ಕೋವಿಡ್ ಮಾರ್ಗಸೂಚಿ ಅನುಸರಿಸಿ ಬೆಳಗಾವಿಯಲ್ಲೇ ಅಧಿವೇಶನ: ಸ್ಪೀಕರ್ ಕಾಗೇರಿ

Update: 2021-12-02 18:56 GMT

ಬೆಳಗಾವಿ, ಡಿ. 2: ‘ಸುವರ್ಣ ವಿಧಾನಸೌಧದಲ್ಲಿ ಇದೇ ತಿಂಗಳ 13ರಿಂದ 24ರವರೆಗೆ ನಿಗದಿಯಾಗಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನವನ್ನು ಕೋವಿಡ್ ಸೋಂಕು ತಡೆಗೆ ಇರುವ ಮಾರ್ಗಸೂಚಿಯನ್ನು ಅನುಸರಿಸಿ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ' ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಗುರುವಾರ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನದ ಪೂರ್ವಭಾವಿ ಸಿದ್ಧತೆಗಳನ್ನು ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಕಾಲಿಕ ಮಳೆ ಹಿನ್ನೆಲೆಯಲ್ಲಿ ಬೆಳೆ ಹಾನಿಯಾಗಿದ್ದು, ಪರಿಹಾರ ಕಾರ್ಯ ಕೈಗೊಳ್ಳಬೇಕಿದೆ. ಈ ಮಧ್ಯೆ ಪರಿಷತ್ ಚುನಾವಣೆ ಮತ ಎಣಿಕೆಯೂ ಡಿ.14ಕ್ಕೆ ನಡೆಯಲಿದೆ. ಈ ಎಲ್ಲ ಕಾರ್ಯಗಳ ನಡುವೆ ಅಧಿವೇಶನವನ್ನು ಸವಾಲಾಗಿ ಸ್ವೀಕರಿಸಿ ಯಶಸ್ವಿಗೊಳಿಸಬೇಕು ಎಂದು ಸಲಹೆ ಮಾಡಿದರು.

‘2018ರ ನಂತರ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ಕಲಾಪ ನಡೆದಿಲ್ಲ. ಈ ಬಾರಿ ಅಧಿವೇಶನ ನಡೆಸಲು ಸದ್ಯ ಯಾವುದೇ ಆತಂಕವಿಲ್ಲ. ಅಧಿವೇಶನಕ್ಕೆ ಬರುವ ಸಚಿವರು, ಶಾಸಕರು, ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಿದ್ದು, ಆಹಾರದ ವ್ಯವಸ್ಥೆ ಬಗ್ಗೆಯೂ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಅವರು ತಿಳಿಸಿದರು.

ವಿದ್ಯಾರ್ಥಿಗಳಿಗೆ ಅವಕಾಶವಿಲ್ಲ: ವಿಧಾನ ಮಂಡಲ ಕಲಾಪ ವೀಕ್ಷಣೆಗೆ ಬರುವ ವಿದ್ಯಾರ್ಥಿಗಳಿಗೆ ಅವಕಾಶವಿಲ್ಲ. ಆದರೆ, ಸಾರ್ವಜನಿಕರಿಗೆ ಕಲಾಪ ವೀಕ್ಷಿಸಲು ಅನುವು ಮಾಡಿಕೊಡಲಾಗುವುದು. ಸರಕಾರದಿಂದ ಈವರೆಗೆ ಯಾವುದೇ ಮಸೂದೆ ನಮ್ಮ ಮುಂದೆ ಬಂದಿಲ್ಲ. ಮಸೂದೆ ಮಂಡಿಸುವುದಿದ್ದರೆ ವಾರದ ಮುಂಚೆ ಕಳುಹಿಸುವಂತೆ ಸರಕಾರಕ್ಕೆ ಸೂಚಿಸಲಾಗಿದೆ ಎಂದರು.

ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಇಪ್ಪತ್ತೈದು ಮಂದಿ ಪರಿಷತ್ ಸದಸ್ಯರ ಅಧಿಕಾರದ ಅವಧಿ 2021ರ ಜ.5ರವರೆಗೆ ಇದೆ. ಹೀಗಾಗಿ, ಅವರೆಲ್ಲರೂ ಪರಿಷತ್ ಕಲಾಪದಲ್ಲಿ ಭಾಗವಹಿಸಬಹುದು. ಡಿ.10ಕ್ಕೆ ಮತದಾನ ಪ್ರಕ್ರಿಯೆ ಮುಗಿಯುವುದರಿಂದ ಅಭ್ಯರ್ಥಿಗಳಿಗೂ (ಹಾಲಿ ಸದಸ್ಯರು) ಭಾಗವಹಿಸಲು ಅವಕಾಶವಿದೆ. ಹೊಸದಾಗಿ ಚುನಾಯಿತರಾದ ಸದಸ್ಯರು ಜ.5ರ ನಂತರ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಸ್ಪಷ್ಟಣೆ ನೀಡಿದರು.

ಬೆಳಗಾವಿ ಅಧಿವೇಶನದ ವೇಳೆ ವಸತಿ ವ್ಯವಸ್ಥೆಗೆ ಖರ್ಚು ಮಾಡಿದ ಹಣದಲ್ಲೆ ಶಾಸಕರ ಭವನ ನಿರ್ಮಿಸಬಹುದಿತ್ತು. ಬೆಳಗಾವಿಯಲ್ಲಿ ಶಾಸಕರ ಭವನ ಹಾಗೂ ಸಚಿವಾಲಯದ ಕಟ್ಟಡ ನಿರ್ಮಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತಂದಿದ್ದೇವೆ. ಮತ್ತೊಮ್ಮೆ ಅವರೊಂದಿಗೆ ಸಮಾಲೋಚನೆ ನಡೆಸುತ್ತೇನೆ ಎಂದು ತಿಳಿಸಿದರು. ಉಪಸಭಾಧ್ಯಕ್ಷ ಆನಂದ್ ಮಾಮನಿ, ಬೆಳಗಾವಿ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News