ನಂಜನಗೂಡು: ಪತ್ನಿ ಸಹಿತ ಇಬ್ಬರನ್ನು ಕೊಲೆಗೈದ ವ್ಯಕ್ತಿ, ನಾಲ್ವರ ಮೇಲೆ ಮಾರಣಾಂತಿಕ ಹಲ್ಲೆ

Update: 2021-12-02 05:08 GMT

ಮೈಸೂರು, ಡಿ.2: ವ್ಯಕ್ತಿಯೋರ್ವ ಪತ್ನಿಯನ್ನು ಮಾರಕಾಯುಧದಿಂದ ಕೊಚ್ಚಿ ಕೊಲೆಗೈದಿದ್ದು, ತಡೆಯಲು ಮುಂದಾದ ಇತರ ಐವರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದರಿಂದ ಇನ್ನೊಬ್ಬರೂ ಸಾವನ್ನಪ್ಪಿದ ಘಟನೆ ನಂಜನಗೂಡು ತಾಲೂಕಿನ ನವಿಲೂರು ಗ್ರಾಮದಲ್ಲಿ ನಡೆದಿದೆ.

ಈರಯ್ಯ ಕೊಲೆ ಆರೋಪಿ. ಈತನ ಎರಡನೇ ಪತ್ನಿ ನಿಂಗಮ್ಮ ಹಾಗೂ ನೆರೆಮನೆಯ ಒಬ್ಬರು ಕೊಲೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಂಗಮ್ಮ ತವರು ಮನೆಯಲ್ಲಿದ್ದು ಬುಧವಾರ ರಾತ್ರಿ ಎಂಟು ಗಂಟೆ ಸುಮಾರಿಗೆ ಅಲ್ಲಿಗೆ ಆಗಮಿಸಿದ ಆರೋಪಿ ಈರಯ್ಯ ಏಕಾಏಕಿ ಮಚ್ಚಿನಿಂದ ನಿಂಗಮ್ಮರ ಮೇಲೆ ದಾಳಿ ನಡೆಸಿದ್ದಾನೆ. ಈ ವೇಳೆ ತಡೆಯಲೆತ್ನಿಸಿದ ನಿಂಗಮ್ಮನ ತಾಯಿ ಮೇಲೂ ಆರೋಪಿ ಮಚ್ಚು ಬೀಸಿದ್ದರಿಂದ ಗಂಭೀರ ಗಾಯಗೊಂಡ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಬೊಬ್ಬೆ ಕೇಳಿ ಸ್ಥಳಕ್ಕಾಗಮಿಸಿದ ಸ್ಥಳೀಯರೊಬ್ಬರ ಮೇಲೂ ಈರಯ್ಯ ದಾಳಿ ನಡೆಸಿದ್ದಾನೆ. ಪರಿಣಾಮವಾಗಿ ತೀವ್ರತರದ ಗಾಯಕ್ಕೊಳಗಾದ ನಿಂಗಮ್ಮ ಸ್ಥಳಸಲ್ಲೇ ಸಾವನ್ನಪ್ಪಿದರೆ, ಇನ್ನೋರ್ವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ವೇಳೆ ಪೊಲೀಸರಿಗೆ ವಿಷಯ ತಿಳಿದು ಸ್ಥಳಕ್ಕಾಗಮಿಸಿ ಈರಯ್ಯನನ್ನು ವಶಕ್ಕೆ ಪಡೆದು ಪೊಲೀಸ್ ಜೀಪಿನಲ್ಲಿ ಕುಳ್ಳಿರಿಸಿಕೊಂಡಿದ್ದರು. ಈ ವೇಳೆ ಆತ ಮತ್ತೆ ಜೀಪಿನಿಂದ ಜಿಗಿದು ನಿಂಗಮ್ಮನ ಚಿಕ್ಕಪ್ಪನ ಮಕ್ಕಳ ಮೇಲೂ ಮಚ್ಚಿನಿಂದ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿಂತಾಜನಕ ಸ್ಥಿತಿಯಲ್ಲಿರುವ ನಾಲ್ವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಆರೋಪಿ ಈರಯ್ಯ ಮೊದಲ ಪತ್ನಿ ಮೇಲು ಇದೇರೀತಿ ಅನುಮಾನ ವ್ಯಕ್ತಪಡಿಸಿ ಆಕೆಯನ್ನು ಕೊಲೆಗೈದ ಆರೋಪದಲ್ಲಿ ಬಂಧಿಸಲ್ಪಟ್ಟು ಜೈಲು ಸೇರಿದಿದ್ದ ಎಂದು ಹೇಳಲಾಗಿದೆ. ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಈರಯ್ಯ ಬಳಿಕ ನಿಂಗಮ್ಮರನ್ನು ಎರಡನೇ ಮದಯವೆಯಾಗಿದ್ದ ಎಂದು ತಿಳಿದು ಬಂದಿದೆ.

 ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News