ಪಕ್ಷೇತರ ಅಭ್ಯರ್ಥಿಯಾಗಿ ಸಹೋದರ ಲಖನ್ ಸ್ಪರ್ಧೆ ಖುಷಿ ತಂದಿದೆ ಎಂದ ಮಾಜಿ ಸಚಿವ ರಮೇಶ್ ಜಾರಕಿಹೊಳಿ

Update: 2021-11-27 12:13 GMT

ಬೆಳಗಾವಿ, ನ. 27: `ಸಹೋದರ ಲಖನ್ ಜಾರಕಿಹೊಳಿ ಅವರನ್ನ ಪಕ್ಷೇತರ ಅಭ್ಯರ್ಥಿಯಾಗಿ ನಾನು ನಿಲ್ಲಿಸಿದ್ದೀನಿ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಲಖನ್ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ನನಗೆ ಬಹಳ ಖುಷಿ ತಂದಿದೆ' ಎಂದು ಮಾಜಿ ಸಚಿವ ಹಾಗೂ ಲಖನ್ ಸಹೋದರ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.

ಶನಿವಾರ ಜಿಲ್ಲೆಯ ಹೀರೆಬಾಗೇವಾಡಿಯಲ್ಲಿ ಬಿಜೆಪಿ ಅಭ್ಯರ್ಥಿಪರ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, `ಲಖನ್ ಜಾರಕಿಹೊಳಿ ಸ್ಪರ್ಧಿಸಿದ್ದು ಒಳ್ಳೆಯದೆ ಆಯಿತು. ಇಲ್ಲದೆ ಇದ್ದರೆ ಅವಿರೋಧ ಆಯ್ಕೆ ಆಗುತ್ತಿತ್ತು. ಲಖನ್ ಜಾರಕಿಹೊಳಿ ಧೈರ್ಯ ಮಾಡಿ ಸ್ಪರ್ಧಿಸಿರುವುದರಿಂದ ಚುನಾವಣೆ ನಡೆಯುತ್ತಿದೆ ಎಂದು ವಿವರಣೆ ನೀಡಿದರು.

ಮತ್ತೊಬ್ಬ ತಯಾರಾಗ್ತಾನೆ: `ದೇವರು ಮೇಲೆ ಇದ್ದಾನೆ. ಎಲ್ಲರಿಗೂ ಸೊಕ್ಕು ಬಂದಾಗ ಯಾರೋ ಒಬ್ಬರು ತಯಾರು ಆಗ್ತಾರೆ. ನನಗೆ ಸೊಕ್ಕು ಬಂದ್ರೆ ಮತ್ತೊಬ್ಬ ತಯಾರಾಗ್ತಾನೆ. ಜನ ಸೂಕ್ತ ಸಂದರ್ಭದಲ್ಲಿ ತೀರ್ಮಾನ ಕೈಗೊಳ್ಳಲಿ. ನಾವು ಯಾವುದೇ ಜಾತಿ ಆಧಾರದ ಮೇಲೆ ಇಲ್ಲ, ನಮ್ಮದು ಮಾನವ ಜಾತಿ, ಬಸವಣ್ಣನವರ ತತ್ವ-ಸಿದ್ಧಾಂತ ಮೇಲೆ ಹೋಗುತ್ತೇವೆ' ಎಂದು ರಮೇಶ್ ಜಾರಕಿಹೊಳಿ ನುಡಿದರು.

ನಿಮ್ಮ ಆಶೀರ್ವಾದ ಸದಾ ಇರಲಿ. ಮೊದಲು ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠಗೆ ಮತ ಹಾಕಬೇಕು ಎರಡನೇ ಮತ ಯಾರಿಗೆ ಹಾಕಬೇಕು ಎಂದು ಅತಿ ಶೀಘ್ರದಲ್ಲಿ ಹೇಳುತ್ತೇನೆ ಎಂದ ಅವರು, ಮಹಾಂತೇಶ್ ಕವಟಗಿಮಠ ಅವರನ್ನು ಗೆಲ್ಲಿಸುವ ಮೂಲಕ ಲಿಂಗಾಯತರು ಗುರುಗಳು, ಸ್ವಾಮಿಗಳನ್ನು ತರುವ ಕೆಲಸ ಮಾಡೋಣ ಎಂದು ಹೇಳಿದರು.

ಕೆಎಲ್‍ಇ ಸಂಸ್ಥೆ ದೊಡ್ಡ ಲಿಂಗಾಯತರ ಮೂಗು. ಅದರ ನಿರ್ದೇಶಕರು ಅವರು. ಈಗ ಲಿಂಗಾಯತ ಯಾರು ಇದ್ದಾರೆ. ಅವರ ವ್ಯಕ್ತಿತ್ವದ ಬಗ್ಗೆ ವಿಚಾರ ಮಾಡಿ. ವೈಯಕ್ತಿಕ ನಾನು ಯಾರ ಬಗ್ಗೆಯೂ ಮಾತನಾಡುವುದಿಲ್ಲ, ನೀವು ದಯವಿಟ್ಟು ವಿಚಾರ ಮಾಡಿ, ಒಳ್ಳೆಯ ವ್ಯಕ್ತಿತ್ವದವರಿಗೆ ಮತ ನೀಡಿ ಎಂದು ರಮೇಶ್ ಜಾರಕಿಹೊಳಿ ಪರೋಕ್ಷವಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಆಕ್ರೋಶ ಹೊರ ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News