11 ಬರಹಗಾರರಿಗೆ ಪುಸ್ತಕ ಬಹುಮಾನ ಪ್ರಕಟ

Update: 2021-11-28 18:40 GMT

ಬೆಂಗಳೂರು, ನ. 28: ಕರ್ನಾಟಕ ಸಂಘವು ಪ್ರತಿ ವರ್ಷ ನೀಡುವ ಪುಸ್ತಕ ಬಹುಮಾನಕ್ಕೆ 2020ನೆ ಸಾಲಿನಲ್ಲಿ 11 ಜನ ಬರಹಗಾರರನ್ನು ಆಯ್ಕೆ ಮಾಡಿ ಪ್ರಕಟಣೆ ಹೊರಡಿಸಿದೆ.

12 ಹಿರಿಯ ಸಾಹಿತಿಗಳ ಹೆಸರಿನಲ್ಲಿ 12 ಬರಹಗಾರರ ಪುಸ್ತಕಗಳಿಗೆ ಬಹುಮಾನ ನೀಡಲಾಗುತ್ತದೆ. ಆದರೆ, ಈ ಬಾರಿ ವೈದ್ಯ ಸಾಹಿತ್ಯ ವಿಭಾಗದಲ್ಲಿ ಪುಸ್ತಕಗಳು ಬಂದಿರಲಿಲ್ಲ. ಹೀಗಾಗಿ,  11 ವಿಭಾಗಗಳಲ್ಲಿ 11 ಬರಹಗಾರರ ಪುಸ್ತಕಗಳನ್ನು ಆಯ್ಕೆ ಮಾಡಲಾಗಿದೆ. ಪ್ರತಿ ಪುಸ್ತಕ ಬಹುಮಾನವೂ ತಲಾ 10 ಸಾವಿರ ರೂ. ನಗದು ಬಹುಮಾನ ಒಳಗೊಂಡಿರುತ್ತದೆ.

ದವನ ಸೊರಬರ ಪರವಶ ಕೃತಿಗೆ, ಕುವೆಂಪು ಪುಸ್ತಕ ಬಹುಮಾನ, ಪದ್ಮರಾಜ ದಂಡಾವತಿರ ಅನುವಾದಿತ ಕೃತಿ ಸೀತಾ ರಾಮಾಯಣದ ಸಚಿತ್ರ ಕಥನಕ್ಕೆ ಎಸ್.ವಿ ಪರಮೇಶಭಟ್ಟ ಪುಸ್ತಕ ಬಹುಮಾನ, ಶ್ರೀದೇವಿ ಕೆರೆಮನೆ ಬರೆದಿರುವ ಅಂಗೈಯೊಳಗಿನ ಬೆಳಕು ಎಂಬ ಮಹಿಳಾ ಸಾಹಿತ್ಯ ಕೃತಿಗೆ ಎಂ.ಕೆ ಇಂದಿರಾ ಪುಸ್ತಕ ಬಹುಮಾನ ಹಾಗೂ ಎ.ಎಸ್.ಮಕಾನದಾರರ ಪ್ಯಾರಿ ಪದ್ಯಕ್ಕೆ ಪಿ.ಲಂಕೇಶ್ ಬಹುಮಾನವನ್ನು ಘೋಷಿಸಲಾಗಿದೆ.

ಬಿ.ಆರ್. ಶೃತಿ ಬರೆದಿರುವ ಜೀರೋ ಬ್ಯಾಲೆನ್ಸ್ ಕವನ ಸಂಕಲನಕ್ಕೆ ಜಿ.ಎಸ್.ಶಿವರುದ್ರಪ್ಪ ಪುಸ್ತಕ ಬಹುಮಾನ ಹಾಗೂ ಆಶಾ ಜಗದೀಶ್‍ರ ನಾದಾನುಸಂಧಾನ ಅಂಕಣ ಬರಹಕ್ಕೆ ಹಾ.ಮಾ ನಾಯಕ ಪ್ರಶಸ್ತಿ, ಶಾಂತಿ ಕೆ. ಅಪ್ಪಣ್ಣರ ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು ಎಂಬ ಸಣ್ಣ ಕಥಾ ಸಂಕಲನಕ್ಕೆ ಯು.ಆರ್. ಅನಂತಮೂರ್ತಿ ಪ್ರಶಸ್ತಿ, ಮಂಗಳ ಟಿ.ಎಸ್ ಬರೆದಿರುವ ಆರೋಹಿ ನಾಟಕಕ್ಕೆ ಡಾ. ಕೆ.ವಿ ಸುಬ್ಬಣ್ಣ ಪ್ರಶಸ್ತಿ, ಎಂ ಜಾನಕಿ ಬರೆದಿರುವ ರಷ್ಯಾದಲ್ಲಿ ಏಳು ದಿನಗಳು ಪ್ರವಾಸ ಸಾಹಿತ್ಯಕ್ಕೆ ಕುಕ್ಕೆ ಸುಬ್ರಹ್ಮಣ್ಯಶಾಸ್ತ್ರಿ ಪ್ರಶಸ್ತಿ, ನಡಹಳ್ಳಿ ವಸಂತ್‍ರ ನಮ್ಮೊಳಗಿನ ಭಾವ ಪ್ರಪಂಚ ಎಂಬ ವಿಜ್ಞಾನ ಸಾಹಿತ್ಯಕ್ಕೆ ಹಸೂಡಿ ವೆಂಕಟ ಶಾಸ್ತ್ರಿ, ಹ.ಸ ಬ್ಯಾಕೋಡರ ಮುತ್ತು ಕೊಟ್ಟ ಮೀನು ಎಂಬ ಮಕ್ಕಳ ಸಾಹಿತ್ಯಕ್ಕೆ ನಾ. ಡಿಸೋಜ ಪುಸ್ತಕ ಬಹುಮಾನ ಲಭಿಸಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಕುಂಸಿ ಉಮೇಶ್, ಆರುಂಡಿ ನಾಗರಾಜ್, ನಾಗರಾಜರಾವ್, ಸಿರಾಜ್ ಅಹಮ್ಮದ್, ಆರಡಿ ಮಲ್ಲಯ್ಯ, ವಸುಮತಿ ಬಾಪಟ್, ತರುವನೂರು ಮಲ್ಲಿಕಾರ್ಜುನ, ಹೆಚ್.ಟಿ. ಕೃಷ್ಣಮೂರ್ತಿ, ರಾಜೇಶ್ವರಿ ಹೆಚ್, ಡಾ ಸುಧಾ, ಎಂ.ಎನ್. ಸುಂದರರಾಜ್, ಮಾನಸ ಶಿವರಾಮಕೃಷ್ಣ, ಡಾ. ಶಿವಲಿಂಗೇಗೌಡ, ಅಣ್ಣಪ್ಪ ಎನ್. ಮಳಿಮಠ್, ವಿಶಾಲಾಕ್ಷಿ ಮೇಡಂ, ಎಸ್. ನಾಗಮಣಿ, ಚೆ.ಕೆ. ರಮೇಶ್, ಶಾರದಾ ಉಳುವೆ, ಡಾ. ಶ್ರೀಪತಿ, ಶೇಖರ ಗೌಳೇರ್, ಶುಭ ಮರವಂತೆ, ಶಾಲಿನಿ ರಾಮಸ್ವಾಮಿ, ಕೃಷ್ಣಭಟ್ , ಎಸ್.ಟಿ ಅರವಿಂದ್ ಪುಸ್ತಕ ಬಹುಮಾನಕ್ಕೆ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಸಂಘದ ಕಾರ್ಯದರ್ಶಿ ಪ್ರೊ.ಎಂ.ಆಶಾಲತಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News