ಕೇಂದ್ರದ ಪ್ರಮುಖ ಹುದ್ದೆ ಹೆಸರಿನಲ್ಲಿ ವಂಚನೆ: ಉಡುಪಿಯ ರಾಘವೇಂದ್ರ ಸೆರೆ

Update: 2021-11-27 15:53 GMT

ಬೆಂಗಳೂರು, ನ.27: ಕೇಂದ್ರ ಸರಕಾರ ಸಮೀಕ್ಷೆ ಇಲಾಖೆಯ ಉಪ ಆಯುಕ್ತರಾಗಿದ್ದೇನೆ ಎಂದು ನಂಬಿಸಿ, ನೂರಾರು ಮಂದಿಗೆ ವಂಚನೆಗೈದಿರುವ ಪ್ರಕರಣವನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ.

ಉಡುಪಿಯ ಕುಂದಾಪುರದ ರಾಘವೇಂದ್ರ ಎಂಬಾತ ಬಂಧಿತ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ.

ರಾಘವೇಂದ್ರ ಉಡುಪಿಯಲ್ಲಿ ಖಾಸಗಿಯಾಗಿ ಸರ್ವೇಯರ್ ಕೆಲಸ ಮಾಡುತ್ತಿದ್ದ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಹಣ ಸಂಪಾದನೆ ಮಾಡಲು ಬೆಂಗಳೂರಿಗೆ ಬಂದು ಕೇಂದ್ರ ಸರಕಾರದ ಸಮೀಕ್ಷೆ ಇಲಾಖೆಯ ಉಪ ಆಯುಕ್ತ ಆಗಿ ನಕಲಿ ಗುರುತಿನ ಚೀಟಿ ಮಾಡಿಸಿಕೊಂಡಿದ್ದ.

ಜನರಲ್ಲಿ ತಾನು ಸರಕಾರಿ ಉದ್ಯೋಗಿ ಎಂದು ನಂಬಿಸಲು ತನ್ನ ಕಾರಿನ ಮುಂದೆ ಭಾರತ ಸರಕಾರ ಎಂದು ಫಲಕ ಹಾಕಿಕೊಂಡು ಸರ್ವೇ ಇಲಾಖೆ ಸೇರಿದಂತೆ ವಿವಿಧ ಸರಕಾರಿ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಿರುದ್ಯೋಗಿಗಳಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.

ಕೇಂದ್ರ ಸರಕಾರದ ಉನ್ನತ ಅಧಿಕಾರಿ ಸೋಗಿನಲ್ಲಿ ಐಷಾರಾಮಿ ಕಾರಿನಲ್ಲಿ ಓಡಾಡಿಕೊಂಡಿದ್ದ ಆರೋಪಿ ಬೆಂಗಳೂರು, ಬಾಗಲಕೋಟೆ, ಬೆಳಗಾವಿ, ಶಿವಮೊಗ್ಗ ಕಾರವಾರ ಸೇರಿ ಬಹುತೇಕ ಉತ್ತರ ಕರ್ನಾಟಕದ ಸರಕಾರಿ ಕೆಲಸದ ಉದ್ಯೋಗಾಕಾಂಕ್ಷಿಗಳನ್ನೇ ಗುರಿಯಾಗಿಸಿಕೊಂಡಿದ್ದ. ವಿದ್ಯಾರ್ಹತೆ ಮೇರೆಗೆ ಕೆಲಸ ಕೊಡಿಸುವುದಾಗಿ ಹೇಳಿ ಒಬ್ಬರಿಂದ ಸುಮಾರು 20 ಲಕ್ಷ ರೂ. ಪಡೆಯುತ್ತಿದ್ದ ಎನ್ನುವ ಮಾಹಿತಿ ಗೊತ್ತಾಗಿದೆ.

ನಿರುದ್ಯೋಗಿಗಳಿಂದ ಪಡೆದ ಹಣದಿಂದ ಕಾರು, ಊರಿನಲ್ಲಿ ಮನೆ, ತುಮಕೂರಿನಲ್ಲಿ ಹೊಟೇಲ್, ಕೆಂಗೇರಿಯಲ್ಲಿ ಫ್ಲ್ಯಾಟ್ ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಖರೀದಿಸಿದ್ದ. ಸದ್ಯ ಆತನನ್ನು ಬಂಧಿಸಿ ನಕಲಿ ಗುರುತಿನ ಚೀಟಿ, ಮೊಬೈಲ್, ಟ್ಯಾಬ್, ಲ್ಯಾಪ್‍ಟಾಪ್, ಚೆಕ್‍ಬುಕ್, ಬಾಂಡ್‍ಪೇಪರ್ ಹಾಗೂ ಖರೀದಿಸಿದ್ದ ಆಸ್ತಿಪತ್ರಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಲಾಗಿದೆ ಎಂದು ಸಿಸಿಬಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News