ನಂಜನಗೂಡು ಪೊಲೀಸ್ ವಶದಲ್ಲಿದ್ದ ವ್ಯಕ್ತಿ ಸಾವು ಪ್ರಕರಣ: ಅನುಮಾನ ವ್ಯಕ್ತಪಡಿಸಿದ ಸಾರ್ವಜನಿಕರು

Update: 2021-12-02 04:36 GMT
ಸಾಂದರ್ಭಿಕ ಚಿತ್ರ

ಮೈಸೂರು: ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ ವಶದಲ್ಲಿದ್ದ ವ್ಯಕ್ತಿ ಸಿದ್ದರಾಜು ಸಾವಿನ ಸುತ್ತ ಅನುಮಾನದ ಹುತ್ತ ಬೆಳೆಯುತ್ತಿದೆ. ಈ ಸಂಬಂಧ ದಾಖಲಾಗಿರುವ ಎಫ್‌ಐಆರ್ ಇದಕ್ಕೆ ಪುಷ್ಟಿ ನೀಡುವಂತಿದೆ ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ಬ್ಯಾಳ್ಯಾರು ಹುಂಡಿ ಗ್ರಾಮದ ದಲಿತ ಯುವಕ ಸಿದ್ದರಾಜು ನ.28ರ ರವಿವಾರ ಮೃತಪಟ್ಟಿದ್ದು, ದಲಿತ ಯುವಕ ಸಿದ್ದರಾಜು ಅವರ ತಾಯಿ ಮಹದೇವಮ್ಮ ನೀಡಿರುವ ಲಿಖಿತ ದೂರಿನ ಹೇಳಿಕೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಪೊಲೀಸ್ ಕಸ್ಟಡಿಯಲ್ಲಿದ್ದ ಅವಧಿಯ ಬಗ್ಗೆ ಅವರ ತಾಯಿ ಯಾವುದೇ ಚಕಾರ ಎತ್ತದೇ ಕೇವಲ ನ.27ರ ಶನಿವಾರ ರಾತ್ರಿ ನಡೆದ ಗಲಾಟೆಯನ್ನಷ್ಟೇ ಆಧರಿಸಿ ಹೇಳಿಕೆ ನೀಡಿ ದೂರು ದಾಖಲಿಸಿರುವುದು ಪೊಲೀಸರನ್ನು ರಕ್ಷಣೆ ಮಾಡುವ ಹುನ್ನಾರ ನಡೆದಿಯೇ? ಎಂಬ ಅನುಮಾನ ದಟ್ಟವಾಗಿಸಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ನ.27ರಂದು ಸಂಜೆ 6:30ರ ಸಮಯದಲ್ಲಿ ಮಣಿಯಮ್ಮ, ಆಕೆಯ ತಂದೆ ಮಹದೇವಯ್ಯ, ತಾಯಿ ರಂಗಮ್ಮ, ಸಹೋದರ ಮಹೇಶ್, ಸಂಬಂಧಿ ಶಿವು, ಕಾವೇರಿ, ಯೋಗೇಶ್, ಭಾಗ್ಯಾ ಎಂಬವರು ನನ್ನ ಮಗನ ಕೈ, ಕಾಲುಗಳನ್ನು ಕಟ್ಟಿಹಾಕಿ ದೈಹಿಕ ಹಲ್ಲೆ ನಡೆಸಿದ್ದಾರೆ. ಬಳಿಕ 112 ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ದೂರು ನೀಡಿದ್ದರಿಂದ ನನ್ನ ಮಗನನ್ನು ವಶಕ್ಕೆ ಪಡೆದ ಪೊಲೀಸರು ನಂಜನಗೂಡಿಗೆ ಕರೆದುಕೊಂಡು ಹೋಗಿದ್ದರು. ಅಸ್ವಸ್ಥಗೊಂಡಿದ್ದ ನನ್ನ ಮಗನನ್ನು ನ.28ರಂದು ನಂಜನಗೂಡು ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿ ವೈದ್ಯರು ನೀಡಿದ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಮಗನ ಸಾವಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ದೂರು ದಾಖಲಿಸಿದ್ದಾರೆ.

ದಲಿತ ಯುವಕ ಸಿದ್ದರಾಜು ಸಾವಿನ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ನಂಜನಗೂಡು ಡಿವೈಎಸ್ಪಿಅವರಿಗೆ ಸೂಚಿಸಲಾಗಿದೆ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿರುವುದರಿಂದ ಸಿಐಡಿ ತನಿಖೆಗೆ ಮನವಿ ಮಾಡಲಾಗಿದೆ.

ಆರ್. ಚೇತನ್ - ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News