ಕಾಂಗ್ರೆಸ್ ಇಲ್ಲದಿದ್ದರೆ ಯುಪಿಎ ಆತ್ಮವಿಲ್ಲದ ದೇಹವಾಗಿರುತ್ತದೆ: ಮಮತಾ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು

Update: 2021-12-02 06:25 GMT

ಹೊಸದಿಲ್ಲಿ: ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಮುಂಬೈನಲ್ಲಿ ಬುಧವಾರ ಎನ್‌ಸಿಪಿ ಮುಖ್ಯಸ್ಥ ಶರದ್ ಅವರನ್ನು ಭೇಟಿ ಮಾಡಿದ ನಂತರ ಯುಪಿಎ ಎಂದರೇನು, ಯುಪಿಎ ಇಲ್ಲ ಎನ್ನುತ್ತಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮರುದಿನ ಪ್ರತಿಕ್ರಿಯಿಸಿದ ಕಾಂಗ್ರೆಸ್ , ಪ್ರತಿಪಕ್ಷಗಳ ಒಗ್ಗಟ್ಟು ಪ್ರದರ್ಶಿಸಲು ಇದು ಸಕಾಲ ಎಂದು  ಇಂದು ಒತ್ತಿ ಹೇಳಿದೆ.

"ಯುಪಿಎ. ಕಾಂಗ್ರೆಸ್ ಇಲ್ಲದಿದ್ದರೆ, ಯುಪಿಎ ಆತ್ಮವಿಲ್ಲದ ದೇಹವಾಗಿರುತ್ತದೆ. ಪ್ರತಿಪಕ್ಷಗಳ ಒಗ್ಗಟ್ಟನ್ನು ಪ್ರದರ್ಶಿಸುವ ಸಮಯ" ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಇಂದು ಬೆಳಿಗ್ಗೆ ಟ್ವೀಟಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ಈ ಹಿಂದೆ ಯುಪಿಎ ಅಥವಾ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್‌ನ ಭಾಗವಾಗಿತ್ತು., ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಕಾಂಗ್ರೆಸ್ ಸೇರಿದಂತೆ ಹಲವಾರು ಪಕ್ಷಗಳ ಮೈತ್ರಿಕೂಟವು 2004 ರಿಂದ 2014 ರವರೆಗೆ 10 ವರ್ಷಗಳ ಕಾಲ ಕೇಂದ್ರದಲ್ಲಿ ಅಧಿಕಾರದಲ್ಲಿದ್ದವು.

"ಕಾಂಗ್ರೆಸ್ ಹೆಸರು ಮಾಡಿದ ವಿವಿಧ ಸಾಮಾಜಿಕ-ರಾಜಕೀಯ ವಿಷಯಗಳಲ್ಲಿ ಅವರನ್ನು (ತೃಣಮೂಲ) ಸೇರಿಸಲು ನಾವು ಪ್ರಯತ್ನಿಸಿದ್ದೇವೆ. ಪ್ರತಿಪಕ್ಷಗಳು ಒಡೆದು ತಮ್ಮ ತಮ್ಮಲ್ಲೇ ಹೋರಾಡಬಾರದು. ನಾವು ಒಟ್ಟಾಗಿ ಬಿಜೆಪಿ ವಿರುದ್ಧ ಹೋರಾಡಬೇಕು" ಎಂದು ರಾಜ್ಯಸಭೆಯಲ್ಲಿ  ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಒತ್ತಿ ಹೇಳಿದರು.

ಎಪ್ರಿಲ್-ಮೇ ತಿಂಗಳಿನಲ್ಲಿ ನಡೆದ ಬಂಗಾಳ ಚುನಾವಣೆಯಲ್ಲಿ ಪ್ರಚಂಡ ವಿಜಯ ಸಾಧಿಸಿದ ಬಳಿಕ ತೃಣಮೂಲ ಕಾಂಗ್ರೆಸ್ ಮಮತಾ ಬ್ಯಾನರ್ಜಿ ಅವರನ್ನು ಪ್ರಮುಖ ವಿರೋಧ ಪಕ್ಷದ ನಾಯಕಿ ಎಂದು ಬಿಂಬಿಸಲು ಯತ್ನಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News