ಬಹಿರ್ದೆಸೆಗೆ ತೆರಳಿದ್ದ ಆದಿವಾಸಿ ಯುವಕನಿಗೆ ಗುಂಡಿಕ್ಕಿದ ಅರಣ್ಯ ಸಿಬ್ಬಂದಿ: ಆರೋಪ

Update: 2021-12-02 07:51 GMT

ಮೈಸೂರು, ಡಿ.2: ಆದಿವಾಸಿ ವ್ಯಕ್ತಿಯೊಬ್ಬರಿಗೆ ಕ್ಷುಲ್ಲಕ ಕಾರಣಕ್ಕೆ ಅರಣ್ಯ ಸಿಬ್ಬಂದಿ ಬಂದೂಕಿನಿಂದ ಗುಂಡಿಕ್ಕಿ ಗಾಯಗೊಳಿಸಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಬಳಿಯ ರಾಣಿಗೇಟ್ ಜೇನುಕುರುಬರ ಹಾಡಿಯಲ್ಲಿ ನಡೆದಿರುವುದು ವರದಿಯಾಗಿದೆ.

ಜೇನುಕುರುಬರ ಹಾಡಿಯ ನಿವಾಸಿ ಬಸವ ಗಾಯಾಳು ಯುವಕ. ಇವರಿಗೆ ಅರಣ್ಯ ಇಲಾಖೆಯ ವಾಚ್‌ಮನ್ ಸುಬ್ರಮಣಿ ಹಾಗೂ ಇತರ ಮೂವರು ಬಂದೂಕಿನಿಂದ ಗುಂಡು ಹಾರಿಸಿ ಕೊಲೆಗೈಯಲು ಯತ್ನಿಸಿರುವುದಾಗಿ ಸಂತ್ರಸ್ತರ ಪತ್ನಿ ಪುಷ್ಪಾ ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ. ಈ ನಡುವೆಬಸವ ಮತ್ತು ಆತನ ಸಹಚರರು ಗಂಧದ ಕಟ್ಟಿಗೆ ಸಾಗಿಸುತ್ತಿದ್ದರೆಂದು ಆರೋಪಿಸಿ  ಅರಣ್ಯ ಇಲಾಖೆಯ ಸಿಬ್ಬಂದಿ ಕೂಡಾ ಪೊಲೀಸ್ ದೂರು ನೀಡಿದ್ದಾರೆ.

ಗುಂಡೇಟಿನಿಂದ ಗಾಯಗೊಂಡಿರುವ ಬಸವರನ್ನು ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವಿವರ: ಬುಧವಾರ (ಡಿ.1) ಜೋಳ ಕೊಯ್ಲು ಮಾಡುತ್ತಿದ್ದ ವೇಳೆ ಬಸವ ಬರ್ಹಿದೆಸೆಗೆಂದು ಪಕ್ಕದ ಅಣ್ಣಯ್ಯ ಎಂಬವವರ ಜಮೀನಿಗೆ ಹೋಗಿದ್ದರು. ಈ ವೇಳೆ ಅರಣ್ಯ ಇಲಾಖೆಯ ವಾಚ್‌ಮನ್ ಸುಬ್ರಮಣಿ ಜೊತೆಗೆ ಮಹೇಶ ಮತ್ತು ಸಿದ್ದ ಹಾಗೂ ಗಾರ್ಡ್ ಮಂಜು ಎಂಬವರು ಬಸವರನ್ನು ಅಟ್ಟಿಸಿಕೊಂಡು ಬಂದಿದ್ದಾರೆ. ಆದರೆ ಕೈಸಿಗದಿದ್ದಾಗ ವಾಚ್‌ಮನ್ ಸುಬ್ರಮಣಿ ಕೋವಿಯಿಂದ ಗುಂಡು ಹಾರಿಸಿದರೆನ್ನಲಾಗಿದೆ. ಗುಂಡು ಬಸವ ಅವರ ಹಿಂಭಾಗಕ್ಕೆ ತಗಲಿದೆ ಎಂದು ಪುಷ್ಪಾ ಅವರು ಬೈಲಕುಪ್ಪೆ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

 ಗಾಯಾಳುವನ್ನು ಕುಶಾಲನಗರ ಆಸ್ಪತ್ರೆಗೆ ಸೇರಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.

"ಒಂದೂವರೆ ತಿಂಗಳ ಹಿಂದೆ ನಮ್ಮ ಮನೆ ಮುಂದಿನ ಮರದ ವಿಚಾರವಾಗಿ ಬಸವರಿಗೆ ಗುಂಡಿಕ್ಕಿದ ಅರಣ್ಯ ಇಲಾಖೆಯ ಇದೇ ಸಿಬ್ಬಂದಿ ಮತ್ತು ನಮಗೂ ಜಗಳವಾಗಿತ್ತು. ಸಿಬ್ಬಂದಿಯ ಅನ್ಯಾಯವನ್ನು ನಾವು ಪ್ರಶ್ನಿಸಿದ್ದೆವು. ಇದೇ ದ್ವೇಷದಲ್ಲಿ ಅವರು ಈ ದುಷ್ಕೃತ್ಯ ಎಸಗಿದ್ದಾರೆ ಎಂದು ಸಂತ್ರಸ್ತರ ಪತ್ನಿ ಪುಷ್ಪಾ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News