ವಿಧಾನಪರಿಷತ್ ಚುನಾವಣೆ: 15-16 ಸೀಟು ಗೆಲ್ಲುವ ವಿಶ್ವಾಸವಿದೆ; ಶಾಸಕ ಝಮೀರ್ ಅಹ್ಮದ್ ಖಾನ್

Update: 2021-11-27 15:21 GMT

ಬೆಂಗಳೂರು, ನ.27: ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಕನಿಷ್ಠ 15-16 ಸೀಟು ಗೆಲ್ಲುವ ವಿಶ್ವಾಸವಿದೆ ಎಂದು ಕಾಂಗ್ರೆಸ್ ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ವಿಶ್ವಾಸ ವ್ಯಕ್ತಪಡಿಸಿದರು.

ಶನಿವಾರ ಸದಾಶಿವನಗರದಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಪರಿಷತ್ತಿನ ಚುನಾವಣೆಗೆ ಅಗತ್ಯ ಸಿದ್ಧತೆಗಳನ್ನು ಪಕ್ಷ ಮಾಡಿಕೊಂಡಿದೆ. ಎಲ್ಲ ಕಡೆ ನಮ್ಮ ಅಭ್ಯರ್ಥಿಗಳಿಗೆ ಉತ್ತಮ ಸ್ಪಂದನೆ ಸಿಗುತ್ತಿದೆ ಎಂದರು.

25 ಸ್ಥಾನಗಳಲ್ಲಿ ನಮ್ಮ ಅಂದಾಜಿನ ಪ್ರಕಾರ 15-16 ಕಡೆ ನಮ್ಮ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ. ರಾಜ್ಯದ ಜನ ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇಟ್ಟಿದ್ದು, ನಮ್ಮ ಅಭ್ಯರ್ಥಿಗಳು ಮತದಾರರ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ನನ್ನ ಮತಕ್ಷೇತ್ರ ಚಾಮರಾಜಪೇಟೆ ವ್ಯಾಪ್ತಿಯಲ್ಲಿ ಬರುವ ಸರಕಾರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲವು ಕಾಮಗಾರಿಗಳು ಹಾಗೂ ಅಭಿವೃದ್ಧಿ ಕೆಲಸಗಳಿಗೆ ಅನುದಾನದ ಅಗತ್ಯವಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ಕಾಮಗಾರಿಗಳಿಗೆ ಸುಮಾರು 4 ಕೋಟಿ ರೂ. ಅಗತ್ಯವಿದೆ. ಇತ್ತೀಚೆಗೆ ಸಚಿವರು ಮಿಂಟೋ ಆಸ್ಪತ್ರೆಗೆ ಭೇಟಿ ನೀಡಿದ್ದಾಗ, ವಿಕ್ಟೋರಿಯಾ ಆಸ್ಪತ್ರೆಯ ಅಧೀಕ್ಷಕರು ಆ ಆಸ್ಪತ್ರೆಯಲ್ಲಿನ ಕೆಲವು ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದ್ದರು. ಅದರಂತೆ, ನಾನು ಇವತ್ತು ಸಚಿವರನ್ನು ಭೇಟಿ ಮಾಡಿ ಪತ್ರ ನೀಡಿದ್ದೇನೆ ಎಂದು ಅವರು ಹೇಳಿದರು.

ಶಾಸಕರಾಗಿ ಸಚಿವರ ಬಳಿ ಕ್ಷೇತ್ರದ ಕೆಲಸಕ್ಕೆ ತಾನೇ ಬರುತ್ತೇವೆ. ಅದೇ ರೀತಿ ನಾನು ಅನುದಾನಕ್ಕಾಗಿ ಪತ್ರ ನೀಡಲು ಬಂದಿದ್ದೇನೆ. ಅದರಲ್ಲಿ ಬೇರೆ ಏನು ವಿಶೇಷತೆ ಇಲ್ಲ ಎಂದು ಝಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News