ರಾಜ್ಯದಲ್ಲಿ 'ಡೆಲ್ಟಾ'ಗಿಂತ ಭಿನ್ನ ವೈರಸ್ ಪ್ರಭೇದ ಪತ್ತೆ : ಆರೋಗ್ಯ ಸಚಿವ ಡಾ.ಸುಧಾಕರ್

Update: 2021-11-30 02:30 GMT

ಬೆಂಗಳೂರು: ದಕ್ಷಿಣ ಆಫ್ರಿಕಾದಿಂದ ಆಗಮಿಸಿದ ವ್ಯಕ್ತಿಯೊಬ್ಬರಲ್ಲಿ ಕೋವಿಡ್-19 ವೈರಸ್‌ನ ಡೆಲ್ಟಾ ಪ್ರಬೇಧಕ್ಕಿಂತ ಭಿನ್ನವಾದ ಪ್ರಭೇದದ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಬಹಿರಂಗಪಡಿಸಿದ್ದಾರೆ.

ದೇಶಾದ್ಯಂತ ಎಚ್ಚರಿಕೆಯ ಗಂಟೆ ಬಾರಿಸಿರುವ ಒಮಿಕ್ರಾನ್ ಪ್ರಬೇಧದ ಬಗ್ಗೆ ರಾಜ್ಯ ಸರ್ಕಾರ ತೀವ್ರ ನಿಗಾ ವಹಿಸಿದೆ ಎಂದು ಅವರು ಹೇಳಿದ್ದಾರೆ.

ಈ ಶಂಕಿತ ಮಾದರಿಯನ್ನು ಜೆನೋನ್ ಸ್ವೀಕ್ವೆನ್ಸಿಂಗ್‌ಗಾಗಿ ಕಳುಹಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ದಕ್ಷಿಣ ಆಫ್ರಿಕಾದಿಂದ ಆಗಮಿಸಿದ್ದ ಇಬ್ಬರಲ್ಲಿ ಕೋವಿಡ್-19 ಸೋಂಕು ಬಂದಿದ್ದು, ಈ ಪೈಕಿ ಒಂದು ಡೆಲ್ಟಾ ಪ್ರಭೇದದ ವೈರಸ್ ಸೋಂಕು ಆಗಿದೆ.

ಏತನ್ಮಧ್ಯೆ ಡಾ.ಸುಧಾಕರ್ ಅವರು ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳ ಜತೆ ಸಭೆ ನಡೆಸಿದ್ದು, ದಕ್ಷಿಣ ಆಫ್ರಿಕಾ, ಬೋತ್ಸುವಾನಾ ಮತ್ತು ಹಾಂಕಾಂಗ್‌ನಿಂದ ಭಾರತಕ್ಕೆ ಪ್ರಯಾಣಿಕರು ಆಗಮಿಸುವುದನ್ನು ಸಂಪೂರ್ಣ ನಿಷೇಧಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರವನ್ನು ಒತ್ತಾಯಿಸಿದ್ದಾರೆ.

ಕೇಂದ್ರ ಆರೋಗ್ಯ ಇಲಾಖೆ ಮತ್ತು ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ ಜತೆ ರಾಜ್ಯ ನಿಕಟವಾದ ಸಂಪರ್ಕ ಹೊಂದಿದೆ ಎಂದು ಸಚಿವರು ವಿವರಿಸಿದ್ದಾರೆ.

"ಕಳೆದ ಒಂಬತ್ತು ತಿಂಗಳಿಂದ ಡೆಲ್ಟಾ ಪ್ರಬೇಧ ಇತ್ತು. ಆದರೆ ಒಂದು ಮಾದರಿ ಒಮಿಕ್ರಾನ್ ಎಂದು ನೀವು ಹೇಳುತ್ತಿದ್ದೀರಿ. ಆದರೆ ಇದನ್ನು ಅಧಿಕೃತವಾಗಿ ನಾನು ಹೇಳುವಂತಿಲ್ಲ. ಐಸಿಎಂಆರ್ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳ ಜತೆ ನಾನು ಸಂಪರ್ಕದಲ್ಲಿದ್ದೇನೆ" ಎಂದು ಸುದ್ದಿಗಾರರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ಒಮಿಕ್ರಾನ್ ಪ್ರಬೇಧದ ಬಗ್ಗೆ ವಿವರವಾದ ವರದಿ ಕೇಳಿರುವುದಾಗಿ ಅವರು ಹೇಳಿದರು. ಡಿಸೆಂಬರ್ 1ರಂದು ಜೆನೋಮ್ ಸೀಕ್ವೆನ್ಸಿಂಗ್ ಬಳಿಕ ಒಮಿಕ್ರಾನ್ ಹೇಗೆ ವರ್ತಿಸುತ್ತದೆ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ. ಅದಕ್ಕೆ ಅನುಸಾರವಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News