ನೂತನ ಸಂಸತ್ ಭವನ, ಸೆಂಟ್ರಲ್ ವಿಸ್ಟಾ ರಾಷ್ಟ್ರೀಯ ಪ್ರಾಮುಖ್ಯತೆ ಯೋಜನೆ: ಸುಪ್ರೀಂಕೋರ್ಟ್ ಗೆ ಕೇಂದ್ರ

Update: 2021-12-01 17:27 GMT
ಸೆಂಟ್ರಲ್ ವಿಸ್ಟಾ ರಸ್ತೆ ನಿರ್ಮಾಣ ಕಾಮಗಾರಿ(photo:PTI)

ಹೊಸದಿಲ್ಲಿ, ಡಿ.1: ನೂತನ ಸಂಸತ್ ಕಟ್ಟಡ ಹಾಗೂ ಸೆಂಟ್ರಲ್ ವಿಸ್ಟಾ ರಸ್ತೆ ನಿರ್ಮಾಣ ಕಾಮಗಾರಿ ರಾಷ್ಟ್ರೀಯ ಪ್ರಾಮುಖ್ಯತೆಯ ಯೋಜನೆಗಳಾಗಿದ್ದು, ಅವುಗಳ ನಿರ್ಮಾಣದ ಹಂತದಲ್ಲಿ ಪರಿಸರ ಮಾಲಿನ್ಯವಾಗುವುದನ್ನು ಕನಿಷ್ಠಗೊಳಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರಕಾರವು ಸುಪ್ರೀಂಕೋರ್ಟ್‌ಗೆ ಬುಧವಾರ ತಿಳಿಸಿದೆ.

ರಾಷ್ಟ್ರದ ರಾಜಧಾನಿಯಲ್ಲಿ ವಾಯುಮಾಲಿನ್ಯವು ಅಪಾಯಕಾರಿ ಮಟ್ಟವನ್ನು ತಲುಪಿರುವ ಹಿನ್ನೆಲೆಯಲ್ಲಿ ನಿರ್ಮಾಣ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿಷೇಧಿಸಿದ್ದರೂ ಕಾಮಗಾರಿ ಯಾಕೆ ಮುಂದುವರಿದಿದೆ ಎಂಬ ಸುಪ್ರೀಂಕೋರ್ಟ್ ಪ್ರಶ್ನೆಗೆ ಹೀಗೆ ಕೇಂದ್ರ ಹೀಗೆ ಉತ್ತರಿಸಿದೆ.

‘‘ಈ ಯೋಜನೆಯು ಕಟ್ಟಡ ನಿರ್ಮಾಣ ಹಾಗೂ ಧ್ವಂಸಗೊಂಡ ಕಟ್ಟಡದ ತ್ಯಾಜ್ಯಗಳ ನಿರ್ವಹಣೆ ಕುರಿತ ನಿಯಮಾವಳಿಗಳ ಪಾಲನೆಗೆ ಬದ್ಧವಾಗಿದೆ. ಪರಿಸರ ಮಾಲಿನ್ಯವಾಗದಿರುವುದನ್ನು ಖಾತರಿಪಡಿಸುವಂತಹ ಎಲ್ಲಾ ಶರತ್ತುಗಳನ್ನು ಕೂಡಾ ವಿಧಿಸಲಾಗಿದೆ’’ ಎಂದು ಕೇಂದ್ರ ಸರಕಾರವು ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

 ಸೆಂಟ್ರಲ್ ವಿಸ್ಟಾ ಯೋಜನೆಯಿಂದ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆಯೆಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಈ ಬಗ್ಗೆ ಕೇಂದ್ರದ ಪ್ರತಿಕ್ರಿಯೆಯನ್ನು ಕೇಳಇತ್ತು.

ಫಿರ್ಯಾದುದಾರ ಆದಿತ್ಯ ದುಬೆ ಅವರ ಪರವಾಗಿ ವಾದಿಸಿದ ನ್ಯಾಯವಾದಿ ವಿಕಾಸ್‌ಸಿಂಗ್ ಅವರು ಶುದ್ಧವಾದ ವಾಯು ಮತ್ತು ಶುದ್ಧವಾದ ಗಾಳಿ ಒಳಗೊಂಡ ದಿಲ್ಲಿ ಹಾಗೂ ರಾಷ್ಟ್ರ ರಾಜಧಾನಿ ಪ್ರದೇಶದ (ಎನ್‌ಸಿಆರ್) ನಿವಾಸಿಗಳ ಜೀವಿಸುವ ಹಕ್ಕನ್ನು ರಕ್ಷಿಸಲು ಸಣ್ಣಪುಟ್ಟ ಕಾಮಗಾರಿ ಯೋಜನೆಗಳನ್ನು ನಿಲ್ಲಿಸಲಾಗಿದೆ. ಆದರೆ, ಬೃಹತ್ ಸೆಂಟ್ರಲ್ ವಿಸ್ಟಾ ಯೋಜನೆಯು ನಿರ್ಮಾಣ ಕಾಮಗಾರಿಗಳು ಸುಪ್ರೀಂಕೋರ್ಟ್ ಮೂಗಿನ ನೇರದಲ್ಲೇ ಭರದಿಂದ ಸಾಗುತ್ತಿದೆ ಎಂದರು.

‘‘ಸೆಂಟ್ರಲ್ ವಿಸ್ಟಾ ಕಾಮಗಾರಿಯು ದಿಲ್ಲಿ ಹಾಗೂ ಎನ್‌ಸಿಆರ್‌ನ ಕೋಟ್ಯಂತರ ನಿವಾಸಿಗಳ ಬದುಕಿಗಿಂತ ಹೆಚ್ಚು ಮುಖ್ಯವಾದುದೇ’’ ಎಂದು ಅರ್ಜಿದಾರರು ಪ್ರಶ್ನಿಸಿದ್ದರು.

ಸೆಂಟ್ರಲ್ ವಿಸ್ಟಾ ಯೋಜನೆಯ ಕಾಮಗಾರಿ ಸಂದರ್ಭದಲ್ಲಿ ಪರಿಸರ ಮಾಲಿನ್ಯವನ್ನು ತಡೆಯಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ಇಂದು ತಿಳಿಸಿತು. ಹೊಗೆ ನಿರೋಧಕ ಗನ್ ಬಳಕೆ, ಮಿಸ್ಟ್ ಸ್ಪ್ರೇ ಸಿಸ್ಟಮ್, ಮ್ಯಾಗ್ನೆಸಿಯಂ ಕ್ಲೊರೈಡ್‌ನಂತಹ ಧೂಳು ನಿಯಂತ್ರಕಗಳ ಬಳಕೆ, ಕಟ್ಟಡ ನಿರ್ಮಾಣ ಸಾಮಾಗ್ರಿಗಳ ವರ್ಗಾವಣೆಗೆ ಕನ್‌ವೆಯರ್ ಬೆಲ್ಟ್ ಬಳಕೆ, ಎಲ್ಲಾ ನಿರ್ಮಾಣ ಸಾಮಾಗ್ರಿಗಳನ್ನು ತೇವಾಂಶದ ಪರಿಸ್ಥಿತಿಯಲ್ಲಿರಿಸುವುದು ಇತ್ಯಾದಿ ಕ್ರಮಗಳನ್ನು ಅಳವಡಿಸಲಾಗಿದೆ ಎಂದು ಕೇಂದ ಸರಕಾರವು ನ್ಯಾಯಾಲಯಕ್ಕೆ ತಿಳಇಸಿದೆ.

 ಭಾರತದ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ತ್ರಿಸದಸ್ಯ ನ್ಯಾಯಪೀಠವು ಪ್ರಕರಣದ ಆಲಿಕೆಯನ್ನು ನಾಳೆ ನಡೆಸಲಿದೆ.

ವಾಯುಗುಣಮಟ್ಟವು ತೀರಾ ಕೆಳಮಟ್ಟಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ ನವೆಂಬರ್ 24ರಂದು ಸುಪ್ರೀಂಕೋರ್ಟ್ ದಿಲ್ಲಿಯಲ್ಲಿ ಎಲ್ಲಾ ವಿಧದ ಕಟ್ಟಡನಿರ್ಮಾಣ ಚಟುವಟಿಕೆಗಳನ್ನು ನಿಷೇಧಿಸಿತ್ತು. ಆದರೆ ಪ್ಲಂಬಿಂಗ್ ಕಾರ್ಯ, ಒಳಾಂಗಣ ವಿನ್ಯಾಸ, ವಿದ್ಯುತ್ ಕಾಮಗಾರ ಹಾಗೂ ಕಾರ್ಪೆಂಟರಿಯಂತಹ ಕೆಲಸಗಳನ್ನು ಮುಂದುವರಿಸಲು ಅನುಮತಿ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News