12 ಸಂಸದರು ಕ್ಷಮೆ ಯಾಚಿಸಿದರೆ ಅಮಾನತು ಹಿಂಪಡೆಯಲು ಪರಿಶೀಲಿಸಬಹುದು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Update: 2021-11-30 05:23 GMT
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಹೊಸದಿಲ್ಲಿ: ಅಸಭ್ಯ ವರ್ತನೆಗಾಗಿ 12 ಪ್ರತಿಪಕ್ಷಗಳ ಸಂಸದರನ್ನು ಅಮಾನತು ಗೊಳಿಸುವಂತೆ ಸರಕಾರವನ್ನು 'ಕಡ್ಡಾಯವಾಗಿ ಒತ್ತಾಯಿಸಲಾಗಿದೆ'. ಆದರೆ ಅವರು ಸ್ಪೀಕರ್‌ಗೆ ಕ್ಷಮೆಯಾಚಿಸಿದರೆ ಹಾಗೂ  ಸದನದ ಕ್ಷಮೆಯಾಚಿಸಿದರೆ ಅವರ ಅಮಾನತು ಹಿಂಪಡೆಯಲು ಪರಿಗಣಿಸಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮಂಗಳವಾರ ಬೆಳಿಗ್ಗೆ ಹೇಳಿದ್ದಾರೆ.

“ಸದನದ ಘನತೆ ಕಾಪಾಡುವ ನಿಟ್ಟಿನಲ್ಲಿ ಸರಕಾರವು ಕಡ್ಡಾಯವಾಗಿ ಅಮಾನತುಗೊಳಿಸುವ ಈ ಪ್ರಸ್ತಾವನೆಯನ್ನು ಸದನದ ಮುಂದೆ ಇಡುವಂತೆ ಒತ್ತಾಯಿಸಲಾಯಿತು. ಆದರೆ ಈ 12 ಮಂದಿ ಸಂಸದರು ತಮ್ಮ ಅನುಚಿತ ವರ್ತನೆಗಾಗಿ ಸ್ಪೀಕರ್ ಹಾಗೂ  ಸದನದಲ್ಲಿ ಕ್ಷಮೆಯಾಚಿಸಿದರೆ ಅವರ  ಪ್ರಸ್ತಾವನೆಯನ್ನು ಮುಕ್ತ ಹೃದಯದಿಂದ ಸಕಾರಾತ್ಮಕವಾಗಿ ಪರಿಗಣಿಸಲು ಸರಕಾರವೂ ಸಿದ್ಧವಾಗಿದೆ'' ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ, ಮುಂಗಾರು ಅಧಿವೇಶನದ ಕೊನೆಯ ದಿನವಾದ ಆಗಸ್ಟ್ 11 ರಂದು ಪ್ರತಿಪಕ್ಷಗಳು ಹೇಗೆ ವರ್ತಿಸಿದವು ಎಂಬುದು ಇಡೀ ದೇಶಕ್ಕೆ ತಿಳಿದಿದೆ. ಎಲ್ಲಾ ಕ್ಲಿಪ್ಪಿಂಗ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಲಭ್ಯವಿವೆ, ಏಕೆಂದರೆ ಅವರೇ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದಾರೆ. ಇದು ಕ್ರಮ ತೆಗೆದುಕೊಳ್ಳಲು ಲಭ್ಯವಿರುವ ಮೊದಲ ಅವಕಾಶ ಹಾಗೂ ಸಭಾಧ್ಯಕ್ಷರು ಕ್ರಮ ಕೈಗೊಂಡಿದ್ದಾರೆ" ಎಂದು ಅವರು ಹೇಳಿದರು.

ಮುಂಗಾರು ಅಧಿವೇಶನದ ಕೊನೆಯ ದಿನದಂದು ಸದನದಲ್ಲಿ ನಡೆಸಿದ್ದ ಭಾರೀ ಕೋಲಾಹಲಕ್ಕೆ ರಾಜ್ಯಸಭೆಯ 12 ಪ್ರತಿಪಕ್ಷ ಸಂಸದರನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಿಂದ ಅಮಾನತುಗೊಳಿಸಲಾಗಿದೆ.

ಅಮಾನತುಗೊಳಿಸಿರುವುದನ್ನು ಪ್ರತಿಪಕ್ಷಗಳು ಖಂಡಿಸಿದ್ದು, ಇದು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News