ಮುಸ್ಲಿಂ ಸಮುದಾಯದ ಶೈಕ್ಷಣಿಕ ಕಾಂತಿಯೇ ರಾಜ್ಯ ವಕ್ಫ್ ಬೋರ್ಡ್ ಮೊದಲ ಆಧ್ಯತೆ: ಶಾಫಿ ಸಅದಿ

Update: 2021-11-27 14:49 GMT

ಚಿಕ್ಕಮಗಳೂರು, ನ.27: ಶಿಕ್ಷಣವೇ ಇಸ್ಲಾಂನ ಜೀವವಾಗಿದ್ದು, ಸಮುದಾಯದ ಜನರು ಶೈಕ್ಷಣಿಕ ಪ್ರಗತಿಯಲ್ಲಿ ತೀರಾ ಹಿಂದುಳಿದಿರುವುದರಿಂದಾಗಿಯೇ ಮುಸ್ಲಿಂ ಸಮುದಾಯ ಎಲ್ಲ ಕ್ಷೇತ್ರಗಳಲ್ಲೂ ಹಿಂದುಳಿಯುವಂತಾಗಿದೆ. ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ರಾಜ್ಯ ಸರಕಾರದ ನೆರವಿನೊಂದಿಗೆ ರಾಜ್ಯಾದ್ಯಂತ ಸಮುದಾಯದವರ ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯುವ ಮೂಲಕ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಆಧ್ಯತೆ ನೀಡಲಿದೆ ಎಂದು ವಕ್ಫ್ ಬೋರ್ಡ್ ನೂತನ ಅಧ್ಯಕ್ಷ ಮೌಲಾನ ಶಾಫಿ ಸಅದಿ ಹೇಳಿದ್ದಾರೆ.

ಶನಿವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕೋಟ್ಯಂತರ ರೂ. ಮೌಲ್ಯದ ಆಸ್ತಿಗಳನ್ನು ಹೊಂದಿರುವ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಕೋಟ್ಯಂತರ ರೂ. ಆದಾಯ ಹೊಂದಿದ್ದರೂ ಸಮುದಾಯದ ಏಳಿಗೆಗಾಗಿ ಇದರ ಸದ್ಬಳಕೆ ಸಮರ್ಪಕವಾಗಿ ಆಗದಿರುವುದು ಬೇಸರದ ಸಂಗತಿಯಾಗಿದೆ. ಮಂಡಳಿಯ ಆದಾಯವನ್ನು ಸಮುದಾಯದ ಏಳಿಗೆ ನಿಟ್ಟಿನಲ್ಲಿ ಸದ್ಬಳಕೆ ಮಾಡುವುದು, ಭ್ರಷ್ಟಾಚಾರ ಮುಕ್ತ ವಕ್ಫ್ ಬೋರ್ಡ್ ಮಾಡುವುದು ತನ್ನ ಗುರಿಯಾಗಿದೆ ಎಂದರು.

ದೇಶದ ಜನಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ ಶೇ.15ರಷ್ಟಿದ್ದರೂ ಸಮುದಾಯದ ಶೈಕ್ಷಣಿಕ ಪ್ರಗತಿ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಏಳಿಗೆಯಾಗಿಲ್ಲ. ಶೈಕ್ಷಣಿಕವಾಗಿ ಸಮುದಾಯ ತೀರಾ ಹಿಂದುಳಿದಿರುವ ಕಾರಣಕ್ಕೆ ಈ ಸಮುದಾಯ ಆರ್ಥಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ ಹಿಂದುಳಿಯುವಂತಾಗಿದೆ ಎಂದ ಅವರು, ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಪ್ರಗತಿ ಕೇವಲ ಶೇ.6ರಷ್ಟಿದ್ದು, ಇಂತಹ ಕಳಪೆ ಶೈಕ್ಷಣಿಕೆ ಪ್ರಗತಿಯಿಂದಾಗಿ ಸರಕಾರದ ಉನ್ನತ ಹುದ್ದೆಗಳ ಸ್ಥಾನ ಅಲಂಕರಿಸುವಲ್ಲಿ ಸಮುದಾಯದವರಿಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪ್ರತೀ ಮುಸ್ಲಿಮನ ಮುಖ್ಯ ಗುರಿಯೇ ಶಿಕ್ಷಣವಾಗಬೇಕು. ಮುಸ್ಲಿಂ ಸಮುದಾಯದ ಪ್ರತಿಯೊಬ್ಬರೂ ತಮ್ಮ ಮಕ್ಕಳ ಉನ್ನತ ಶಿಕ್ಷಣದ ಕನಸು ಕಂಡು ಅದರ ಸಾಕಾರಕ್ಕೆ ಪಣತೊಡಬೇಕೆಂದು ಅವರು ಕರೆ ನೀಡಿದರು.

ಮುಸ್ಲಿಮ್ ಸಮುದಾಯ ರಾಜ್ಯದಲ್ಲಿ ಶೈಕ್ಷಣಿಕವಾಗಿ ಹಿಂದುಳಿದಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಮುದಾಯದ ಶೈಕ್ಷಣಿಕ ಕ್ರಾಂತಿಯೇ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್‍ನ ಮೊದಲ ಆಧ್ಯತೆಯಾಗಿದ್ದು, ಇದಕ್ಕಾಗಿ ರಾಜ್ಯಾದ್ಯಂತ ಶೈಕ್ಷಣಿಕ ಸಂಸ್ಥೆಗಳ ಆರಂಭಕ್ಕೆ ಕ್ರಮವಹಿಸಲಾಗುವುದು. ಇದರೊಂದಿಗೆ ಸಮುದಾಯದವರ ಆರೋಗ್ಯ, ವಿಧವೆಯರ ಕಲ್ಯಾಣ, ಆರ್ಥಿಕವಾಗಿ ಹಿಂದುಳಿದವರಿಗೆ ನೆರವು ಕಲ್ಪಿಸುವುದು, ಇಮಾಮ್‍ಗಳ ಪಿಂಚಣಿ ಹೆಚ್ಚಳದಂತಹ ಕಲ್ಯಾಣ ಕಾರ್ಯಕ್ರಮಗಳಿಗೆ ಆಧ್ಯತೆ ನೀಡಲಾಗುವುದು. ಸಮುದಾಯದ ಜನರು ವಕ್ಫ್ ಬೋರ್ಡ್ ಹಾಗೂ ಸರಕಾರದ ಸೌಲಭ್ಯಗಳನ್ನು ಪಡೆದು ಶೈಕ್ಷಣಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಲು ಇಚ್ಛಾಶಕ್ತಿ ಪ್ರದರ್ಶಿಸಬೇಕೆಂದರು.

ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಸುಮಾರು 35 ಸಾವಿರ ಸಂಸ್ಥೆಗಳ 45 ಸಾವಿರ ಆಸ್ತಿಗಳನ್ನು ಹೊಂದಿದ್ದು, ಮಂಡಳಿಯ ಆದಾಯವನ್ನು ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ ವಿನಿಯೋಗಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದ ಅವರು, ರಾಜ್ಯಾದ್ಯಂತ ವಕ್ಫ್ ಬೋರ್ಡ್‍ನ ಆಸ್ತಿಗಳ ಒತ್ತುವರಿ, ಕಬಳಿಕೆಯಾಗಿದ್ದು, ಇನ್ನು ಕೆಲ ಆಸ್ತಿಗಳ ವಿವಾದ ನ್ಯಾಯಾಲಯದ ಮೆಟ್ಟಿಲೇರಿವೆ. ಇವುಗಳನ್ನು ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದರು.

ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ರಿಯಾಝ್ ಖಾನ್ ಮಾತನಾಡಿ, ದೇಶದ ರಕ್ಷಣಾ ಇಲಾಖೆ, ರೈಲ್ವೆ ಇಲಾಖೆ ಹೊರತು ಪಡಿಸಿ ವಕ್ಫ್ ಬೋರ್ಡ್ ಶ್ರೀಮಂತಿಕೆಯಲ್ಲಿ 3ನೇ ಸ್ಥಾನದಲ್ಲಿರುವ ಮಂಡಳಿಯಾಗಿದೆ. ಕೋಟ್ಯಂತರ ರೂ. ಮೌಲ್ಯದ ಆಸ್ತಿಪಾಸ್ತಿಗಳನ್ನು ಹೊಂದಿದ್ದರೂ ಮಂಡಳಿಯ ಆದಾಯದ ಸಮುದಾಯದ ಏಳಿಗೆಗಾಗಿ ಸಮರ್ಪಕವಾಗಿ ವಿನಿಯೋಗವಾಗುತ್ತಿಲ್ಲ ಎಂಬುದು ಸತ್ಯವಾದರೂ ವಕ್ಫ್ ಬೋರ್ಡ್ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಭ್ರಷ್ಟಾಚಾರಿಗಳು ಎಂಬ ಆರೋಪ ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದ ಅವರು, ವಕ್ಫ್ ಬೋರ್ಡ್‍ನ ಅಧೀನದಲ್ಲಿರುವ ಸಂಸ್ಥೆಗಳ ಆದಾಯ ಪೂರ್ಣವಾಗಿ ಮಂಡಳಿಗೆ ಬರುವುದಿಲ್ಲ. ಆ ಸಂಸ್ಥೆಗಳು ತಮ್ಮ ಆದಾಯದ ಶೇ.7ರಷ್ಟನ್ನು ಮಾತ್ರ ಮಂಡಳಿಗೆ ನೀಡುತ್ತವೆ. ಮಂಡಳಿಗೆ ವಾರ್ಷಿಕ 5 ಕೋಟಿ ಆದಾಯ ಬರುತ್ತಿದ್ದು, ಮಂಡಳಿಯ ವಾರ್ಷಿಕ ಖರ್ಚೆ 7 ಕೋಟಿಯಷ್ಟಿದೆ. ಇದನ್ನು ಸರಿದೂಗಿಸಲು ಮಂಡಳಿ ಸರಕಾರದ ಬಳಿ ಭಿಕ್ಷೆ ಬೇಡುವ ಪರಿಸ್ಥಿತಿ ಇದೆ ಎಂದರು.

ಸಮಾರಂಭದ ಆರಂಭದಲ್ಲಿ ಉದ್ಘಾಟನಾ ಭಾಷಣ ಮಾಡಿದ ಕೆಎಂಜೆ ಸಂಸ್ಥೆಯ ರಾಜ್ಯ ಸದಸ್ಯ ಅಬೂಬಕರ್ ಸಿದ್ದಿಕ್, ರಾಜ್ಯದ ವಕ್ಫ್ ಬೋರ್ಡ್ ಅಧ್ಯಕ್ಷರಾಗಿರುವ ಇದುವರೆಗಿನ ಎಲ್ಲ ಅಧ್ಯಕ್ಷರೂ ಸಮುದಾಯದ ಏಳಿಗೆಗಾಗಿ ತಮ್ಮದೇ ಕೊಡಗೆ ನೀಡಿದ್ದಾರೆ. ಆದರೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಾಫಿ ಸಅದಿ ಅವರ ಹಿನ್ನೆಲೆ ಸಮುದಾಯದ ಜನತೆ ಅವರ ಮೇಲೆ ನಿರೀಕ್ಷೆಯ ಕಣ್ಣುಗಳನ್ನಿಡುವಂತಾಗಿದೆ, ಈ ಹಿಂದೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿರುವ ಅವರು ಸಮುದಾಯದ ಶೈಕ್ಷಣಿಕ ಹಿನ್ನಡೆ, ಮೌಢ್ಯ, ಬಡತನ, ನಿರುದ್ಯೋಗ, ಕಂದಾಚಾರ, ಅನಾಚಾರಗಳನ್ನು ಕಣ್ಣಾರೆ ಕಂಡು ಸಮುದಾಯದ ಈ ವ್ಯವಸ್ಥೆಯನ್ನು ಬದಲಾಯಿಸುವ ನಿಟ್ಟಿನಲ್ಲಿ ತಮ್ಮದೇ ಸಂಸ್ಥೆಯೊಂದನ್ನು ಹುಟ್ಟು ಹಾಕಿ ಹಗಲಿರುಳು ಶ್ರಮಿಸಿದವರು. ಸ್ವತಃ ಬಡತನದ ಬೇಗೆಯಲ್ಲಿ ಬೆಂದಿರುವ ಅವರು ಸಮುದಾಯದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಧಾರ್ಮಿಕ ಪ್ರಗತಿಗಾಗಿ ಶ್ರಮಿಸಲಿದ್ದಾರೆಂಬ ನಂಬಿಕೆ ಸಮುದಾಯದಲ್ಲಿ ಬಲವಾಗಿ ಬೇರೂರಿದೆ. ಕೋಟ್ಯಂತರ ರೂ. ಮೌಲ್ಯದ ಸಂಪತ್ತು ಹೊಂದಿರುವ ರಾಜ್ಯದ ವಕ್ಫ್ ಬೋರ್ಡ್‍ನ ಆದಾಯವನ್ನು ಸಮುದಾಯದ ಕಲ್ಯಾಣಕ್ಕೆ ಸಮರ್ಪಕವಾಗಿ ಬಳಸಲು ಸಮರ್ಥವಾದ ನಾಯಕತ್ವ ಬೇಕು. ಶಾಫಿ ಸಅದಿ ಈ ನಿಟ್ಟಿನಲ್ಲಿ ಸಮರ್ಥರಿದ್ದು, ರಾಜ್ಯದಾದ್ಯಂತ ಸಮುದಾಯದವರ ಕಲ್ಯಾಣಕ್ಕಾಗಿ ಅವರು ಕಾರ್ಯಪ್ರವೃತ್ತರಾಗಲಿ ಎಂದು ಹಾರೈಸಿದರು.

ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರವೀಶ್ ಕ್ಯಾತನಬೀಡು ಮಾತನಾಡಿದರು. ಮುಸ್ಲಿಮ್ ಜಮಾಅತ್ ಜಿಲ್ಲಾಧ್ಯಕ್ಷ ಮುಹಮ್ಮದ್ ಶಾಹಿದ್ ರಜ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಜರತ್ ಸಯ್ಯೀದ್ ಹುಸೈನ್ ಅಟಕೋಯ ದುವಾ ನೆರವೇರಿಸಿದರು. ವಕ್ಫ್ ಬೋರ್ಡ್ ಸದಸ್ಯರಾದ ಡಾ.ಅನ್ವರ್‍ಬಾಷ, ಯಾಕೂಬ್ ಸಾಹೆಬ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರಾದ ಇದ್ರೀಸ್ ರಜಾ ಬರ್ಕಾತಿ, ಮುಹಿಯುದ್ದೀನ್ ರಶಾದಿ, ಹಾಜಿ ಯೂಸೂಫ್, ಟಿ.ಎಂ.ನಾಸಿರ್, ಕೆ.ಪಿ.ಅಬೂಬಕರ್, ಬಿ.ಎಸ್.ಮುಹಮ್ಮದ್, ಆಬಿದ್ ಸಖಾಫಿ, ಆರಿಫ್ ಅಲಿಖಾನ್ ಸಖಾಫಿ, ಅಬ್ದುಲ್ ರಝಾಕ್, ಶಾಕಿರ್ ಮುನ್ನಾ, ಇರ್ಷಾದ್ ರಜಾ, ಯೂಸೂಫ್ ರಜ್ವಿ, ಜಾಕಿರ್ ಹುಸೈನ್, ಫೈರೋಜ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ವಕ್ಫ್ ಬೋರ್ಡ್‍ನ ಆಸ್ತಿಗಳ ಕಬಳಿಕೆಯಾಗಿದ್ದು, ಇವುಗಳನ್ನು ಉಳಿಸಿಕೊಳ್ಳುವುದು ಸಮುದಾಯದ ಎಲ್ಲರ ಕರ್ತವ್ಯವಾಗಿದೆ. ಅಂತೆಯೇ ವಕ್ಫ್ ಬೋರ್ಡ್‍ನ ಆದಾಯವನ್ನು ಸಮುದಾಯ ಕಲ್ಯಾಣಕ್ಕೆ ಸಮರ್ಪಕವಾಗಿ ವಿನಿಯೋಗಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕಿದೆ. ನೂತನ ಅಧ್ಯಕ್ಷರು ಈ ನಿಟ್ಟಿನಲ್ಲಿ ಕ್ರಮವಹಿಸಲಿದ್ದಾರೆಂಬ ವಿಶ್ವಾಸ ಇದೆ. ರಾಜ್ಯದಲ್ಲಿ ಇತರ ಸಮುದಾಯಗಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿರುವ ಕಾರಣಕ್ಕೆ ವಿಧಾನಸಭೆಯಲ್ಲಿ ಆ ಸಮುದಾಯಗಳ ಪ್ರತಿನಿಧಿಗಳ ಸಂಖ್ಯೆ 100 ಮೀರಿದೆ. ಮುಸ್ಲಿಮ್ ಸಮುದಾಯ ಶೈಕ್ಷಣಿಕವಾಗಿ ಹಿಂದುಳಿದಿರುವ ಕಾರಣಕ್ಕೆ ಸಮುದಾಯದ ಶಾಸಕರು, ಮಂತ್ರಿಗಳ ಸಂಖ್ಯೆ 7ರ ಗಡಿ ದಾಟಿಲ್ಲ. ಇನ್ನಾದರೂ ಸಮುದಾಯ ಶೈಕ್ಷಣಿಕ ಸಾಧನೆಗೆ ಆಧ್ಯತೆ ನೀಡಬೇಕು.

- ರಿಯಾಝ್ ಖಾನ್, ರಾಜ್ಯ ವಕ್ಫ್ ಬೋರ್ಡ್ ಸದಸ್ಯ

ಸಮುದಾಯದ ಜನತೆ ಇತರ ಸಮುದಾಯಗಳ ಜನರೊಂದಿಗೆ ಸಾಮರಸ್ಯ, ಸೌಹಾರ್ದದಿಂದ ಬದುಕುವಂತಹ ವಾತಾವಣವನ್ನು ಸೃಷ್ಟಿಸಬೇಕು. ಇದಕ್ಕಾಗಿ ಸಹಿಷ್ಣತೆಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಕೋಮುಗಲಭೆಗಳಿಗೆ ಕಿಂಚಿತ್ ಅವಕಾಶ ನೀಡದೇ ಸಮುದಾಯದ ಮುಖ್ಯ ಗುರಿ ಶೈಕ್ಷಣಿ, ಸಾಮಾಜಿಕ, ಆರ್ಥಿಕ, ರಾಜಕೀಯ, ದಾರ್ಮಿಕ ಪ್ರಗತಿಯೇ ಆಗಿರಬೇಕು.
 
- ಶಾಫಿ ಸಅದಿ, ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News