ಅಜ್ಜಂಪುರ: ಅಂಗಡಿಯಿಂದ 2.60 ಲಕ್ಷ ರೂ. ಮೌಲ್ಯದ ಮೊಬೈಲ್ ಕಳವು ಪ್ರಕರಣ; ಮೂವರು ಆರೋಪಿಗಳ ಬಂಧನ

Update: 2021-11-30 17:20 GMT

ಚಿಕ್ಕಮಗಳೂರು, ನ.30: ಮೊಬೈಲ್ ಅಂಗಡಿಯ ಬೀಗ ಒಡೆದು 2.60 ಲಕ್ಷ ರೂ. ಮೌಲ್ಯದ ಮೊಬೈಲ್‍ಗಳನ್ನು ಕಳ್ಳತನ ಮಾಡಿದ್ದ ಮೂವರು ಯುವಕರನ್ನು ಅಜ್ಜಂಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ನ.25ರಂದು ಅಜ್ಜಂಪುರ ಪಟ್ಟಣದಲ್ಲಿ ಮೊಬೈಲ್ ಅಂಗಡಿ ಹೊಂದಿದ್ದ ಉಡೇವಾ ಗ್ರಾಮದ ಮಧುಕುಮಾರ್ ಎಂಬವರ ಅಂಗಡಿಯ ಶಟರ್ ಒಡೆದಿದ್ದ ಕಳ್ಳರು ಅಂಗಡಿಯಲ್ಲಿದ್ದ ವಿವಿಧ ಕಂಪೆನಿಯ 2 ಲಕ್ಷ 60 ಸಾವಿರ ರೂ. ಮೌಲ್ಯದ 16 ಮೊಬೈಲ್‍ಗಳನ್ನು ಕಳ್ಳತನ ಮಾಡಿದ್ದರು. ಈ ಸಂಬಂಧ ಅಜ್ಜಂಪುರ ಪೊಲೀಸರಿಗೆ ಅಂಗಡಿ ಮಾಲಕ ಮಧುಕುಮಾರ್ ದೂರು ನೀಡಿದ್ದರು. 

ದೂರಿನ ಮೇರೆಗೆ ಚಿಕ್ಕಮಗಳೂರು ಎಸ್ಪಿ ಎಂ.ಎಚ್.ಅಕ್ಷಯ್, ಎಎಸ್ಪಿ ಶೃತಿ, ಡಿವೈಎಸ್ಪಿ ಏಗನಗೌಡರ್ ಅವರ ಮಾರ್ಗದರ್ಶನದಲ್ಲಿ ಅಜ್ಜಂಪುರ ಪೊಲೀಸ್ ಠಾಣೆಯ ಪಿಐ ಲಿಂಗರಾಜು ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ತಂಡ ರಚಿಸಿದ್ದು, ತನಿಖೆ ಆರಂಭಿಸಿದ್ದ ತಂಡಕ್ಕೆ ನ.29ರಂದು ಸಿಕ್ಕ ಖಚಿತ ಮಾಹಿತಿ ಮೇರೆಗೆ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಪಟ್ಟಣದ ಬೀರೂರು ರಸ್ತೆಯಲ್ಲಿರುವ ಟೀ ಅಂಗಡಿ ಬಳಿ ದಾಳಿ ನಡೆಸಿ ಮೊಬೈಲ್ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ದಾವಣಗೆರೆ ಜಿಲ್ಲೆ ಚೆನ್ನಗಿರಿ ತಾಲೂಕಿನ ಎರೆಹಳ್ಳಿ ನಿವಾಸಿ, ಸ್ವಿಗ್ಗಿ ಕಂಪೆನಿ ಉದ್ಯೋಗಿ ಸುಬ್ರಹ್ಮಣ್ಯ(19), ಚೆನ್ನಗಿರಿ ಪಟ್ಟಣದ ನರಸಿಂಹ(19) ಹಾಗೂ ಪ್ರಜ್ವಲ್ ಎಂದು ಗುರುತಿಸಲಾಗಿದ್ದು, ಆರೋಪಿಗಳಿಂದ 2ಲಕ್ಷ 6 ಸಾವಿರ ರೂ. ಮೌಲ್ಯದ ವಿವಿಧ ಕಂಪೆನಿಗಳ 6 ಮೊಬೈಲ್‍ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಅಕ್ಷಯ್ ಎಂ.ಎಚ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಅಜ್ಜಂಪುರ ಪೊಲೀಸ್ ಠಾಣೆಯ ಪಿಐ ಲಿಂಗರಾಜು, ಪಿಎಸ್ಸೈ ಬಸವರಾಜು, ಸಿಬ್ಬಂದಿ ಯತೀಶ್, ಮಹೇಶ್ವರಪ್ಪ, ಬಸವರಾಜಪ್ಪ, ಶ್ರೀನಿವಾಸ, ಕಿರಣ್‍ಕುಮಾರ್, ಚಾಲಕ ಶಿವಾನಂದ್, ಡಿಪಿಒ ನಯಾಜ್ ಭಾಗವಹಿಸಿದ್ದು, ಪೊಲೀಸರ ಈ ತಂಡಕ್ಕೆ ಎಸ್ಪಿ ಬಹುಮಾನ ಘೋಷಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News