​ರಾಜ್ಯದಲ್ಲಿ ಇಂಟರ್‌ನೆಟ್ ಬಳಸುವ ಮಹಿಳೆಯರೆಷ್ಟು ಗೊತ್ತೇ ?

Update: 2021-11-30 02:37 GMT
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕದ ಪ್ರತಿ ಮೂವರು ಮಹಿಳೆಯರ ಪೈಕಿ ಒಬ್ಬರು ಮಾತ್ರ ಇದುವರೆಗೆ ಇಂಟರ್‌ನೆಟ್ ಬಳಕೆ ಮಾಡಿದ್ದಾರೆ. ರಾಜ್ಯದಲ್ಲಿ ಕೆಲ ಸೂಚಕಗಳು ಸುಧಾರಣೆಯಾಗಿದ್ದರೂ, ರಾಜ್ಯದ ಒಟ್ಟು ಮಹಿಳೆಯರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ 10 ವರ್ಷಕ್ಕಿಂತ ಅಧಿಕ ಅವಧಿಯನ್ನು ಶಾಲೆಗಳಲ್ಲಿ ಕಳೆದಿಲ್ಲ ಎನ್ನುವ ಅಂಶ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್-5)ಯಿಂದ ಬಹಿರಂಗವಾಗಿದೆ.

ದೇಶದಲ್ಲಿ ಅತಿಹೆಚ್ಚು ಜನಸಂಖ್ಯೆ ಇರುವ ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ- ತೆಲಂಗಾಣ, ಮಧ್ಯಪ್ರದೇಶ, ತಮಿಳುನಾಡು, ರಾಜಸ್ಥಾನ, ಕರ್ನಾಟಕ ಮತ್ತು ಗುಜರಾತ್ ಹೀಗೆ 10 ರಾಜ್ಯಗಳ ರಾಜ್ಯವಾರು ಅಂಕಿ ಅಂಶಗಳನ್ನು ವಿಶ್ಲೇಷಿಸಿದಾಗ ಒಂದೇ ಪ್ರವೃತ್ತಿ ಕಂಡುಬಂದಿದೆ. ಆದಾಗ್ಯೂ ಕೆಲ ರಾಜ್ಯಗಳಲ್ಲಿ ಪರಿಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದೆ.

ಬಹುತೇಕ ಎಲ್ಲ ರಾಜ್ಯಗಳಲ್ಲಿ ಇಂಟರ್‌ ನೆಟ್ ಬಳಸುವ ಪುರುಷರ ಸಂಖ್ಯೆ ಅಧಿಕ. ಕೆಲ ರಾಜ್ಯಗಳಲ್ಲಂತೂ ಇಂಟರ್‌ನೆಟ್ ಬಳಸುವ ಮಹಿಳೆಯರ ಸಂಖ್ಯೆಯ ಎರಡು ಪಟ್ಟು ಪುರುಷರು ಇಂಟರ್‌ನೆಟ್ ಬಳಸುತ್ತಾರೆ. ಆದರೆ 10 ವರ್ಷಕ್ಕಿಂತ ಹೆಚ್ಚು ಅವಧಿಯನ್ನು ಶಾಲೆಗಳಲ್ಲಿ ಕಳೆಯುವ ಮಾನದಂಡದಲ್ಲಿ ಪುರುಷರು ಹಾಗೂ ಮಹಿಳೆಯರ ಅನುಪಾತದಲ್ಲಿ ಸುಧಾರಣೆ ಕಂಡುಬಂದಿದೆ.

ಎನ್‌ಎಫ್‌ಎಚ್‌ಎಸ್-5 ಪ್ರಕಾರ ಕರ್ನಾಟಕದಲ್ಲಿ ಶೇಕಡ 35ರಷ್ಟು ಮಹಿಳೆಯರು ಇಂಟರ್‌ನೆಟ್ ಬಳಸಿದ್ದಾರೆ. ಇಂಟರ್‌ನೆಟ್ ಬಳಸುವ ಪುರುಷರ ಪ್ರಮಾಣ ಶೇಕಡ 62.4ರಷ್ಟಿದೆ. ಮಹಾರಾಷ್ಟ್ರದಲ್ಲಿ ಈ ಪ್ರಮಾಣ ಅನುಕ್ರಮವಾಗಿ ಶೇಕಡ 28 ಮತ್ತು 61.5ರಷ್ಟಿದ್ದರೆ, ಗುಜರಾತ್‌ನಲ್ಲಿ 30.8 ಹಾಗೂ 58.9 ಆಗಿದೆ.

ಬಿಹಾರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಮತ್ತು ಆಂಧ್ರ-ತೆಲಂಗಾಣದಲ್ಲಿ ಶೇಕಡ 30 ಮಹಿಳೆಯರು ಇಂಟರ್‌ನೆಟ್ ಬಳಸುತ್ತಾರೆ. ಪಶ್ಚಿಮ ಬಂಗಾಳ (ಶೇಕಡ 47) ಹೊರತುಪಡಿಸಿದರೆ ಉಳಿದೆಲ್ಲ ರಾಜ್ಯಗಳಲ್ಲಿ ಶೇಕಡ 50ಕ್ಕಿಂತ ಹೆಚ್ಚು ಪುರುಷರು ಇಂಟರ್‌ ನೆಟ್ ಬಳಕೆ ಮಾಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News