ಅಪೌಷ್ಟಿಕತೆ ತೊಡೆದುಹಾಕಲು ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ: ಶಾಲಾಭಿವೃದ್ಧಿ ಸಮಿತಿಗಳ ಸಮನ್ವಯ ವೇದಿಕೆ ಸ್ವಾಗತ

Update: 2021-12-02 12:42 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ. 2: ‘ಸರಕಾರವು ಈಗಾಗಲೇ ಸುತ್ತೋಲೆ ಹೊರಡಿಸಿರುವಂತೆ ಕಲ್ಯಾಣದ ಕರ್ನಾಟಕದ 7 ಜಿಲ್ಲೆಗಳಿಗೆ ಮಾತ್ರವಲ್ಲದೆ, ರಾಜ್ಯದ ಎಲ್ಲ ಜಿಲ್ಲೆಗಳಿಗೂ ಈ ಯೋಜನೆಯನ್ನು ವಿಸ್ತರಿಸಿ ಮೊಟ್ಟೆಯನ್ನು ತಿನ್ನದ ಮಕ್ಕಳಿಗೆ ಪರ್ಯಾಯ ಹಣ್ಣು ಮತ್ತು ಕಾಳುಗಳನ್ನು ನೀಡಲು ಮುಂದಾಗಬೇಕು. ಯಾವುದೇ ಜಾತಿ, ಧರ್ಮ ಮತ್ತು ರಾಜಕೀಯ ಒತ್ತಡಕ್ಕೆ ಒಳಗಾಗದೇ ಕೈಗೊಂಡಿರುವ ನಿರ್ಧಾರವನ್ನು ಪರಿಣಾಮಾಕಾರಿಯಾಗಿ ಜಾರಿಗೊಳಿಸಬೇಕು' ಎಂದು ರಾಜ್ಯ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಒತ್ತಾಯಿಸಿದೆ.

ಗುರುವಾರ ಈ ಸಂಬಂಧ ವೇದಿಕೆ ಮಹಾ ಪೋಷಕ ಹಾಗೂ ಅಭಿವೃದ್ಧಿ ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ವಿ.ಪಿ. ಅವರು ಪತ್ರಿಕಾ ಪ್ರಕಟಣೆ ನೀಡಿದ್ದು, ‘ಅಪೌಷ್ಟಿಕತೆಯನ್ನು ನಿವಾರಿಸಲು ಕಲ್ಯಾಣ ಕರ್ನಾಟಕದ ಭಾಗದ 7 ಜಿಲ್ಲೆಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿಯಲ್ಲಿ ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರದ ಭಾಗವಾಗಿ ಮೊಟ್ಟೆಯನ್ನು ಕೊಡುವ ಸರಕಾರದ ನಿರ್ಧಾರವನ್ನು ವೇದಿಕೆ ಸ್ವಾಗತಿಸುತ್ತದೆ. ಶಾಲಾ ಮಕ್ಕಳಿಗೆ ಮೊಟ್ಟೆಯನ್ನು ಕೊಡುವ ಸರಕಾರದ ಈ ನಿರ್ಧಾರವನ್ನು ಕೆಲ ಮೂಲಭೂತವಾದಿ ಧಾರ್ಮಿಕ ಸಂಘಟನೆಗಳು ವಿರೋಧಿಸುತ್ತಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

‘ಈ ಬಗೆಯ ನಿರ್ಣಯವನ್ನು ಈ ಹಿಂದೆ 2004ರಲ್ಲಿ ಸರಕಾರ ಕೈಗೊಂಡಾಗ ಇದೇ ರೀತಿಯಲ್ಲಿ ವಿರೋಧವನ್ನು ಮೂಲಭೂತವಾದಿ ಧಾರ್ಮಿಕ ಸಂಘಟನೆಗಳು ವ್ಯಕ್ತಪಡಿಸಿದ್ದರು. ಸಾತ್ವಿಕ ಆಹಾರದ ಹೆಸರಿನಲ್ಲಿ ವ್ಯಕ್ತವಾದ ಅವೈಜ್ಞಾನಿಕ ವಿರೋಧವನ್ನು ಕರ್ನಾಟಕದ ಪ್ರಜ್ಞಾವಂತ ಪ್ರಗತಿಪರರು ಅಂದು ಜ್ಞಾನಪೀಠ ಪುರಸ್ಕೃತ ಸಾಹಿತಿ ಯು.ಆರ್.ಅನಂತಮೂರ್ತಿ ಮುಂದಾಳತ್ವದಲ್ಲಿ ವಿರೋಧಿಸಿದ್ದರು. ಅನೇಕ ಅಧ್ಯಯನಗಳು ಮತ್ತು ಸಂಶೋಧನಾ ವರದಿಗಳ ಅನ್ವಯ ನಮ್ಮ ಮಕ್ಕಳಿಗೆ ಅಗತ್ಯ ಪ್ರೋಟಿನ್‍ಯುಕ್ತ ಆಹಾರ ನಿರಂತರವಾಗಿ ದೊರೆಯದೇ ಇರುವುದರಿಂದ ಅವರ ದೈಹಿಕ, ಮಾನಸಿಕ ಹಾಗು ಬೌದ್ಧಿಕ ಬೆಳವಣಿಗೆಯ ಮೇಲೆ ಅಪಾರ ಪರಿಣಾಮ ಬೀರಿದ್ದು ಕುಂಠಿತ ಬೆಳವಣಿಗೆಯ ಬಗ್ಗೆ ಉಲ್ಲೇಖಿಸಲಾಗಿದೆ' ಎಂದು ಗಮನ ಸೆಳೆದಿದ್ದಾರೆ.

‘ಪೌಷ್ಟಿಕಾಂಶದ ವಿಷಯದಲ್ಲಿ ಕರ್ನಾಟಕವು ನೀರಸ ಸೂಚಕಗಳನ್ನು ಹೊಂದಿದೆ ಎಂದು ಎಲ್ಲರಿಗೂ ತಿಳಿದಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 5ನೆ ಸುತ್ತಿನ ಪ್ರಕಾರ, ಕರ್ನಾಟಕದಲ್ಲಿ ಹೆಚ್ಚಿನ ಮಕ್ಕಳು ತಮ್ಮ ಪ್ರಮಾಣಿತ ಎತ್ತರ ಮತ್ತು ತೂಕವನ್ನು ತಲುಪುತ್ತಿಲ್ಲ. ವರದಿ ಅನ್ವಯ ಶೇ.35.4ರಷ್ಟು ಕುಂಠಿತ ಬೆಳವಣಿಗೆ, (ವಯಸ್ಸಿಗನುಗುಣವಾಗಿ ಎತ್ತರ  ಹಾಗು ತೂಕವಿಲ್ಲದಿರುವುದು) ಹಾಗು ಶೇ.32.9ರಷ್ಟು ಮಕ್ಕಳು ತಮ್ಮ 6ನೆ ವರ್ಷದ ಶಾಲಾ ಜೀವನವನ್ನು ಪ್ರಾರಂಭಿಸುವಾಗ ಕಡಿಮೆ ತೂಕ ಹೊಂದಿರುವುದು ಕಂಡು ಬಂದಿದೆ. ಆತಂಕವೆಂದರೆ ಇದು ದುರ್ಬಲ ಸಮುದಾಯದ ಮಕ್ಕಳಲ್ಲಿ ಅತಿಹೆಚ್ಚು ಎಂಬ ವಿಷಯ' ಎಂದು ಹೇಳಿದ್ದಾರೆ.

‘2020-21ರ ನೀತಿ ಆಯೋಗದ ವರದಿಯು ಈ ಬಗ್ಗೆ ಆತಂಕದ ಅಂಶಗಳನ್ನು ಹೊರತಂದಿದೆ. ರಾಜ್ಯದಲ್ಲಿ ಶೇ.32ರಷ್ಟು ಮಕ್ಕಳು ಕಡಿಮೆ ತೂಕ, ಶೇ.32.5ರಷ್ಟು ಮಕ್ಕಳು ಕುಂಠಿತ ಬೆಳವಣಿಗೆ, ಶೇ.45.2ರಷ್ಟು ಮಕ್ಕಳು ಮಹಿಳೆಯರು ರಕ್ತ ಹೀನತೆ ಹಾಗು 10-19 ವರ್ಷ ವಯಸ್ಸಿನ ಶೇ.17.2ರಷ್ಟು ಮಕ್ಕಳು ತೀವ್ರ ರಕ್ತ ಹೀನತೆ ಹೊಂದಿದ್ದಾರೆ. ಈ ವಿಷಯದಲ್ಲಿ ಅಧ್ಯಯನ ನಡೆಸಲು ನೇಮಕವಾಗಿದ್ದ ನ್ಯಾಯಮೂರ್ತಿ ಎನ್.ಕೆ.ಪಾಟೀಲ್ ರವರ ಸಮಿತಿಯ ವರದಿಯೂ ಮಕ್ಕಳಲ್ಲಿ ಪೌಷ್ಟಿಕತೆಯನ್ನು ಹೆಚ್ಚಿಸಲು ಸರಕಾರವು ಮುಂದಾಗಬೇಕೆಂದು ತಿಳಿಸಿದೆ. 

ರಾಷ್ಟ್ರೀಯ ಆಹಾರ ಭದ್ರಾತಾ ಕಾಯ್ದೆ 2013 ಕೂಡ ಈ ವಿಷಯವನ್ನು ಪ್ರಮುಖವಾಗಿ ತೆಗೆದುಕೊಂಡು ದೇಶದ ಅಭಿವೃದ್ದಿಯಲ್ಲಿ ಮಕ್ಕಳ ಬೆಳವಣಿಗೆ ಮಹತ್ವದಾಗಿದ್ದು ಮಕ್ಕಳಿಗೆ ನಿರಂತರವಾಗಿ ಪೂರಕ ಪೌಷ್ಟಿಕ ಆಹಾರವನ್ನು ಒದಗಿಸುವುದು ಸರಕಾರದ ಕರ್ತವ್ಯವಾಗಿದೆ ಇದಕ್ಕೆ ಯೋಜನೆಗಳನ್ನು ರೂಪಿಸಬೇಕು  ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಪೂರಕ ಪೌಷ್ಟಿಕಾಂಶದ ಆಹಾರವನ್ನು ನೀಡುವ ಕುರಿತಾಗಿ ಸರಕಾರಗಳು ತೆಗೆದುಕೊಳ್ಳುವ ತೀರ್ಮಾನಗಳಿಗೆ ಯಾವುದೇ ಜಾತಿ, ಧರ್ಮ ಹಾಗೂ ರಾಜಕೀಯವನ್ನು ಬೆರೆಸದೆ ಮಕ್ಕಳ ಸವಾರ್ಂಗೀಣ ಬೆಳವಣಿಗೆಯ ಹಿತದೃಷ್ಟಿಯಿಂದ ತೀರ್ಮಾನವನ್ನು ಸ್ವಾಗತಿಸಿ, ಪರಿಣಾಮಕಾರಿ ಜಾರಿಗೆ ಒತ್ತಾಯಿಸಬೇಕಿದೆ' ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News