ಹಿರಿಯರ ಸದನದ ಇಂದಿನ ಸ್ಥಿತಿ

Update: 2021-11-28 19:30 GMT

ಕರ್ನಾಟಕದ ಜನತೆಗೆ ಯಾವುದೇ ದೃಷ್ಟಿಯಿಂದ ಉಪಯೋಗ ಇಲ್ಲದ ಬಿಳಿಯಾನೆಗಳನ್ನು ಸಾಕುವ ವಿಧಾನ ಪರಿಷತ್ ಎಂಬುದು ಅಗತ್ಯವೇ ಎಂಬ ಬಗ್ಗೆ ಚರ್ಚೆ ನಡೆಯಬೇಕಾಗಿದೆ. ವಿಧಾನ ಪರಿಷತ್ ಕಲಾಪ, ಸದಸ್ಯರ ಮತ್ತು ಅಧಿಕಾರಿಗಳ, ನೌಕರರ ಸಂಬಳ ಭತ್ತೆಗಳಿಗಾಗಿ ಜನತೆಯ ಬೊಕ್ಕಸದಿಂದ ವ್ಯಯಿಸಲಾಗುತ್ತದೆ. ಇದೇ ಹಣವನ್ನು ಸರಕಾರಿ ಶಾಲೆಗಳಿಲ್ಲದ ಹಳ್ಳಿಗಳಿಗೆ ಶಾಲೆಗಳನ್ನು, ರಸ್ತೆಗಳಿಲ್ಲದ ಊರುಗಳಿಗೆ ರಸ್ತೆಗಳನ್ನು ಹಾಗೂ ಕುಡಿಯುವ ನೀರಿಲ್ಲದ ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಸಲು ಬಳಸಬಹುದಲ್ಲವೇ?



ವಿಧಾನಸಭೆಯಲ್ಲಿ ಚರ್ಚಿಸಿ ಅಂಗೀಕರಿಸಲ್ಪಡುವ ವಿಧೇಯಕಗಳ ಬಗ್ಗೆ ಕೂಲಂಕಷವಾಗಿ ಸಮಾಲೋಚನೆ ಮಾಡಿ ಅನುಮೋದನೆ ನೀಡುವುದಕ್ಕಾಗಿ ವಿಧಾನ ಪರಿಷತ್‌ನ್ನು ರಚಿಸಲಾಗಿದೆ.

ಸಾಮಾನ್ಯವಾಗಿ ಸಮಾಜದ ಚಿಂತಕರು, ಲೇಖಕರು, ಕವಿಗಳು, ಶಿಕ್ಷಕರು, ಪತ್ರಕರ್ತರು ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಈ ಸದನದಲ್ಲಿ ಇರುತ್ತಾರೆ. ಇವರು ತಮ್ಮ ಅಮೂಲ್ಯ ಸಲಹೆಗಳ ಮೂಲಕ ವಿಧಾನಸಭೆ ಅಂಗೀಕರಿಸಿದ ವಿಧೇಯಕದಲ್ಲಿ ಲೋಪ ದೋಷಗಳಿದ್ದರೆ ಸರಿಪಡಿಸಿ ಅನುಮೋದನೆ ನೀಡುತ್ತಾರೆ.
 ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸನಗಳನ್ನು ರೂಪಿಸಲು ಜನರಿಂದ ಚುನಾಯಿತವಾದ ಸದನಗಳಿವೆ. ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳು ಜನತೆಯ ಬದುಕಿಗೆ ಸಂಬಂಧಿಸಿದ ಕಾನೂನುಗಳನ್ನು ರೂಪಿಸುವ ಹಾಗೂ ಹಾಲಿ ಇರುವ ಕಾನೂನಿಗೆ ತಿದ್ದುಪಡಿ ತರುವ ಅಧಿಕಾರವನ್ನು ಹೊಂದಿವೆ. ಇವುಗಳಲ್ಲದೆ ದಿಲ್ಲಿಯಲ್ಲಿ ಲೋಕಸಭೆ ಜೊತೆಗೆ ರಾಜ್ಯಸಭೆ ಹಾಗೂ ಕೆಲವೇ ಕೆಲವು ರಾಜ್ಯಗಳಲ್ಲಿ ವಿಧಾನಸಭೆಗಳ ಜೊತೆಗೆ ವಿಧಾನ ಪರಿಷತ್‌ಗಳಿವೆ.

ಈ ವಿಶೇಷತೆಗಾಗಿಯೇ ವಿಧಾನಪರಿಷತ್‌ನ್ನು ಚಿಂತಕರ ಚಾವಡಿ ಎಂದು ಕರೆಯಲಾಗುತ್ತದೆ. ಕರ್ನಾಟಕದ ವಿಧಾನ ಪರಿಷತ್‌ನ ಇತಿಹಾಸವನ್ನು ಗಮನಿಸಿದರೆ ಹಿಂದೆಲ್ಲ ಸಾಹಿತಿ ಬಸವರಾಜ ಕಟ್ಟೀಮನಿ, ಪತ್ರಕರ್ತ ಖಾದ್ರಿ ಶಾಮಣ್ಣ, ಸಂಗೀತ ವಿದುಷಿ ಗಂಗೂಬಾಯಿ ಹಾನಗಲ್, ಮಲ್ಲಿಕಾರ್ಜುನ ಮನ್ಸೂರ್, ಕವಿಗಳಾದ ಸಿದ್ದಲಿಂಗಯ್ಯ, ಎಲ್.ಹನುಮಂತಯ್ಯ ಹೀಗೆ ಹಲವಾರು ಬುದ್ಧಿಜೀವಿಗಳು ಈ ಸದನದ ಸದಸ್ಯರಾಗಿದ್ದರು.
ಈ ಬುದ್ಧಿಜೀವಿಗಳಲ್ಲದೆ ಶಿಕ್ಷಕರಿಗಾಗಿ, ಪದವೀಧರರಿಗಾಗಿ, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗಾಗಿ ಪ್ರತ್ಯೇಕ ಮತಕ್ಷೇತ್ರಗಳನ್ನು ನಿರ್ಮಿಸಿ ಅಲ್ಲಿಂದ ಚುನಾಯಿತರಾಗಿ ಬರುವವರು ಮೇಲ್ಮನೆ ಸದಸ್ಯರಾಗುತ್ತಾರೆ.

ಕರ್ನಾಟಕದ ವಿಧಾನಪರಿಷತ್‌ಗೆ ಸ್ಥಳೀಯ ಸಂಸ್ಥೆಗಳಿಂದ ಈಗ ನಡೆಯುತ್ತಿರುವ ಚುನಾವಣೆಯಲ್ಲಿ ಮೂರೂ ಪ್ರಮುಖ ಪಕ್ಷಗಳಿಂದ ಸ್ಪರ್ಧಿಸಿರುವುದು ಈಗ ಅಧಿಕಾರದಲ್ಲಿರುವವರ ತಮ್ಮಂದಿರು ಮತ್ತು ಕೋಟ್ಯಧೀಶರು. ಈ ಚುನಾವಣೆಯಲ್ಲಿ ಪಂಚಾಯತ್ ಸದಸ್ಯರು ಮತದಾರರು. ಈಗ ಒಂದು ಓಟಿನ ಬೆಲೆ ಒಂದೂವರೆಯಿಂದ ಎರಡು ಲಕ್ಷದವರಗೆ ಹೋಗಿದೆಯೆಂದು ಜನ ಮಾತಾಡುತ್ತಾರೆ. ಕನ್ನಡ ಸಾಹಿತ್ಯ ಪರಿಷತ್‌ನ ಚುನಾವಣೆಯಲ್ಲಿ ಒಂದು ಓಟಿಗೆ ಒಂದು ಸೂಟ್‌ಕೇಸ್ ಮತ್ತು ಮಹಿಳೆಯರಿಗೆ ಮೂಗುತಿ ವಿತರಣೆಯಾಗುವ ಈ ದಿನಗಳಲ್ಲಿ ವಿಧಾನಪರಿಷತ್ ಚುನಾವಣೆಯಲ್ಲಿ ಒಂದೂವರೆ ಲಕ್ಷ ದೊಡ್ಡದೇನಲ್ಲ. ಬರೀ ಇಷ್ಟೇ ಅಲ್ಲ, ಪಕ್ಷದ ಟಿಕೆಟ್ ಪಡೆಯಲು ಸಲ್ಲಿಸಿರುವ ದಕ್ಷಿಣೆಯೇ ಒಂದು ಕೋಟಿಗಿಂತ ಹೆಚ್ಚು ಎಂಬುದು ಜನ ಜನಿತ.

ಎಪ್ಪತ್ತರ ದಶಕದಲ್ಲಿ ಕಾಂಗ್ರೆಸನ್ನು ವಿರೋಧಿಸಲು ಬಲಪಂಥೀಯ ಪ್ರತಿಪಕ್ಷಗಳು ಬಳಸಿದ ಅಸ್ತ್ರ ನೆಹರೂ- ಗಾಂಧಿ ಕುಟುಂಬದ ರಾಜಕಾರಣ. ಜೆಪಿ ಚಳವಳಿಯ ಆಳದಲ್ಲಿದ್ದುದು ಅದೇ ಆರೋಪ. ಆದರೆ, 1977ರಲ್ಲಿ ಇಂದಿರಾ ಗಾಂಧಿ ಸೋತು ಪ್ರತಿಪಕ್ಷಗಳು ಅಧಿಕಾರಕ್ಕೆ ಬಂದ ನಂತರ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ನೆಹರೂ ಕುಟುಂಬದ ರಾಜಕೀಯದ ವಿರುದ್ಧ ಸಿಡಿದೆದ್ದ ಘಟಾನುಘಟಿ ನಾಯಕರು ತಮ್ಮ ಮಕ್ಕಳನ್ನು, ಸೊಸೆಯಂದಿರನ್ನು ಸಾಲದೆಂಬಂತೆ ಮೊಮ್ಮಕ್ಕಳನ್ನು ಅಧಿಕಾರಕ್ಕೆ ತರಲು ಬಳಸಿಕೊಂಡಿದ್ದು ವಿಧಾನಪರಿಷತ್‌ನ್ನು. ಹೋಗಲಿ ಹೀಗೆ ಕೌಟುಂಬಿಕ ಹಿನ್ನೆಲೆಯಿಂದ ಬಂದವರು ಮೇಲ್ಮನೆಯಲ್ಲಿ ಮಾತಾಡಿದರೆ ಚರ್ಚೆಯಲ್ಲಿ ಪಾಲ್ಗೊಂಡರೆ ಸರಿ. ಆದರೆ ಅವರು ಮಾತನಾಡಲು, ಚರ್ಚೆ ಮಾಡಲು ಸದನಕ್ಕೆ ಬಂದಿರುವುದಿಲ್ಲ. ಎಂಎಲ್‌ಸಿ ಎಂಬ ರಾಜಕೀಯ ಪ್ರತಿಷ್ಠೆ, ಕಾರು, ಅಧಿಕಾರಿಗಳ ವರ್ಗಾವಣೆ ಮಾಡುತ್ತಾ ರಾತ್ರಿ ಪಾರ್ಟಿಗಳಲ್ಲಿ ಮಜಾ ಮಾಡುತ್ತಾ ಕಾಲಹರಣ ಮಾಡುತ್ತಾರೆ.

ಮೊದಲೆಲ್ಲ ನಾಡಿನ ಬುದ್ಧಿಜೀವಿಗಳು ಮತ್ತು ಚಿಂತಕರು, ಲೇಖಕರಿಂದ ಹಾಗೂ ಪ್ರಾಮಾಣಿಕ ಸಮಾಜ ಸೇವಕರಿಂದ ತುಂಬಿರುತ್ತಿದ್ದ ಕರ್ನಾಟಕ ವಿಧಾನಪರಿಷತ್ ಈಗ ರಿಯಲ್ ಎಸ್ಟೇಟ್ ಉದ್ಯಮಿಗಳಿಂದ, ಮೈನಿಂಗ್ ಮಾಫಿಯಾದ ಖದೀಮರಿಂದ, ಚಿನ್ನದ ವ್ಯಾಪಾರ ಮಾಡುವ ಲಾಭಕೋರರಿಂದ ತುಂಬಿ ತುಳುಕುತ್ತಿದೆ. ಅಷ್ಟೇ ಅಲ್ಲ, ಈಗ ರಾಜಕೀಯದಲ್ಲಿ ಪ್ರಭಾವಶಾಲಿಗಳಾದವರು, ಮಂತ್ರಿ, ಶಾಸಕರು ತಾವು ಅಧಿಕಾರ ಸುಖವನ್ನು ಅನುಭವಿಸುವುದಲ್ಲದೇ ತಮ್ಮ ಸಂಬಂಧಿಕರು ಅದರಲ್ಲೂ ತಮ್ಮ ಅಣ್ಣ ತಮ್ಮಂದಿರು, ಅಳಿಯಂದಿರನ್ನು ವಿಧಾನಪರಿಷತ್‌ಗೆ ಹಿತ್ತಲ ಬಾಗಿಲ ಮೂಲಕ ಒಳ ತೂರಿಸಲು ಹಿಂಜರಿಯುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಸಂವಿಧಾನ ದಿನದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಹರಡಿರುವ ಕುಟುಂಬ ಪ್ರಾಬಲ್ಯದ ರಾಜಕೀಯ ಪಕ್ಷಗಳ ಬಗ್ಗೆ ಟೀಕಿಸಿದರು. ಆದರೆ ಅವರು ತಮ್ಮ ಪಕ್ಷವನ್ನು ವಿಮರ್ಶೆಗೆ ಒಳಪಡಿಸಲಿಲ್ಲ. ಹಳ್ಳಿಯಿಂದ ದಿಲ್ಲಿಯವರೆಗೆ ಕುಟುಂಬ ರಾಜಕಾರಣ ಅತ್ಯಂತ ವ್ಯಾಪಕವಾಗಿ ಹಬ್ಬಿರುವುದು ಬಿಜೆಪಿ ಎಂಬ ಪಕ್ಷದಲ್ಲಿ.

ವಿಧಾನಪರಿಷತ್‌ನ್ನು ಪ್ರವೇಶಿಸುವ ಈ ಕೋಟ್ಯಧೀಶರು ಅವರ ಸಂಬಂಧಿಕರು ತಮ್ಮ ವ್ಯಾಪಾರಿ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ರಾಜಕೀಯ ಅಧಿಕಾರವನ್ನು ಬಳಸಿಕೊಳ್ಳುತ್ತಾರಲ್ಲದೆ ಇವರಿಂದ ಬಡವರ ಪರ ಚಿಂತನೆ ನಿರೀಕ್ಷಿಸುವುದು ಮೂರ್ಖತನವಾಗುತ್ತದೆ. ಹಿಂದೆ ಗಾಲಿ ಜನಾರ್ದನರೆಡ್ಡಿ ಅವರೂ ವಿಧಾನಪರಿಷತ್ ಮೂಲಕ ರಾಜಕೀಯ ಪ್ರವೇಶ ಮಾಡಿ ಹೇಗೆ ಪ್ರಭಾವಶಾಲಿಯಾಗಿ ಬೆಳೆದರೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಈ ಬಾರಿಯ ವಿಧಾನಪರಿಷತ್ ಚುನಾವಣೆಯ ಇನ್ನೊಂದು ವಿಶೇಷವೆಂದರೆ ಎಲ್ಲ ಮೂರೂ ಪ್ರಮುಖ ಪಕ್ಷಗಳು (ಬಿಜೆಪಿ, ಕಾಂಗ್ರೆಸ್, ಜೆಡಿಎಸ್) ಟಿಕೆಟ್ ನೀಡಿರುವುದು ಬಹುತೇಕ ಕರ್ನಾಟಕದ ರಾಜಕೀಯವನ್ನು ನಿಯಂತ್ರಿಸುತ್ತಾ ಬಂದ ಎರಡು ಬಲಿಷ್ಠ ಜಾತಿಗಳಿಗೆ. 25 ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಈ ಎರಡೂ ಬಲಿಷ್ಠ ಜಾತಿಗಳು ಶೇ.60ರಷ್ಟು ಪಾಲನ್ನು ಪಡೆದಿವೆ. ಕೇವಲ ಒಬ್ಬರು ಪರಿಶಿಷ್ಟ ಜಾತಿ ಹಾಗೂ ಇಬ್ಬರು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

ವಿಧಾನ ಪರಿಷತ್ ಮತ್ತು ರಾಜ್ಯಸಭಾ ಚುನಾವಣೆಯಲ್ಲಿ ಹೀಗೆ ಸೀಟುಗಳ ಮಾರಾಟ ಹೊಸದೇನಲ್ಲ. ವಿಜಯ್ ಮಲ್ಯ ಹೇಗೆ ರಾಜ್ಯಸಭೆಯನ್ನು ಪ್ರವೇಶಿಸಿದರು ಮತ್ತು ರಾಜೀವ್ ಚಂದ್ರಶೇಖರ್ ಹೇಗೆ ಕರ್ನಾಟಕದಿಂದ ರಾಜ್ಯಸಭೆಯನ್ನು ಪ್ರವೇಶಿಸಿ ಕೇಂದ್ರ ಮಂತ್ರಿಯಾದರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಸಂಸತ್ತಿನಲ್ಲಿ ಇರುವಂತೆ ಕರ್ನಾಟಕ ವಿಧಾನ ಮಂಡಲದಲ್ಲೂ ಅತ್ಯಂತ ಸಮೃದ್ಧವಾದ ಗ್ರಂಥಾಲಯಗಳಿವೆ. ಅಧ್ಯಯನ ಮಾಡಲು ಸಾಕಷ್ಟು ಸಾಹಿತ್ಯವಿದೆ. ಆದರೆ, ಅಲ್ಲಿ ಬಂದು ಅಧ್ಯಯನ ಮಾಡುವವರು ಕಡಿಮೆ. ಈಗಂತೂ ಇನ್ನೂ ಕಡಿಮೆ. ನಾನು ವಿಧಾನ ಮಂಡಲ ವರದಿಗೆ ಹೋಗುವಾಗ ಬಿ.ವಿ.ಕಕ್ಕಿಲ್ಲಾಯ, ಎಂ.ಎಸ್.ಕೃಷ್ಣನ್, ಕಾಗೋಡು ತಿಮ್ಮಪ್ಪ, ಎಂ.ಪಿ.ಪ್ರಕಾಶ್, ಸಿಂಧ್ಯ, ರಮೇಶ್ ಕುಮಾರ್, ಇದಿನಬ್ಬ, ವೀರಪ್ಪ ಮೊಯ್ಲಿ ಅವರಂತಹ ಕೆಲವರು ಮಾತ್ರ ಗ್ರಂಥಾಲಯದಲ್ಲಿ ಕಾಣುತ್ತಿದ್ದರು. ಉಳಿದ ಬಹುತೇಕ ಶಾಸಕರು ಶಾಸನ ಸಭೆಯ ಮೊಗಸಾಲೆಯಲ್ಲಿ ಹರಟೆ ಹೊಡೆಯುತ್ತಾ, ಕಾಫಿ ಸೇವಿಸುತ್ತಾ ಕೂರುತ್ತಿದ್ದರು. ಈಗಂತೂ ಗ್ರಂಥಾಲಯಕ್ಕೆ ಬರುವವರ ಸಂಖ್ಯೆ ಇನ್ನೂ ಕಡಿಮೆಯಾಗಿರಬಹುದು.

ಸದನದಲ್ಲಿ ಆಗ ನಡೆಯುವ ಚರ್ಚೆಯನ್ನು ಕಣ್ಣಾರೆ ಕಂಡಿದ್ದೇನೆ. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಮಾಡುತ್ತಿದ್ದ ವಿದ್ವತ್ಪೂರ್ಣ ಭಾಷಣ, ಬಸವಲಿಂಗಪ್ಪನವರ ಖಡಕ್ ಮಾತು, ಗೋಪಾಲಗೌಡರ ರೋಷಾವೇಶ, ಕೆ.ಎಚ್.ರಂಗನಾಥರ ಅಧ್ಯಯನ ಪೂರ್ಣ ಭಾಷಣ, ಅಂಕಿ ಅಂಶಗಳೊಂದಿಗೆ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ ಕಮ್ಯುನಿಸ್ಟ್ ಶಾಸಕರಾದ ಕಕ್ಕಿಲ್ಲಾಯ, ಸೂರಿ, ಕೃಷ್ಣನ್, ಗಂಗಾಧರ ನಮೋಶಿ, ವಿ.ಎನ್ .ಪಾಟೀಲ, ಹೀಗೆ ಸದನದ ಕಲಾಪ ತುಂಬ ಲವಲವಿಕೆಯಿಂದ ಕೂಡಿರುತ್ತಿತ್ತು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ಬಂಗಾರಪ್ಪ ಪ್ರತಿಪಕ್ಷ ನಾಯಕರಾಗಿದ್ದರು. ಇವರಿಬ್ಬರ ನಡುವಿನ ವಾಗ್ವಾದ ಶುರುವಾದರೆ ಇಡೀ ಸದನದಲ್ಲಿ ನಿಶಬ್ದ ವಾತಾವರಣ ಮೂಡುತ್ತಿತ್ತು.

 ರಾಜ್ಯಸಭೆಯ ಇತಿಹಾಸವನ್ನು ನೋಡಿದರೆ ಹಿಂದೆ ಮಧು ದಂಡವತೆ, ಭೂಪೇಶ ಗುಪ್ತ್ತಾ, ನಿರೇನ್ ಘೋಷ್‌ರಂಥವರು ಸದಸ್ಯರಾಗಿದ್ದರು. ಅಲ್ಲಿ ನಡೆಯುತ್ತಿದ್ದ ಚರ್ಚೆಗಳನ್ನು ಆಲಿಸಲು ಹಿಂದಿನ ಪ್ರಧಾನಿಗಳಾದ ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಅವರು ಸದನಕ್ಕೆ ಬರುತ್ತಿದ್ದರು. ಅಂಥ ಗುಣಮಟ್ಟದ ಚರ್ಚೆಗಳು ಅಲ್ಲಿ ನಡೆಯುತ್ತಿದ್ದವು. ಈಗ ರಾಜ್ಯಸಭೆಯೂ ಕೂಡ ಮುಂಚಿನಂತಿಲ್ಲ.

ಈಗ ಸದನದಲ್ಲಿ ಅಂಥವರು ಇಲ್ಲವೆಂದಲ್ಲ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಮೇಶ್ ಕುಮಾರ್, ಕೃಷ್ಣ ಭೈರೇಗೌಡ ಚೆನ್ನಾಗಿ ಮಾತಾಡುತ್ತಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಹೋಮ್ ವರ್ಕ್ ಮಾಡಿಕೊಂಡು ಬಂದು ಉತ್ತರ ಕೊಡುತ್ತಾರೆ. ಆದರೆ, ಇಂತಹವರ ಸಂಖ್ಯೆ ತುಂಬ ಕಡಿಮೆ. ಅನಗತ್ಯ ಮಾತಾಡಿ ಎದ್ದು ಹೋಗುವವರೇ ಜಾಸ್ತಿ.

ಅದೇನೇ ಇರಲಿ, ಕರ್ನಾಟಕದ ಜನತೆಗೆ ಯಾವುದೇ ದೃಷ್ಟಿಯಿಂದ ಉಪಯೋಗ ಇಲ್ಲದ ಬಿಳಿಯಾನೆಗಳನ್ನು ಸಾಕುವ ವಿಧಾನಪರಿಷತ್ ಎಂಬುದು ಅಗತ್ಯವೇ ಎಂಬ ಬಗ್ಗೆ ಚರ್ಚೆ ನಡೆಯಬೇಕಾಗಿದೆ. ವಿಧಾನ ಪರಿಷತ್ ಕಲಾಪ, ಸದಸ್ಯರ ಮತ್ತು ಅಧಿಕಾರಿಗಳ, ನೌಕರರ ಸಂಬಳ ಭತ್ತೆಗಳಿಗಾಗಿ ಜನತೆಯ ಬೊಕ್ಕಸದಿಂದ ವ್ಯಯಿಸಲಾಗುತ್ತದೆ. ಇದೇ ಹಣವನ್ನು ಸರಕಾರಿ ಶಾಲೆಗಳಿಲ್ಲದ ಹಳ್ಳಿಗಳಿಗೆ ಶಾಲೆಗಳನ್ನು, ರಸ್ತೆಗಳಿಲ್ಲದ ಊರುಗಳಿಗೆ ರಸ್ತೆಗಳನ್ನು ಹಾಗೂ ಕುಡಿಯುವ ನೀರಿಲ್ಲದ ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಸಲು ಬಳಸಬಹುದಲ್ಲವೇ?

ವಿಧಾನಪರಿಷತ್‌ನಲ್ಲಿ ಎಲ್ಲರೂ ಇಂಥವರೆಂದಲ್ಲ. ವಿರೋಧ ಪಕ್ಷದ ನಾಯಕರಾದ ಎಸ್.ಆರ್.ಪಾಟೀಲ್, ಶಿಕ್ಷಕರ ಕ್ಷೇತ್ರದಿಂದ ಗೆದ್ದು ಬರುವ ಬಸವರಾಜ ಹೊರಟ್ಟಿ ಹೀಗೆ ಕೆಲವು ಸದಸ್ಯರು ಗಮನಾರ್ಹ ಕೊಡುಗೆ ನೀಡಿದ್ದಾರೆ. ಆದರೆ, ಅವರ ಸಂಖ್ಯೆ ಕಡಿಮೆಯಾಗುತ್ತಿದೆ. ಇನ್ನು ಮುಂದೆ ಕೋಟ್ಯಧೀಶರೇ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಂಭವವಿದೆ. ಹಾಗಾಗದಂತೆ ನೋಡಿಕೊಳ್ಳಬೇಕು. ಇಲ್ಲವೇ ವಿಧಾನ ಪರಿಷತ್‌ನ್ನು ರದ್ದುಗೊಳಿಸುವ ಬಗ್ಗೆ ಚಿಂತನೆ ನಡೆಸಬೇಕು.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News