ಪಂಚಾಯತ್ ಚುನಾವಣೆ: ಮೃತ ವ್ಯಕ್ತಿಗೆ ಮತ ಹಾಕಿ ಗೆಲ್ಲಿಸಿದ ಗ್ರಾಮಸ್ಥರು!

Update: 2021-11-27 15:28 GMT
ಸಾಂದರ್ಭಿಕ ಚಿತ್ರ

ಜಮುಯಿ, (ಬಿಹಾರ): ಬಿಹಾರದಲ್ಲಿ ಮೃತ ವ್ಯಕ್ತಿಯೊಬ್ಬರು ಬುಧವಾರ ನಡೆದ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಇವರು ತನ್ನ ಸಾವಿನ ಬಳಿಕ ಉಂಟಾದ "ಅನುಕಂಪದ ಅಲೆ"ಯ ಮೇಲೆ ಸವಾರಿ ಮಾಡಿ ಚುನಾವಣೆ ಗೆದ್ದಿದ್ದಾರೆ ಎನ್ನಲಾಗಿದೆ. 

ನವೆಂಬರ್ 24 ರಂದು ನಡೆದ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಅಧಿಕಾರಿಗಳು ಪ್ರಮಾಣಪತ್ರಗಳನ್ನು ಹಸ್ತಾಂತರಿಸುತ್ತಿದ್ದಾಗ  ರಾಜ್ಯದ ರಾಜಧಾನಿ ಪಾಟ್ನಾದಿಂದ ಸುಮಾರು 200 ಕಿಮೀ ದೂರದಲ್ಲಿರುವ ಬಿಹಾರದ ಜಮುಯಿ ಜಿಲ್ಲೆಯಲ್ಲಿ ನಿಜ ಜೀವನದ ದುರಂತವೊಂದು ಬೆಳಕಿಗೆ ಬಂತು.

ಸಮಾರಂಭದಲ್ಲಿ ವಿಜೇತ ಅಭ್ಯರ್ಥಿಗಳಲ್ಲಿ ಒಬ್ಬರಾದ ಸೋಹನ್ ಮುರ್ಮು ಎಲ್ಲಿಯೂ ಕಂಡುಬರಲಿಲ್ಲ. "ಈ ಬಗ್ಗೆ ವಿಚಾರಿಸಿದಾಗ ಮತದಾನ ನಡೆಯುವ ಹದಿನೈದು ದಿನಗಳ ಮೊದಲು ನವೆಂಬರ್ 6 ರಂದು ಮುರ್ಮು ನಿಧನರಾದರು ಎಂದು ನಮಗೆ ತಿಳಿಯಿತು" ಎಂದು ಬ್ಲಾಕ್ ಡೆವಲಪ್ಮೆಂಟ್ ಅಧಿಕಾರಿ (ಬಿಡಿಒ) ರಾಘವೇಂದ್ರ ತ್ರಿಪಾಠಿ ಹೇಳಿದ್ದಾರೆ.

ಮುರ್ಮು ಗೆದ್ದಿರುವ  ದೀಪಾಕರ್ಹರ್ ಪ್ರದೇಶವು ಜಾರ್ಖಂಡ್ನ ರಾಜ್ಯದ ಗಡಿಯುದ್ದಕ್ಕೂ ಇರುವ ದೂರದ ಕುಗ್ರಾಮವಾಗಿದೆ.

ತಮ್ಮ ಪ್ರತಿಸ್ಪರ್ಧಿಯನ್ನು 28 ಮತಗಳಿಂದ ಸೋಲಿಸಿದ ಮುರ್ಮು ಅವರ ಕುಟುಂಬ ಸದಸ್ಯರು ಚುನಾವಣೆಯಲ್ಲಿ ಗೆಲ್ಲುವುದು ಮುರ್ಮು ಅವರ ಕೊನೆಯ ಆಸೆ ಆಗಿತ್ತು  ಎಂದು ಹೇಳಿದರು. 

“ಗ್ರಾಮದ ಯಾವೊಬ್ಬ ನಿವಾಸಿಯೂ ನಮಗೆ ಮಾಹಿತಿ ನೀಡಿಲ್ಲ. ಅವರ ಕೊನೆಯ ಆಸೆಯನ್ನು ಗೌರವಿಸಲು ಅವರೆಲ್ಲರೂ  ಅವರ ಪರವಾಗಿ ಮತ ಚಲಾಯಿಸಿದ್ದಾರೆಂದು ಕಾಣುತ್ತದೆ” ಎಂದು ಬಿಡಿಒ ರಾಘವೇಂದ್ರ ತ್ರಿಪಾಠಿ  ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News