ಕೇರಳ, ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ: ರಾಜ್ಯ ಸರಕಾರ ಸೂಚನೆ

Update: 2021-11-27 14:44 GMT

ಬೆಂಗಳೂರು, ನ.27: ರಾಜ್ಯದಲ್ಲಿ ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿರುವ ರಾಜ್ಯ ಸರಕಾರವು, ಕೇರಳ ಮತ್ತು ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲು ನಿರ್ಧರಿಸಿದೆ. ಅಲ್ಲದೆ, ಕೇರಳ ಮತ್ತು ಮಹಾರಾಷ್ಟ್ರದಿಂದ ರಾಜ್ಯ ಪ್ರವೇಶಿಸುವವರಿಗೆ ಆರ್‍ಟಿಪಿಸಿಆರ್ ನೆಗೆಟಿವ್ ರಿಪೆÇೀರ್ಟ್ ಕಡ್ಡಾಯಗೊಳಿಸಿದೆ.

ಶನಿವಾರ ಸಂಜೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೋವಿಡ್-19 ನಿಯಂತ್ರಣದ ಕುರಿತು ಬಿಬಿಎಂಪಿ ಸೇರಿದಂತೆ ಬೆಂಗಳೂರು ನಗರ ಜಿಲ್ಲೆ, ಧಾರವಾಡ, ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಕೊಡಗು, ಮೈಸೂರು ಸೇರಿ ಏಳು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೊ ಸಂವಾದ ನಡೆಸಿದರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಿಗಿ ವಿಚಕ್ಷಣೆ ಕೈಗೊಳ್ಳುವುದು, ಗಡಿ ಜಿಲ್ಲೆಗಳಲ್ಲಿ ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಜೊತೆಗೆ ಇತರ ಇಲಾಖೆಯ ಸಹಕಾರವನ್ನು ಪಡೆದು ಮೂರು ಶಿಫ್ಟ್‍ಗಳಲ್ಲಿ ತಪಾಸಣೆ ಕೆಲಸ ಮಾಡುವಂತೆ ದಕ್ಷಿಣ ಕನ್ನಡ, ಚಾಮರಾಜನಗರ, ಮೈಸೂರು ಹಾಗೂ ಕೊಡಗು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

16 ದಿನಗಳ ಹಿಂದೆ ಕೇರಳದಿಂದ ಬಂದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಆರ್‍ಟಿಪಿಸಿಆರ್ ಪರೀಕ್ಷೆ ಮಾಡಿಸಬೇಕು. ಹಾಸ್ಟೆಲ್‍ಗಳಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳಿಗೆ ನೆಗೆಟಿವ್ ರಿಪೋರ್ಟ್ ಬಂದ ನಂತರದ 7ನೇ ದಿನಕ್ಕೆ ಮತ್ತೊಮ್ಮೆ ಆರ್‍ಟಿಪಿಸಿಆರ್ ಪರೀಕ್ಷೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಅಲ್ಲದೆ, ಕೇರಳ ಮತ್ತು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸುವವರನ್ನು ಕಡ್ಡಾಯವಾಗಿ ಪರೀಕ್ಷೆಗೊಳಪಡಿಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ಹೊಟೇಲು, ರೆಸ್ಟೋರೆಂಟ್‍ಗಳು, ಸಿನಿಮಾ ಹಾಲ್‍ಗಳು, ಈಜುಗೊಳ, ಸಾರ್ವಜನಿಕ ಗ್ರಂಥಾಲಯ, ಮೃಗಾಲಯಗಳು ಮತ್ತು ಜೈವಿಕ ಉದ್ಯಾನವನಗಳಲ್ಲಿ ಕೆಲಸ ಮಾಡುವವರು ಕಡ್ಡಾಯವಾಗಿ ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿರಬೇಕು. ವೈದ್ಯಕೀಯ ಕಾಲೇಜು ಮತ್ತು ನಸಿರ್ಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಅಶೋಕ್ ಹೇಳಿದರು.

ಸರಕಾರಿ ಕಚೇರಿಗಳಲ್ಲಿ, ಹೊಟೇಲ್‍ಗಳಲ್ಲಿ ಹಾಗೂ ಮಾಲ್‍ಗಳಲ್ಲಿ ಕೆಲಸ ಮಾಡುವವರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆಯಬೇಕು. ಸರಕಾರಿ ಕಚೇರಿ ಹಾಗೂ ಮಾಲ್‍ಗಳಲ್ಲಿಯೇ ಲಸಿಕೆ ನೀಡಲು ವ್ಯವಸ್ಥೆ ಕಲ್ಪಿಸಬೇಕು. ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆಗಳನ್ನು ತೀವ್ರಗೊಳಿಸಬೇಕು. ಕೋವಿಡ್ ನೆಗಟಿವ್ ಇದ್ದವರಿಗೆ ಮಾತ್ರ ನಗರ ಪ್ರವೇಶಕ್ಕೆ ಅನುಮತಿ ನೀಡಬೇಕು. ಕೋವಿಡ್ ಪಾಸಿಟಿವ್ ಇದ್ದವರಿಗೆ ಚಿಕಿತ್ಸೆಗೆ ಆಸ್ಪತ್ರೆಗೆ ಕಳುಹಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.

ಶಾಲಾ ಕಾಲೇಜುಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕು. ಕೇರಳ ಗಡಿ ಭಾಗದಲ್ಲಿನ ಜಿಲ್ಲಾಧಿಕಾರಿಗಳು ತಪಾಸಣೆ ನಡೆಯುವ ಸ್ಥಳಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಬೇಕು. ಅಲ್ಲದೆ, ಬೇರೆ ಬೇರೆ ಜಿಲ್ಲೆಗಳಲ್ಲಿ ಶಾಲಾ, ಕಾಲೇಜುಗಳಲ್ಲಿ ಆಯೋಜಿಸಿರುವ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಮುಂದೂಡಬೇಕು. ಎಲ್ಲ ಶಾಲಾ-ಕಾಲೇಜುಗಳಿಗೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿಗಳನ್ನು ನೀಡಲಾಗುವುದು ಎಂದು ಅಶೋಕ್ ಹೇಳಿದರು.

ಚುನಾವಣಾ ಪ್ರಚಾರ ಸಭೆಗಳು, ಮದುವೆ ಸಮಾರಂಭಗಳಲ್ಲಿ ಶೇ.95ರಷ್ಟು ಮಂದಿ ಮಾಸ್ಕ್ ಧರಿಸುತ್ತಿಲ್ಲ. ಇಲ್ಲಿಯೂ ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗುವುದು. ತಜ್ಞರ ಪ್ರಕಾರ ರೂಪಾಂತರಿ ವೈರಸ್, ಈಗಿರುವ ವೈರಸ್‍ಗಿಂತ ಐದುಪಟ್ಟು ಹೆಚ್ಚು ವೇಗವಾಗಿ ಹರಡುವ ಸಾಮಥ್ರ್ಯ ಹೊಂದಿದೆ. ಆದುದರಿಂದ, ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳುವವರು ಎಚ್ಚರಿಕೆಯಿಂದ ಇರಬೇಕು. ಚುನಾವಣಾ ಪ್ರಚಾರ ಸಭೆಗಳಿಗೆ ಯಾವುದೆ ವಿನಾಯಿತಿ ನೀಡಲ್ಲ ಎಂದು ಅವರು ಹೇಳಿದರು.

ಕ್ರಿಸ್‍ಮಸ್, ಹೊಸ ವರ್ಷಾಚರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ನೇತೃತ್ವದಲ್ಲಿ ಮತ್ತೊಂದು ಸಭೆ ನಡೆಸುತ್ತೇವೆ. ಫ್ರಂಟ್ ಲೈನ್ ವಾರಿಯರ್ಸ್‍ಗಳಿಗೆ ಬೂಸ್ಟರ್ ಡೋಸ್‍ಗಳನ್ನು ನೀಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದೇವೆ. ಕೇಂದ್ರ ಸರಕಾರ ಬೂಸ್ಟರ್ ಡೋಸ್ ಬಗ್ಗೆ ತೀರ್ಮಾನ ಕೈಗೊಂಡರೆ, ಆದ್ಯತೆಯ ಮೇರೆಗೆ ಫ್ರಂಟ್‍ಲೈನ್ ವಾರಿಯರ್ಸ್‍ಗಳಿಗೆ ನೀಡಲಾಗುವುದು ಎಂದು ಅಶೋಕ್ ತಿಳಿಸಿದರು.

ಸಭೆಯಲ್ಲಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ಆರೋಗ್ಯ ಇಲಾಖೆ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್, ಆಯುಕ್ತ ರಣದೀಪ್, ಕೋವಿಡ್ ತಜ್ಞರ ಸಮಿತಿ ಮುಖ್ಯಸ್ಥ ಡಾ.ಸುದರ್ಶನ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News