ಪ್ರಧಾನಿ ನರೇಂದ್ರ ಮೋದಿ ಭೇಟಿ ಬಗ್ಗೆ ದೇವೇಗೌಡ ಹೇಳಿದ್ದೇನು?

Update: 2021-11-30 14:41 GMT

ಹೊಸದಿಲ್ಲಿ, ನ.30: ಹಾಸನದಲ್ಲಿ ಐಐಟಿ ಸ್ಥಾಪನೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದೆ. ನಾನೇ ಪ್ರಧಾನಿಯವರ ಭೇಟಿಗೆ ಕಾಲಾವಕಾಶ ಕೇಳಿದ್ದೆ. ಮೊದಲಿನಿಂದಲೂ ಪ್ರಧಾನಿ ನನ್ನ ಜೊತೆ ಆತ್ಮೀಯವಾಗೆ ನಡೆದುಕೊಂಡಿದ್ದಾರೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಮಂಗಳವಾರ ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಹಾಸನಕ್ಕೆ ಐಐಟಿ ಬೇಕು ಅಂತ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದೆ. ಆದರೆ ಕೇಂದ್ರ ಶಿಕ್ಷಣ ಸಚಿವರು ಆಗುವುದಿಲ್ಲ ಎಂದಿದ್ದರು. ಹಾಗಾಗಿ ಇವತ್ತು ಖುದ್ದು ಪ್ರಧಾನಿಯನ್ನು ಭೇಟಿಯಾಗಿ ವಿವರಿಸಿ ಮತ್ತೊಮ್ಮೆ ಮನವಿ ಮಾಡಿದೆ. ಸಚಿವೆ ಸ್ಮೃತಿ ಇರಾನಿ ಕಾಲದಿಂದಲೂ ಪತ್ರ ವ್ಯವಹಾರ ನಡೆಯುತ್ತಿದೆ ಎಂದರು.

ಈ ಹಿಂದೆ ಸಚಿವ ಧರ್ಮೇಂದ್ರ  ಪ್ರಧಾನ್ ಅವರಿಗೆ ಮನವಿ ಮಾಡಿದ್ದೆ. ಆದರೆ ಐಐಟಿ ಸ್ಥಾಪನೆ ಸಾಧ್ಯವಿಲ್ಲ ಎಂದು ಮರು ಪತ್ರ ಬರೆದಿದ್ದರು. ಈ ಹಿನ್ನೆಲೆ ನೇರವಾಗಿ ಪ್ರಧಾನಿಯನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಐಐಟಿ ಯೋಜನೆ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರ ಕರ್ನಾಟಕದಲ್ಲಿದ್ದಾಗ ಮಾಡಿದ ಯೋಜನೆ. ಇದು ಮತ್ತೆ ಪ್ರಧಾನಿ ಮೋದಿ ಬಳಿ ಚರ್ಚೆ ಮಾಡಿದ್ದೇನೆ. ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬಳಿ ಚರ್ಚೆ ಮಾಡುವುದಾಗಿ ಹೇಳಿದ್ದಾರೆ. ನನ್ನ ಆರೋಗ್ಯ ಹಾಗೂ ಮಂಡಿ ನೋವಿನ ಬಗ್ಗೆಯೂ ಪ್ರಧಾನಿ ವಿಚಾರಿಸಿದರು ಎಂದು ದೇವೇಗೌಡ ಹೇಳಿದರು.

ತುಮಕೂರು ಮತ್ತು ಮಂಡ್ಯದಲ್ಲಿ ವಿಧಾನಪರಿಷತ್ ಪರಿಷತ್ ಚುನಾವಣೆಗೆ ಹೋಗಿ ನಾನು ಪ್ರಚಾರ ಮಾಡುತ್ತೇನೆ. ಕುಮಾರಸ್ವಾಮಿ ಆರು ಕ್ಷೇತ್ರದಲ್ಲಿ ಹೋಗಿ ಪ್ರಚಾರ ಮಾಡುತ್ತಾರೆ. ಎಲ್ಲ ಕಡೆ ಅಭ್ಯರ್ಥಿ ಹಾಕಲು ನಮ್ಮ ಹತ್ತಿರ ಹಣವಿಲ್ಲ. ಹಾಗಾಗಿ, ಎಲ್ಲ ಕಡೆ ಅಭ್ಯರ್ಥಿಗಳನ್ನು ಹಾಕಿಲ್ಲ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News