ಫ್ಯಾಕ್ಟ್ ಚೆಕ್: ನೊಯ್ಡಾದಲ್ಲಿ ನಿರ್ಮಾಣವಾಗಲಿರುವುದು ಏಷ್ಯಾದ ಅತಿದೊಡ್ಡ ವಿಮಾನ ನಿಲ್ದಾಣ ಅಲ್ಲ

Update: 2021-12-02 13:18 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನವೆಂಬರ್ 25ರಂದು ನೊಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವ ಮುನ್ನವೇ ಈ ಕುರಿತು ಟ್ವೀಟ್ ಮಾಡಿದ್ದ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕುರ್, ಉತ್ತರ ಪ್ರದೇಶದ ಜೇವರ್ ಎಂಬಲ್ಲಿ ತಲೆಯೆತ್ತಲಿರುವ ಈ ರೂ. 35,000 ಕೋಟಿ ವೆಚ್ಚದ ವಿಮಾನ ನಿಲ್ದಾಣ ಏಷ್ಯಾದ ಅತಿ ದೊಡ್ಡ ವಿಮಾನ ನಿಲ್ದಾಣವಾಗಲಿದೆ ಎಂದಿದ್ದರು. ಪ್ರಧಾನಿ ಕೂಡ ತಮ್ಮ ಭಾಷಣದಲ್ಲಿ ಇದೇ ಮಾತನ್ನು ಹೇಳಿದ್ದರು. ಈ ನಿಲ್ದಾಣದ ಮೂಲಕ ಪ್ರಯಾಣಿಸಬಹುದಾದವರ ಸಂಖ್ಯೆ, ವಿಮಾನಗಳ ಸಂಖ್ಯೆ ಅಥವಾ ವಿಮಾನ ನಿಲ್ದಾಣದ ಗಾತ್ರದ ಆಧಾರದಲ್ಲಿ ಇದು ಏಷ್ಯಾದಲ್ಲಿಯೇ ಅತಿ ದೊಡ್ಡ ವಿಮಾನ ನಿಲ್ದಾಣವಾಗಲಿದೆಯೇ ಎಂಬ ಕುರಿತು ಇಬ್ಬರು ಸಚಿವರೂ ಯಾವುದೇ ವಿವರಣೆ ನೀಡಿರಲಿಲ್ಲ.

ಈ ವಿಮಾನ ನಿಲ್ದಾಣವನ್ನು 1,334 ಹೆಕ್ಟೇರ್ ಪ್ರದೇಶದಲ್ಲಿ ಮುಂದಿನ 40 ವರ್ಷಗಳಲ್ಲಿ ನಾಲ್ಕು ಹಂತಗಳಲ್ಲಿ ನಿರ್ಮಿಸಲಾಗುತ್ತದೆ. ಈ ವಿಮಾನ ನಿಲ್ದಾಣದ ಒಂದು ಟರ್ಮಿನಲ್ ಮುಖಾಂತರ ವರ್ಷಕ್ಕೆ 3 ಕೋಟಿ ಪ್ರಯಾಣಿಕರು ಹಾಗೂ ಎರಡನೇ ಟರ್ಮಿನಲ್ ಮೂಲಕ 2.4 ಕೋಟಿ ಪ್ರಯಾಣಿಕರು ಬಳಸಬಹುದಾಗಿದೆ.

ಮೊದಲನೇ ಹಂತ ಸೆಪ್ಟೆಂಬರ್ 29, 2024ರ ವೇಳೆ ಪೂರ್ಣಗೊಂಡ ನಂತರ ವಾರ್ಷಿಕ 1.2 ಪ್ರಯಾಣಿಕರು ಈ ವಿಮಾನ ನಿಲ್ದಾಣದ ಮೂಲಕ ಸಂಚರಿಸಬಹುದಾಗಿದೆ.

ವಾಸ್ತವವೇನು?

ನೊಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಒಟ್ಟು ಪ್ರಯಾಣಿಕ ಸಾಮರ್ಥ್ಯ 7.7 ಕೋಟಿ ಎಂದು ಹೇಳಲಾಗುತ್ತಿದ್ದು ಆದರೂ ಇದು ಏಷ್ಯಾದ ಅತಿ ದೊಡ್ಡ ವಿಮಾನ ನಿಲ್ದಾಣವಾಗಲು ಸಾಧ್ಯವಿಲ್ಲ. 2019ರಲ್ಲಿಯೇ 7 ಕೋಟಿಗೂ ಅಧಿಕ ಪ್ರಯಾಣಿಕರು ಬಳಸಿದ ಏಷ್ಯಾದ ಏಳು ವಿಮಾನ ನಿಲ್ದಾಣಗಳಿದ್ದವು. ಚೀನಾದ ಬೀಜಿಂಗ್ ನಿಲ್ದಾಣದ ಮೂಲಕ ಹತ್ತು ಕೋಟಿಗೂ ಅಧಿಕ ಮಂದಿ ಪ್ರಯಾಣಿಸಿದ್ದರೆ, ನಂತರದ ಸ್ಥಾನಗಳು ದುಬೈ, ಟೋಕಿಯೋ, ಹನೇಡಾ, ಪುಡೊಂಗ್, ಚೀನಾ, ಗುವಾಂಗ್‍ಝೋವ್ ಬೈಯುನ್, ಹಾಂಕಾಂಗ್ ಮತ್ತು ಕೊರಿಯಾದ ಇಂಚಿಯೋನ್ ವಿಮಾನ ನಿಲ್ದಾಣಗಳು ಪಡೆದಿವೆ.

ಏರ್‍ಪೋರ್ಟ್ ಸ್ಥಳವನ್ನು ಪರಿಗಣಿಸಿದಾಗಲೂ ಸೌದಿ ಅರೇಬಿಯಾದ ಕಿಂಗ್ ಫಹದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ 78,000 ಹೆಕ್ಟೇರ್ ಪ್ರದೇಶದಲ್ಲಿದ್ದು ಜಗತ್ತಿನ ಅತ್ಯಂತ ದೊಡ್ಡ ವಿಮಾನ ನಿಲ್ದಾಣವೆಂದೆನಿಸಿಕೊಂಡಿದೆ.

ನೊಯ್ಡಾ ಏರ್‍ಪೋರ್ಟ್ ಮೂಲಕ ವಾರ್ಷಿಕ 4,89,700 ವಿಮಾನಗಳು ಹಾರಾಟ ನಡೆಸಲಿವೆ ಎಂದು ಹೇಳಲಾಗಿದೆ ಆದರೆ ಚೀನಾದ ಬೀಜಿಂಗ್ ವಿಮಾನ ನಿಲ್ದಾಣ, ಶಾಂಘೈ ಇಲ್ಲಿನ ಪುಡೊಂಗ್ ಏರ್‍ಪೋರ್ಟ್ ಹಾಗೂ ಗುವಾಂಗ್‍ಝೌ ಬೈಯುನ್ ವಿಮಾನ ನಿಲ್ದಾಣಗಳ ಮೂಲಕ 5 ಲಕ್ಷಕ್ಕೂ ಅಧಿಕ ವಿಮಾನಗಳು ವಾರ್ಷಿಕ ಹಾರಾಟ ನಡೆಸುತ್ತವೆ.

ಕೃಪೆ: factchecker.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News