ಪೊಲೀಸರಿಗೆ ಶೋಕಾಸ್ ನೋಟಿಸ್ ನೀಡಿದರೆ ಸಾಕಾಗುವುದಿಲ್ಲ, ಸರಕಾರ ಏನು ಕ್ರಮ ಕೈಗೊಂಡಿದೆ ಎಂಬುದು ಮುಖ್ಯ: ಹೈಕೋರ್ಟ್

Update: 2021-12-02 11:47 GMT
ಫೈಲ್ ಚಿತ್ರ

ಬೆಂಗಳೂರು, ಡಿ.1: ಬೀದರ್‌ನ ಶಾಹಿನ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳನ್ನು ಸಮವಸ್ತ್ರ ಮತ್ತು ಶಸ್ತ್ರಾಸ್ತ್ರದೊಂದಿಗೆ ವಿಚಾರಣೆ ನಡೆಸಿದ ಐವರು ಪೊಲೀಸ್ ಸಿಬ್ಬಂದಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಹೈಕೋರ್ಟ್ ಗೆ ರಾಜ್ಯ ಸರಕಾರ ತಿಳಿಸಿದೆ. 

ಈ ಸಂಬಂಧ ವಕೀಲೆ ನಯನ ಜ್ಯೋತಿ ಝಾವರ್ ಹಾಗೂ ಮಾನವ ಹಕ್ಕುಗಳ ಸಂಘಟನೆ ಸಿಕ್ರಮ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ಸರಕಾರದ ಪರ ವಕೀಲರು ಜ್ಞಾಪನಾ ಪತ್ರ ಸಲ್ಲಿಸಿ, ಮಕ್ಕಳನ್ನು ವಿಚಾರಣೆಗೆ ಒಳಪಡಿಸುವಾಗ ಬಾಲ ನ್ಯಾಯ ಕಾಯ್ದೆಯ ಸಂಬಂಧಪಟ್ಟ ಕಲಂಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿ ಈಗಾಗಲೇ ರಾಜ್ಯದ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ತಪ್ಪಿತಸ್ಥ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಐವರು ಪೊಲೀಸರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಅವರಿಂದ ಉತ್ತರ ಬರಬೇಕಾಗಿದೆ. ನಂತರ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ವಿವರಿಸಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಕೇವಲ ಶೋಕಾಸ್ ನೋಟಿಸ್ ನೀಡಿದರೆ ಸಾಕಾಗುವುದಿಲ್ಲ. ಸರಕಾರ ಏನು ಕ್ರಮ ಕೈಗೊಂಡಿದೆ ಎಂಬುದು ಮುಖ್ಯ ಎಂದ ನ್ಯಾಯಪೀಠ ವಿಚಾರಣೆಯನ್ನು 2022ರ ಮಾರ್ಚ್ ಗೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News