ಪುಸ್ತಕ ಸಂಸ್ಕೃತಿ ಮೇಲೆ ಜಿಎಸ್ಟಿ ಹೊರೆ ಸಲ್ಲ: ಸಿಎನ್‍ಆರ್

Update: 2021-11-27 16:32 GMT

ಬೆಂಗಳೂರು, ನ.27: ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಎಂಬ ನೂತನ ತೆರಿಗೆಯೂ ಸಹ ಪುಸ್ತಕ ಸಂಸ್ಕøತಿಯ ಮೇಲೆ ಹೆಚ್ಚು ಹೊರೆ ಹಾಕಿದೆ ಎಂದು ವಿಮರ್ಶಕ ಡಾ.ಸಿ.ಎನ್.ರಾಮಚಂದ್ರನ್ ಬೇಸರ ವ್ಯಕ್ತಪಡಿಸಿದರು.

ಶನಿವಾರ ನಗರದ ಗಾಂಧಿಭವನ ಸಭಾಂಗಣದಲ್ಲಿ ಸಪ್ನ ಬುಕ್ ಹೌಸ್ 66ನೆ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಏರ್ಪಡಿಸಿದ್ದ 66 ಕನ್ನಡ ಪುಸ್ತಕಗಳ ಲೋಕಾರ್ಪಣೆ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.

ಹೊಸ ಹೊಸ ಪುಸ್ತಕಗಳನ್ನು ಪ್ರಕಟಿಸುವ ಪ್ರಕಾಶಕರಿಂದ ಪುಸ್ತಕಗಳನ್ನು ಖರೀದಿಸಿ ರಾಜ್ಯದ ವಿವಿಧ ಗ್ರಂಥಾಲಯಗಳಿಗೆ ನೀಡುವ ಪ್ರಕ್ರಿಯೆಯು ಸುಗಮವಾಗುತ್ತಿಲ್ಲ. ಜತೆಗೆ, ಖರೀದಿಸಿದ ಕೃತಿಗಳಿಗೆ ಇಂದಿಗೂ ಹಣ ಬಿಡುಗಡೆಗೊಂಡಿಲ್ಲ ಎಂದರು.

ಬಿಬಿಎಂಪಿ ವ್ಯಾಪ್ತಿಯ ಗ್ರಂಥಾಲಯಗಳಿಗೆ ಪೂರೈಸಿದ ಪುಸ್ತಕಗಳ ಒಟ್ಟು ಹಣ ಸುಮಾರು 400 ಕೋಟಿ ರೂ.ಗಳಿಗೂ ಮೀರುತ್ತದೆ. ಮತ್ತೊಂದೆಡೆ ಬಿಬಿಎಂಪಿ ಆಡಳಿತದ ವೈಖರಿಯನ್ನು ಪ್ರಕಾಶಕರು ಕೋರ್ಟಿನಲ್ಲಿ ಪ್ರಶ್ನಿಸಿದ್ದಾರೆ. ವಾಸ್ತವ ಹೀಗಿರಬೇಕಾದರೆ, ಕನ್ನಡ ಪುಸ್ತಕಗಳಿಗೆ  ಪ್ರೋತ್ಸಾಹ ಸಿಗುವುದೆಂತು ಜೊತೆಗೆ, ಜಿಎಸ್ಟಿ ಎಂಬ ನೂತನ ತೆರಿಗೆಯೂ ಸಹ ಪುಸ್ತಕ ಸಂಸ್ಕøತಿಯ ಮೇಲೆ ಹೆಚ್ಚು ಹೊರೆ ಹಾಕಿದೆ ಎಂದರು.

ಕನ್ನಡ ಸಾಹಿತ್ಯ ಪುಸ್ತಕಗಳ ಸಂಸ್ಕೃತಿ ಪ್ರಸಾರಕ್ಕೆ ಸರಕಾರದ ಗಮನ ಕೊಡುವುದು ಅಗತ್ಯವಿದೆ ಎಂದು ಒತ್ತಾಯಿಸಿದ ಅವರು, ಪುಸ್ತಕ ಓದುವವರಿದ್ದಾರೆ. ಆದರೆ, ಜಿಲ್ಲಾ ಕೇಂದ್ರದಲ್ಲೂ ಸುಸಜ್ಜಿತ ಗ್ರಂಥಾಲಯಗಳಿಲ್ಲ. ಪುಸ್ತಕ ಮಳಿಗೆಗಳಿಲ್ಲ. ಆದ್ದರಿಂದ, ಪುಸ್ತಕಗಳು ಓದುಗರಿಗೆ ಸುಲಭವಾಗಿ ಸಿಗುತ್ತಿಲ್ಲ ಎಂದು ಹೇಳಿದರು.

ಒಂದು ಕಾಲಕ್ಕೆ ಕಾದಂಬರಿಗಳೇ ಹೆಚ್ಚು ಪ್ರಕಟವಾಗುತ್ತಿದ್ದವು. ಆದರೆ, ಓದುಗರ ವೃಂದದ ಅಪೇಕ್ಷೆ-ನಿರೀಕ್ಷೆಗಳು ಬದಲಾದ ಹಿನ್ನೆಲೆಯಲ್ಲಿ ಕತೆ-ಕಾವ್ಯ ಪ್ರಕಾರದ ಸಾಹಿತ್ಯ ಹೆಚ್ಚು ಸಮೃದ್ಧವಾಗುತ್ತಿದೆ. ಸಪ್ನ ಬುಕ್ ಹೌಸ್ ಪ್ರಕಟಿಸಿದ ಒಟ್ಟು 66 ಕೃತಿಗಳ ಪೈಕಿ 12 ಕಥಾ ಸಂಕಲನ, 10 ವಿಮರ್ಶಾ ಕೃತಿ, 6 ಕವನ ಸಂಕಲನ, 3 ಕಾದಂಬರಿ ಒಳಗೊಂಡಿದ್ದು, ಉತ್ತಮ ಬೆಳವಣಿಗೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕೋವಿಡ್ ಸೋಂಕಿನಿಂದ ಜೀವಗಳು ತಲ್ಲಣಿಸಿವೆ. ಇಂತಹ ಸಂದರ್ಭದಲ್ಲಿ ಸಾಹಿತ್ಯ-ಕಲೆಯಿಂದ ಆಗುವ ಸಾರ್ಥಕತೆ ಏನು ಎಂಬ ಪ್ರಶ್ನೆ ಮಾಡುವುದಕ್ಕಿಂತ ಅನುಭವಿಸಿ ನೋಡಬೇಕು. ಮನಸ್ಸಿನ ಅಂತರಂಗದ ಬಡತನ ಕಳೆಯಬೇಕು. ಜತೆಗೆ, ಬಡತನವಿರಲಿ, ಕಾರ್ಪಣ್ಯ ಬೇಡ ಎಂಬ ಮಾತು ನೆನಪಿನಲ್ಲಿಡಬೇಕು.

-ಡಾ.ಎಚ್.ಎಸ್.ವೆಂಕಟೇಶ ಮೂರ್ತಿ, ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News