ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಶೇ.30ರಷ್ಟು ಅರಣ್ಯ ನಿರ್ಮಿಸಬೇಕು: ಸಚಿವ ಉಮೇಶ್ ಕತ್ತಿ

Update: 2021-11-27 11:58 GMT
ಸಚಿವ ಉಮೇಶ್ ಕತ್ತಿ

ಬೆಳಗಾವಿ, ನ. 27: ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಶೇ.30ರಷ್ಟು ಅರಣ್ಯ ನಿರ್ಮಿಸಬೇಕು ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ಇಂದಿಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಶನಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಒಂದು ವೇಳೆ ಅರಣ್ಯ ನಿರ್ಮಿಸಲು ಭೂಮಿ ಇಲ್ಲದ ಜಿಲ್ಲೆಗಳು ಸಂಬಂಧಪಟ್ಟ ಕಂದಾಯ ಇಲಾಖೆ, ಜಲ ಸಂಪನ್ಮೂಲ ಇಲಾಖೆ ಸೇರಿದಂತೆ ಬೇರೆ ಇಲಾಖೆಗೆ ಒಳಪಡುವ ಭೂಮಿಯನ್ನು ಅರಣ್ಯ ಇಲಾಖೆಗೆ ವಿಲೀನ ಮಾಡದೆಯೇ ಆ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಗಿಡಗಳನ್ನು ಬೆಳೆಸಿ ಎಂದು ತಿಳಿಸಿದ್ದಾರೆ.

ರಾಜ್ಯದ ಅರಣ್ಯ ಭೂಮಿಯನ್ನು ರಕ್ಷಿಸುವುದರ ಜೊತೆಗೆ ವರ್ಷದಿಂದ ವರ್ಷಕ್ಕೆ ಉತ್ತಮ ಪರಿಸರ ನಿರ್ಮಾಣ ಮಾಡುವುದು ಅರಣ್ಯ ಇಲಾಖೆಯ ಕರ್ತವ್ಯ. ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಶೇ.70ರಷ್ಟು ಅರಣ್ಯ ಇದೆ. ಆದರೆ ವಿಜಯಪುರ, ಬೀದರ್, ಕಲಬುರಗಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಶೇ.10ಕ್ಕಿಂತಲೂ ಕಡಿಮೆ ಅರಣ್ಯ ಭೂಮಿ ಇದೆ ಎಂದು ಉಮೇಶ್ ಕತ್ತಿ ಕಳವಳ ವ್ಯಕ್ತಪಡಿಸಿದ್ದಾರೆ.

ಕಡಿಮೆ ಅರಣ್ಯ ಇರುವ ಜಿಲ್ಲೆಗಳಲ್ಲಿ ಹವಾಮಾನ ವೈಪರೀತ್ಯವಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಹೀಗಾಗಿ ಅರಣ್ಯ ಇಲಾಖೆಯವರು ಹೆಚ್ಚಿನ ಮುತುವರ್ಜಿ ವಹಿಸುವುದು ಅವಶ್ಯಕವಾಗಿದೆ. ನಮಗೆ ಗೊತ್ತಿಲ್ಲದಂತೆ ಮರಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಲೇ ಇದೆ. ಇದರಿಂದ ಆಮ್ಲಜನಕ ಪ್ರಮಾಣ ಕುಸಿಯುತ್ತಿದೆ. ಈಗ ನಮ್ಮ ಯುವಕರು ನೋಡುತ್ತಿರುವ ಸುಂದರವಾದ ಅರಣ್ಯ ಪ್ರದೇಶವನ್ನು ನಮ್ಮ ಮುಂದಿನ ಪೀಳಿಗೆ ನೋಡುವಂತಾಗಬೇಕು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News