ವೇತನವಿರುವ ಹುದ್ದೆ ಹೊಂದಿರುವ ಜಮ್ಮು-ಕಾಶ್ಮೀರದ ಲೆ.ಗ. ಮನೋಜ್ ಸಿನ್ಹಾ ಸಂಸದರ ಪಿಂಚಣಿಯನ್ನೂ ಪಡೆಯುತ್ತಿದ್ದಾರೆ!

Update: 2021-11-29 14:33 GMT
ಮನೋಜ ಸಿನ್ಹಾ(file photo:PTI)

ಹೊಸದಿಲ್ಲಿ, ನ.29: ಜಮ್ಮು-ಕಾಶ್ಮೀರದ ಲೆಫ್ಟಿನಂಟ್ ಗವರ್ನರ್ ಮನೋಜ ಸಿನ್ಹಾ ಅವರು ವೇತನವಿರುವ ಹುದ್ದೆಯನ್ನು ಹೊಂದಿದ್ದಾರೆ,ಆದಾಗ್ಯೂ ಅವರ ಹೆಸರು ಸಂಸದರ ಪಿಂಚಣಿಯನ್ನು ಪಡೆಯುತ್ತಿರುವ ಮಾಜಿ ಜನಪ್ರತಿನಿಧಿಗಳ ಪಟ್ಟಿಯಲ್ಲಿ ಇರುವುದನ್ನು ಆರ್ಟಿಐ ಅರ್ಜಿಗೆ ಕೇಂದ್ರ ಸರಕಾರದ ಉತ್ತರವು ಬಹಿರಂಗಗೊಳಿಸಿದೆ.

ಕೇಂದ್ರ ವಿತ್ತಸಚಿವಾಲಯದ ವೆಚ್ಚ ಇಲಾಖೆಯ ಅಧೀನದ ಕೇಂದ್ರೀಯ ಪಿಂಚಣಿ ಲೆಕ್ಕಪತ್ರ ಕಚೇರಿಯು ಆರ್ಟಿಐ ಉತ್ತರದಲ್ಲಿ ಒದಗಿಸಿರುವ ಪಟ್ಟಿಯಲ್ಲಿ ಹಲವಾರು ರಾಜ್ಯಮಟ್ಟದ ಮಂತ್ರಿಗಳು ಮತ್ತು ಶಾಸಕರ ಹೆಸರುಗಳೂ ಇದ್ದು, ಅವರ ಪೈಕಿ ಕೆಲವರು ಬಿಹಾರ ಮತ್ತು ಜಾರ್ಖಂಡ್ ಗೆ ಸೇರಿದವರಾಗಿದ್ದಾರೆ. ಹೆಚ್ಚಿನವರು ತಾವು ಪಿಂಚಣಿಯನ್ನು ಮರಳಿಸುವುದಾಗಿ ತಿಳಿಸಿದ್ದಾರೆ ಎಂದು telegraphindia.com ವರದಿ ಮಾಡಿದೆ.

ಮಾಜಿ ಸಂಸದರೋರ್ವರು ರಾಷ್ಟ್ರಪತಿ ಅಥವಾ ಉಪರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾದರೆ ಅಥವಾ ಯಾವುದೇ ರಾಜ್ಯದ ರಾಜ್ಯಪಾಲರಾಗಿ ಅಥವಾ ಯಾವುದೇ ಕೇಂದ್ರಾಡಳಿತ ಪ್ರದೇಶದ ಆಡಳಿತಗಾರರಾಗಿ ನೇಮಕಗೊಂಡರೆ ಅಥವಾ ಯಾವುದೇ ರಾಜ್ಯದ ವಿಧಾನಸಭೆಗೆ ಆಯ್ಕೆಯಾದರೆ ಅಥವಾ ಕೇಂದ್ರ ಸರಕಾರ ಅಥವಾ ಯಾವುದೇ ರಾಜ್ಯಸರಕಾರದಡಿ ಅಥವಾ ಅವುಗಳ ನಿಗಮಗಳಲ್ಲಿ ಅಥವಾ ಯಾವುದೇ ಸ್ಥಳೀಯ ಪ್ರಾಧಿಕಾರದಲ್ಲಿ ವೇತನವನ್ನು ಪಡೆಯುವ ಹುದ್ದೆಗೆ ನೇಮಕಗೊಂಡರೆ ಅವರ ಅಧಿಕಾರಾವಧಿಯಲ್ಲಿ ಪಿಂಚಣಿಯನ್ನು ಪಡೆಯಲು ಅರ್ಹರಲ್ಲ ಎಂದು ಸಂಸತ್ ಸದಸ್ಯರ ವೇತನ,ಭತ್ಯೆಗಳು ಮತ್ತು ಪಿಂಚಣಿ ಕಾಯ್ದೆ,1954ರ ಕಲಂ 8ಎ(2) ಹೇಳುತ್ತದೆ.
ಲೆಫ್ಟಿನಂಟ್ ಗವರ್ನರ್ ಕೇಂದ್ರಾಡಳಿತ ಪ್ರದೇಶದ ಆಡಳಿತಗಾರರಾಗಿರುತ್ತಾರೆ ಎಂದು ಐಎಎಸ್ ಅಧಿಕಾರಿಯೋರ್ವರು ತಿಳಿಸಿದರು.

ಈ ಬಗ್ಗೆ ವರದಿಯನ್ನು ಪ್ರಕಟಿಸಿರುವ (The Telegraph) ಗುರುವಾರ ಸಿನ್ಹಾ ಅವರ ಎರಡು ಅಧಿಕೃತ ಖಾತೆಗಳಿಗೆ ಕಳುಹಿಸಿದ್ದ ಇ-ಮೇಲ್ಗಳಿಗೆ ಉತ್ತರಿಸಲಾಗಿಲ್ಲ. ಬಿಜೆಪಿಯಲ್ಲಿನ ಮೂಲವೊಂದು ಒದಗಿಸಿದ್ದ ಸಿನ್ಹಾರ ಮೊಬೈಲ್ ನಂಬರ್ ಗೆ ರವಿವಾರ ಹಲವಾರು ಸಲ ಕರೆಗಳನ್ನು ಮಾಡಿದಾಗಲೂ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಬಿಹಾರದ ಆರ್ ಟಿ ಐ ಕಾರ್ಯಕರ್ತ ಶಿವಪ್ರಕಾಶ ರಾಯ್ ಅವರಿಗೆ ಲಭಿಸಿರುವ ಆರ್ಟಿಐ ಉತ್ತರವು ಅ.12, 2021ರ ದಿನಾಂಕವನ್ನು ಹೊಂದಿದೆ. ಸಿನ್ಹಾ ಅವರು 2020 ಆಗಸ್ಟ್ ನಲ್ಲಿ ಜಮ್ಮು-ಕಾಶ್ಮೀರದ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದರು.

ಸಿನ್ಹಾ ಈ ಹಿಂದೆ 1996, 1999 ಮತ್ತು 2014ರಲ್ಲಿ ಉತ್ತರ ಪ್ರದೇಶದ ಘಾಝಿಪುರದಿಂದ ಬಿಜೆಪಿ ಟಿಕೆಟ್ ನಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರು.

ಲೆಫ್ಟಿನಂಟ್ ಗವರ್ನರ್ ಮಾಸಿಕ 2.25 ಲ.ರೂ.ವೇತನದ ಜೊತೆಗೆ ಕಾರ್ಯದರ್ಶಿ ದರ್ಜೆಯ ಕೇಂದ್ರ ಸರಕಾರಿ ಅಧಿಕಾರಿಗಳಿಗೆ ಅನ್ವಯವಾಗುವ ತುಟ್ಟಿಭತ್ಯೆ ಮತ್ತು ಇತರ ಸ್ಥಳೀಯ ಭತ್ಯೆಗಳನ್ನು ಪಡೆಯುತ್ತಾರೆ. ಮಾಜಿ ಲೋಕಸಭಾ ಸದಸ್ಯರು 25,000 ರೂ.ಗಳ ಮಾಸಿಕ ಪಿಂಚಣಿಯ ಜೊತೆಗೆ ಐದು ವರ್ಷಗಳಿಗೂ ಹೆಚ್ಚಿನ ಅವಧಿಯ ಪ್ರತಿ ವರ್ಷಕ್ಕೂ ಮಾಸಿಕ 2,000 ರೂ.ಗಳ ಹೆಚ್ಚುವರಿ ಪಿಂಚಣಿಯನ್ನು ಪಡೆಯುತ್ತಾರೆ.

ಎಲ್ಲ ಮಾಜಿ ಸಂಸದರು ತಾವು ಕಲಂ 8ಎ(2)ರಲ್ಲಿ ಉಲ್ಲೇಖಿಸಲಾಗಿರುವ ಯಾವುದೇ ಹುದ್ದೆಗೆ ಆಯ್ಕೆಯಾಗಿಲ್ಲ ಅಥವಾ ನೇಮಕಗೊಂಡಿಲ್ಲ ಎಂದು ತಾವು ಸದಸ್ಯರಾಗಿದ್ದ ಸದನಗಳಿಗೆ ಪ್ರತಿ ವರ್ಷದ ನವಂಬರ್ ನಲ್ಲಿ ಘೋಷಣೆಯನ್ನು ಸಲ್ಲಿಸಬೇಕಾಗುತ್ತದೆ.

ಆರ್ಟಿಐ ಉತ್ತರದ ಪ್ರಕಾರ ಲೋಕಸಭೆಯ 1,981 ಮತ್ತು ರಾಜ್ಯಸಭೆಯ 741 ಸೇರಿದಂತೆ 2,722 ಮಾಜಿ ಸಂಸದರು ಅಥವಾ ಅವರ ಅವಲಂಬಿತರು ಪಿಂಚಣಿಯನ್ನು ಪಡೆಯುತ್ತಿದ್ದಾರೆ.

ಈ ಪೈಕಿ ಬಿಹಾರದ ಕೈಗಾರಿಕಾ ಸಚಿವ ಸೈಯದ್ ಶಾನವಾಝ್ ಹುಸೇನ್ ಒಬ್ಬರಾಗಿದ್ದಾರೆ. ಈ ವರ್ಷದ ಜ.22ರಂದು ಎಂಎಲ್ಸಿಯಾಗಿದ್ದ ಅವರು ಫೆ.9ರಂದು ಸಚಿವರಾಗಿದ್ದರು. ಈ ಹಿಂದೆ ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಅವರು ಅಟಲ್ಬಿಹಾರಿ ವಾಜಪೇಯಿ ಸರಕಾರದಲ್ಲಿ ನಾಗರಿಕ ವಾಯುಯಾನ ಮತ್ತು ಜವಳಿ ಸಚಿವರಾಗಿದ್ದರು.

‘ನನಗೆ ನಿಯಮಗಳು ಗೊತ್ತಿವೆ. ನನ್ನ ಬ್ಯಾಂಕ್ ಖಾತೆಗೆ ಜಮೆಯಾಗಿರುವ ಲೋಕಸಭಾ ಪಿಂಚಣಿಯಿಂದ ಒಂದೇ ಒಂದು ರೂಪಾಯಿಯನ್ನು ನಾನು ತೆಗೆದುಕೊಂಡಿಲ್ಲ. ಸಂಸತ್ತಿನ ಪಿಂಚಣಿ ಇಲಾಖೆಗೆ ನಾನು ಮಾಹಿತಿ ನೀಡಿದ್ದೇನೆ ಮತ್ತು ಹಣವನ್ನು ಮರಳಿಸುತ್ತೇನೆ ’ಎಂದು ಹುಸೇನ್ ಪತ್ರಿಕೆಗೆ ತಿಳಿಸಿದ್ದಾರೆ.

ಪಟ್ಟಿಯಲ್ಲಿರುವ ಬಿಜೆಪಿ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಮತ್ತು ಹಾಲಿ ಎಂಎಲ್ಸಿ ಸಂಜಯ ಪಾಸ್ವಾನ್ ಅವರೂ ಸಂಸತ್ತು ಬಯಸಿದರೆ ತಾನು ಪಿಂಚಣಿ ಹಣವನ್ನು ಮರಳಿಸುತ್ತೇನೆ ಎಂದಿದ್ದಾರೆ.

ಪಿಂಚಣಿ ನಿಯಮಗಳ ಬಗ್ಗೆ ತನಗೆ ತಿಳಿದಿರಲಿಲ್ಲ ಎಂದು ಹೇಳಿದ ಬಿಹಾರದ ಗಣಿ ಮತ್ತು ಭೂವಿಜ್ಞಾನ ಸಚಿವ ಜನಕರಾಮ ಅವರು ಈ ಬಗ್ಗೆ ತಾನು ಲೋಕಸಭೆಗೆ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.

2004-2014ರ ಅವಧಿಯಲ್ಲಿ ಲೋಕಸಭಾ ಸದಸ್ಯ ಹಾಗೂ 2004-200ರ ಅವಧಿಯಲ್ಲಿ ಮನಮೋಹನ್ ಸಿಂಗ್ ಸರಕಾರದಲ್ಲಿ ಸಹಾಯಕ ಬುಡಕಟ್ಟು ವ್ಯವಹಾರಗಳ ಸಚಿವರಾಗಿದ್ದ ಜಾರ್ಖಂಡ್ ನ ಹಣಕಾಸು ಸಚಿವ ಹಾಗೂ ಕಾಂಗ್ರೆಸ್ ನಾಯಕ ರಾಮೇಶ್ವರ ಓರಾನ್ ಅವರೂ ಪಟ್ಟಿಯಲ್ಲಿದ್ದಾರೆ.

‘ನಾನು ಲೋಕಸಭಾ ಪಿಂಚಣಿಯನ್ನು ನಿಲ್ಲಿಸುವುದಿಲ್ಲ, ಏಕೆಂದರೆ ಅದನ್ನು ಮರಳಿ ಆರಂಭಿಸುವುದು ದೊಡ್ಡ ಕಿರಿಕಿರಿಯ ಕೆಲಸವಾಗಿದೆ ಮತ್ತು ಬಹಳಷ್ಟು ಅಲೆಯಬೇಕಾಗುತ್ತದೆ. ನಾನು ವೈಯಕ್ತಿಕವಾಗಿ ಈ ಸಮಸ್ಯೆಯನ್ನು ಅನುಭವಿಸಿದ್ದೇನೆ. ನನ್ನ ಈಗಿನ ವೇತನದಲ್ಲಿ ಪಿಂಚಣಿಗೆ ಸಮನಾದ ಮೊತ್ತದ ಕಡಿತಕ್ಕೆ ನಾನು ಸಿದ್ಧನಿದ್ದೆನೆ ’ಎಂದು ಮಾಜಿ ಐಪಿಎಸ್ ಅಧಿಕಾರಿಯೂ ಆಗಿರುವ ಓರಾನ್ ತಿಳಿಸಿದರು.

ಸರಕಾರವು ಪಿಂಚಣಿ ನಿಯಮಗಳನ್ನು ಉಲ್ಲಂಘಿಸುತ್ತಿರುವ ಎಲ್ಲ ಮಾಜಿ ಸಂಸದರನ್ನು ಪತ್ತೆ ಹಚ್ಚಬೇಕು ಮತ್ತು ಅವರಿಂದ ಹಣವನ್ನು ವಸೂಲು ಮಾಡಬೇಕು ಎಂದು ಆರ್ಟಿಐ ಕಾರ್ಯಕರ್ತ ರಾಯ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News