'ನೂತನ‌ ಜಿಲ್ಲೆ ಆಗದೇ ಇದ್ದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತಿದ್ದೆ': ಸಚಿವ ಆನಂದ್ ಸಿಂಗ್

Update: 2021-11-27 15:57 GMT
ಸಚಿವ ಆನಂದ್ ಸಿಂಗ್

ಕೂಡ್ಲಿಗಿ ನ.27: ಇಲ್ಲಿನ ಜನತೆಯ ಬೇಡಿಕೆಯಂತೆ ಬಳ್ಳಾರಿಯನ್ನು ವಿಭಜಿಸಿ ನೂತನ ವಿಜಯನಗರ ಜಿಲ್ಲೆ ರಚನೆ ಆಗದಿದ್ದರೆ ರಾಜಕೀಯ ನಿವೃತ್ತಿ ಪಡೆಯುವ ತೀರ್ಮಾನ ಮಾಡಿದ್ದೆ ಎಂದು ಪ್ರವಾಸೋದ್ಯಮ ಸಚಿವರೂ ಆದ ಪರಿಸರ ಖಾತೆ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

ಕೂಡ್ಲಿಗಿ ತಾಲೂಕಿನಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಒಂದು ಜಿಲ್ಲೆ ರಚನೆ ಮಾಡುವುದು ಸುಲಭದ ಕೆಲಸವಲ್ಲ. 

ಆದರೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನಸ್ಸು ಮಾಡಿದ ಪರಿಣಾಮ‌ ನೂತನ ಜಿಲ್ಲೆ ರಚನೆ ಆಯಿತು ಎಂದು ತಿಳಿಸಿದರು.

ಯಡಿಯೂರಪ್ಪ ಅವರಲ್ಲಿ ಒಂದು ಗಟ್ಟಿತನವಿದೆ. ಸಚಿವ ಸಂಪುಟ ಸಭೆಯಲ್ಲೂ ಯಾವುದೇ ಆಕ್ಷೇಪ‌‌ ವ್ಯಕ್ತವಾಗದಂತೆ ನೋಡಿಕೊಂಡರು. ಯಡಿಯೂರಪ್ಪ ಅವರ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ. ಜಿಲ್ಲೆ ನಿರ್ಮಾಣವಾಗದಿದ್ದರೆ ನನ್ನ ರಾಜಕೀಯ ಜೀವನ ಅಲ್ಲಿಗೆ ನಿಂತು ಹೋಗುತ್ತಿತ್ತು. ಜನತೆ ಮತ ನೀಡುವಾಗ ಕೊಟ್ಟ ಭರವಸೆಯನ್ನು ನಾನು ಈಡೇರಿಸದಿದ್ದರೆ ಹೇಗೆ ಎಂಬುದು ನನ್ನನ್ನು ಕಾಡುತ್ತಿತ್ತು. ಇದಕ್ಕೆ ಯಡಿಯೂರಪ್ಪ ಅವರು ಅವಕಾಶ ನೀಡಲಿಲ್ಲ ಎಂದರು.

ನಾನು ಹೊಸದಾಗಿ ರಾಜಕೀಯ ಪ್ರವೇಶ ಮಾಡಿದಾಗ ಹಿರಿಯ ನಾಯಕರೊಬ್ಬರು ನನ್ನನ್ನು ಮಂತ್ರಿ ಮಾಡುತ್ತೇನೆ‌ ಎಂದು ಭರವಸೆ ನೀಡಿದ್ದರು. ಚುನಾವಣೆ ಎಲ್ಲ ಮುಗಿದ ಬಳಿಕ ಆ ಹಿರಿಯ ನಾಯಕನನ್ನು ಭೇಟಿಯಾಗಿ ಮಂತ್ರಿ ಪದವಿ ಕೇಳಿದ್ದೆ.

ರಾಜಕೀಯದಲ್ಲಿ ನೋಡೋಣ, ಮಾಡೋಣ ಎಂದೇ‌ ಹೇಳುವುದು. ಹೇಳಿದ್ದನ್ನೆಲ್ಲಾ ಕಾರ್ಯ ರೂಪಕ್ಕೆ ತರಲು ಸಾಧ್ಯವಿಲ್ಲ ಎನ್ನುವ ಮೂಲಕ ನಿನ್ನನ್ನು ಮಂತ್ರಿ ಮಾಡಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಹೇಳಿ‌ ಕಳುಹಿಸಿದ್ದರು. ಆದರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಲ್ಲರಿಗಿಂತ ಭಿನ್ನ. ಕೊಟ್ಟ ಮಾತನ್ನು ಉಳಿಸಿಕೊಳ್ಳದೇ ಬಿಡುವುದಿಲ್ಲ. ಅವರಂತಹ ನಾಯಕನನ್ನು ನೋಡಲು ಸಾಧ್ಯವಿಲ್ಲ ಎಂದು ಕೊಂಡಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News