿನ ನೀರು ಹರಿಯಬಿಟ್ಟಿದ್ದು, ಸ್ಥಳೀಯರಲ್ಲಿ ಆತಂಕವನ್ನು ಸೃಷ್ಟಿಸಿತ್ತು. ಹೆಚ್ಚುವರಿ ನೀರು ಬಿಡುವುದಕ್ಕೂ ಮುನ್ನ ಅಧಿಕಾರಿಗಳು ಜನರಿಗೆ ಮಾಹಿತಿ ನೀಡಬೇಕಿತ್ತು ಎಂದು ಅಂಬುಗಳಲೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News