ಯುರೋಪಿಯನ್ ಯೂನಿಯನ್ ವೀಕ್ಷಕರಿಂದ ಬೇಹುಗಾರಿಕೆ: ವೆನೆಝುವೆಲಾ ಅಧ್ಯಕ್ಷರ ಆರೋಪ

Update: 2021-11-29 18:43 GMT
ಸಾಂದರ್ಭಿಕ ಚಿತ್ರ:PTI

ಕರಾಕಸ್, ನ.29: ಕಳೆದ ವಾರ ದೇಶದಲ್ಲಿ ನಡೆದಿದ್ದ ಪ್ರಾದೇಶಿಕ ಚುನಾವಣೆಯ ವೀಕ್ಷಕರಾಗಿ ಆಗಮಿಸಿದ್ದ ಯುರೋಪಿಯನ್ ಯೂನಿಯನ್‌ನ ವೀಕ್ಷಕರು ಗೂಢಚಾರಿಗಳಾಗಿದ್ದರು ಮತ್ತು ದೇಶದ ಚುನಾವಣಾ ಪ್ರಕ್ರಿಯೆಗೆ ಕಳಂಕ ತರಲು ಪ್ರಯತ್ನಿಸಿದ್ದರು ಎಂದು ವೆನೆಝುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಆರೋಪಿಸಿದ್ದಾರೆ.

ಚುನಾವಣೆ ಅದ್ಭುತ, ದೋಷರಹಿತ ರೀತಿಯಲ್ಲಿ ನಡೆದಿದೆ. ಆದರೆ ಚುನಾವಣಾ ವೀಕ್ಷಕರೆಂದು ಕರೆಸಿಕೊಂಡ ಗೂಢಚಾರರ ಗುಂಪೊಂದು ದೇಶದೆಲ್ಲೆಡೆ ಮುಕ್ತವಾಗಿ ಸಂಚರಿಸುತ್ತಾ, ದೇಶದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿತಿಗತಿಯ ಬಗ್ಗೆ ಗೂಢಚಾರಿಕೆ ಮಾಡಿದೆ ಎಂದು ಟಿವಿ ವಾಹಿನಿಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ನಿಕೋಲಸ್ ಮಡುರೋ ಪ್ರತಿಪಾದಿಸಿದ್ದಾರೆ.

ಈ ಹಿಂದಿನ ಬಾರಿಗಿಂತ ಈ ಬಾರಿಯ ಚುನಾವಣೆ ಉತ್ತಮ ಪರಿಸ್ಥಿತಿಯಲ್ಲಿ ನಡೆದಿದೆ. ಆದರೂ ಕೆಲವೊಂದು ಅಹಿತಕರ ಘಟನೆ ನಡೆದಿದೆ ಎಂದು ಯುರೋಪಿಯನ್ ಯೂನಿಯನ್‌ನ ವೀಕ್ಷಕರು ವರದಿ ಸಲ್ಲಿಸಿದ್ದರು. ಕೆಲವು ಅಭ್ಯರ್ಥಿಗಳ ಮೇಲೆ ಏಕಪಕ್ಷೀಯವಾಗಿ ನಿಷೇಧ ಹೇರಿರುವುದು, ಮತದಾನ ಕೇಂದ್ರದಲ್ಲಿ ಮತಚಲಾವಣೆಗೆ ವಿಳಂಬವಾಗಿ ಅವಕಾಶ ನೀಡಿರುವುದು, ಮತಗಟ್ಟೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಭದ್ರತಾ ಸಿಬಂದಿಗಳ ನಿಯೋಜನೆಗೆ ಬಗ್ಗೆ ವೀಕ್ಷಕರು ಆತಂಕ ಸೂಚಿಸಿದ್ದರು. ಕಳೆದ 4 ವರ್ಷಗಳಲ್ಲಿ ಮೊದಲ ಬಾರಿಗೆ ವಿಪಕ್ಷದ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು. ಮಡುರೋ ನೇತೃತ್ವದ ಸೋಷಿಯಲಿಸ್ಟ್ ಪಕ್ಷ ಹೆಚ್ಚಿನ ಸ್ಥಾನಗಳಲ್ಲಿ ಜಯ ಸಾಧಿಸಿದೆ.

ವೆನೆಝುವೆಲಾದಲ್ಲಿ ಚುನಾವಣೆ ನಿಷ್ಪಕ್ಷಪಾತ ರೀತಿಯಲ್ಲಿ ನಡೆಯುತ್ತಿಲ್ಲ ಎಂದು ದೂರಿ 2018ರಿಂದ ಪ್ರತಿಪಕ್ಷಗಳು ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸಿಲ್ಲ. ಆದರೆ ಈ ಬಾರಿ ಯುರೋಪಿಯನ್ ಯೂನಿಯನ್ ವೀಕ್ಷಕರ ನಿಯೋಜನೆಯೊಂದಿಗೆ ನಡೆದ ಚುನಾವಣೆಯಲ್ಲಿ ಕೆಲವು ಸ್ಥಾನಗಳಲ್ಲಿ ಪ್ರತಿಪಕ್ಷಗಳು ಸ್ಪರ್ಧಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News