ಚಿಕ್ಕಮಗಳೂರು: ದೇವಾಲಯ ಪ್ರವೇಶಿಸಿ ಪೂಜೆ ಮಾಡಿದ್ದಕ್ಕೆ ಮಸೀದಿ ಅಧ್ಯಕ್ಷ ಸ್ಥಾನದಿಂದ ವಜಾ: ಸಿ.ಎನ್.ಅಕ್ಮಲ್‍ ಆರೋಪ

Update: 2021-12-02 16:21 GMT

ಚಿಕ್ಕಮಗಳೂರು, ಡಿ.2: ಹಿಂದೂ ಸಮುದಾಯದ ದೇಗುಲ ಪ್ರವೇಶಿಸಿ ಆರತಿ ಪಡೆದ ಕಾರಣಕ್ಕೆ ಜಾಮಿಯಾ ಮಸೀದಿ ಅಧ್ಯಕ್ಷ ಸ್ಥಾನದಿಂದ ತನನ್ನು ಪದಚ್ಯುತಿಗೊಳಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡ ಸಿ.ಎನ್.ಅಕ್ಮಲ್ ಅವರು ವಕ್ಫ್ ಬೋರ್ಡ್ ಕಚೇರಿಗೆ ತೆರಳಿ ಆಡಳಿತಾಧಿಕಾರಿ, ಸಿಬ್ಬಂದಿಯೊಂದಿಗೆ ಜಗಳವಾಡಿದ್ದಲ್ಲದೇ ಮಸೀದಿಯೊಂದರ ಗುರುಗಳ ಮೇಲೆ ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಇತ್ತೀಚೆಗೆ ನಗರದ ರಾಮನಹಳ್ಳಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ಆಂಜನೇಯ ದೇವಾಲಯದ ಉದ್ಘಾಟನೆ ಕಾರ್ಯಕ್ರಮ ನಡೆದಿದ್ದು, ಈ ವೇಳೆ ಕಾಂಗ್ರೆಸ್ ಮುಖಂಡ ಹಾಗೂ ಜಾಮಿಯಾ ಮಸೀದಿ ಕಮಿಟಿ ಅಧ್ಯಕ್ಷ ಸಿ.ಎನ್.ಅಕ್ಮಲ್ ಅವರು ಅನ್ನಸಂತರ್ಪಣೆ ವ್ಯವಸ್ಥೆ ಮಾಡಿದ್ದರು. ಅಲ್ಲದೇ ದೇವಾಲಯ ಪ್ರವೇಶಿಸಿ ಅರ್ಚಕರು ನೀಡಿದ್ದ ಆರತಿಯನ್ನು ಪಡೆದು ಪ್ರಾರ್ಥನೆ ಸಲ್ಲಿಸಿದ್ದರು. ಇದರ ಬೆನ್ನಲ್ಲೆ ಅಕ್ಮಲ್ ಅವರನ್ನು ಜಾಮಿಯಾ ಮಸೀದಿ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಲಾಗಿತ್ತು.

ತಾನು ದೇವಾಲಯ ಪ್ರವೇಶಿಸಿ ಪೂಜೆ ಮಾಡಿದ್ದ ಕಾರಣಕ್ಕೆ ಜಾಮಿಯಾ ಮಸೀದಿ ಅಧ್ಯಕ್ಷ ಸ್ಥಾನದಿಂದ ತನ್ನನ್ನು ವಜಾಗೊಳಿಸಲಾಗಿದೆ ಎಂಬ ಕಾರಣಕ್ಕೆ ಬುಧವಾರ ನಗರದಲ್ಲಿರುವ ವಕ್ಫ್ ಬೋರ್ಡ್ ಕಚೇರಿಗೆ ತೆರಳಿದ್ದ ಅಕ್ಮಲ್ ಹಾಗೂ ಅವರ ಬೆಂಬಲಿಗರು ಕಚೇರಿಯ ಆಡಳಿತಾಧಿಕಾರಿ ಹಾಗೂ ಸಿಬ್ಬಂದಿಯನ್ನು ತರಾಟೆಗೆ ಪಡೆದು ಜಗಳ ಆಡಿದ್ದಲ್ಲದೇ, ನಮಾಜ್ ಮುಗಿಸಿಕೊಂಡು ಬರುತ್ತಿದ್ದ ಮಸೀದಿಯೊಂದರ ಗುರುಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಹಲ್ಲೆಗೊಳಗಾದ ಮಸೀದಿಯೊಂದರ ಗುರುಗಳನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದ್ದು, ಹಲ್ಲೆ ಮಾಡಿರುವ ಅಕ್ಮಲ್ ಅವರು ಬೇಷರತ್ ಕ್ಷಮೆಯಾಚಿಸಬೇಕೆಂದು ಮಸೀದಿ ಮುಖ್ಯಸ್ಥರು ಆಗ್ರಹಿಸಿದ್ದಾರೆ.

ಈಮಧ್ಯೆ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಅಕ್ಮಲ್, ಮಸೀದಿ ಕಮಿಟಿಯ ಕೆಲವರು ತನ್ನ ವಿರುದ್ಧ ಸಂಚು ಮಾಡಿ ತನಗೆ ನೋಟಿಸ್ ನೀಡದೇ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ್ದಾರೆ. ಈ ಸಂಬಂಧ ತಾನು ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.

ಧರ್ಮದ ಹೆಸರಿನಲ್ಲಿ ರಾಜಕೀಯ ಬೇಡ: ಜಾಮಿಯ ಮಸೀದಿ ಕಮಿಟಿ

ಇತ್ತೀಚಿನ ದಿನಗಳಲ್ಲಿ ದೇವಸ್ಥಾನ ಪ್ರವೇಶಿಸಿ ಪೂಜೆ ಮಾಡಿದ ಕಾರಣಕ್ಕಾಗಿ ತನ್ನನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ಆರೋಪ ಮಾಡುತ್ತಿರುವ ಸಿ.ಎನ್.ಅಕ್ಮಲ್ ಹೇಳಿಕೆ ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದು ಜಾಮಿಯಾ ಮಸೀದಿ ಕಮಿಟಿ ಸದಸ್ಯರು ಸ್ಪಷ್ಟನೆ ನೀಡಿದ್ದಾರೆ.

ನಾವು ಭಾರತ ದೇಶದ ಪ್ರಜೆಗಳು, ಇಲ್ಲಿ ಎಲ್ಲರಿಗೂ ಅವರವರದೇ ಆದ ಸ್ವಾತಂತ್ರ್ಯವಿದೆ. ಯಾವುದೇ ಧರ್ಮದವರು ಯಾವುದೇ ಧರ್ಮವನ್ನು ಪೂಜಿಸಲು ಸ್ವಾತಂತ್ರ್ಯವಿದೆ. ಸ್ವಚ್ಛತೆಯನ್ನು ಕಾಪಾಡಿಕೊಂಡು ಹಿಂದೂಗಳು ಕೂಡ ಮಸೀದಿ ಪ್ರವೇಶಿಸಬಹುದು. ಮುಸಲ್ಮಾನರು ಕೂಡ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಬಹುದು. ಚಿಕ್ಕಮಗಳೂರಿನಲ್ಲಿ ಇಂತಹ ಬಾಂಧವ್ಯ ಎರಡೂ ಧರ್ಮದವರಲ್ಲಿದೆ. ಇಂತಹ ಬಾಂಧವ್ಯದ ಸಮಾಜವನ್ನು ತನ್ನ ರಾಜಕೀಯ ಲಾಭಕ್ಕಾಗಿ ಹಾಗೂ ಪ್ರಚಾರಕ್ಕಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಹಿಂದೂ ಮತ್ತು ಮುಸ್ಲಿಮರ ಭಾವನೆಗಳಿಗೆ ಕೆಲವರು ಧಕ್ಕೆ ತರುತ್ತಿದ್ದಾರೆ. ನಾವು ಭಾರತ ದೇಶದ ಪ್ರಜೆಗಳು ಇಲ್ಲಿ ಹಿಂದು ದೇವಸ್ಥಾನದಲ್ಲಿ ಪೂಜೆ ಮಾಡಿದರೆಂಬ ಕಾರಣಕ್ಕೆ ಅವರನ್ನು ವಜಾಗೊಳಿಸಲು ಸಾಧ್ಯವಿಲ್ಲ, ಅದು ಸರಿಯೂ ಅಲ್ಲ. ಅಕ್ಮಲ್ ಅವರು ಜಾಮಿಯಾ ಮಸೀದಿ ಗುರುಗಳ ಜೊತೆ ಅಸಭ್ಯವಾಗಿ ವರ್ತಿಸಿ ಅವಾಚ್ಯ ಶಬ್ಧಗಳಿಂದ ಬೈದಿರುವ ಕಾರಣಕ್ಕೆ ಅಕ್ಮಲ್ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ಕಮಿಟಿ ಸದಸ್ಯರು ಹೇಳಿಕೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News