ಭಾರತ ಮೂಲದ ​ಗೀತಾ ಗೋಪಿನಾಥ್‌ಗೆ ಐಎಂಎಫ್‌ನ 2ನೇ ಅತ್ಯುನ್ನತ ಹೊಣೆಗಾರಿಕೆ

Update: 2021-12-03 03:06 GMT
​ಗೀತಾ ಗೋಪಿನಾಥ್‌ (Photo-PTI)

ವಾಷಿಂಗ್ಟನ್ : ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ನ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ಕಾರ್ಯ ನಿರ್ವಹಿಸುತ್ತಿರುವ ಭಾರತ ಮೂಲದ ಗೀತಾ ಗೋಪಿನಾಥ್, ಈ ಸಂಸ್ಥೆಯ ಎರಡನೇ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಲು ಸಜ್ಜಾಗಿದ್ದಾರೆ.

ಜೆಫ್ರಿ ಒಕಮೊಟೊ ಅವರಿಂದ ಈ ಹೊಣೆಗಾರಿಕೆಯನ್ನು ಗೀತಾ ಗೋಪಿನಾಥ್ ಪಡೆಯಲಿದ್ದಾರೆ ಎಂದು ಸಂಸ್ಥೆ ಗುರುವಾರ ಪ್ರಕಟಿಸಿದೆ.

ಐಎಂಎಫ್‌ನ ಮುಖ್ಯ ಅರ್ಥಶಾಸ್ತ್ರಜ್ಞರಾದ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾದ ಗೀತಾ ಗೋಪಿನಾಥ್, ಮೂರು ವರ್ಷಗಳ ಸಾರ್ವಜನಿಕ ಸೇವೆಯ ಬಳಿಕ ಮುಂದಿನ ಜನವರಿಯಲ್ಲಿ ಹಾರ್ವಡ್ ವಿಶ್ವವಿದ್ಯಾನಿಲಯಕ್ಕೆ ಮರು ಸೇರ್ಪಡೆಯಾಗುವುದಾಗಿ ಕಳೆದ ಅಕ್ಟೋಬರ್‌ನಲ್ಲಿ ಪ್ರಕಟಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಗೀತಾ ಅವರ ಹೊಸ ಹೊಣೆಗಾರಿಕೆ ಅಚ್ಚರಿ ಮೂಡಿಸಿದೆ.

ಸಂಸ್ಥೆಯ ಉನ್ನತ ವ್ಯವಸ್ಥಾಪನಾ ತಂಡದಲ್ಲಿ ಕೆಲ ಹೊಣೆಗಾರಿಕೆಗಳ ಮರುಹಂಚಿಕೆ ಮಾಡಲಾಗಿದೆ ಎಂದು ಐಎಂಎಫ್ ಪ್ರಕಟಿಸಿದೆ. ಸಂಪ್ರದಾಯದಂತೆ ಉಪ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ಅಮೆರಿಕ ನಾಮಕರಣ ಮಾಡುತ್ತದೆ ಹಾಗೂ ಐಎಂಎಫ್ ವ್ಯವಸ್ಥಾಪಕ ನಿರ್ದೇಶಕರು ಈ ನೇಮಕಾತಿ ಮಾಡುತ್ತಾರೆ. ಖಜಾನೆ ವಿಭಾಗ ಇದನ್ನು ದೃಢೀಕರಿಸಿದ ಬಳಿಕ ಅವರು ಹೊಣೆಗಾರಿಕೆಯನ್ನು ನಿಭಾಯಿಸುತ್ತಾರೆ ಎಂದು ಉನ್ನತ ಮೂಲಗಳು ಹೇಳಿವೆ.

ಪ್ರಥಮ ಉಪ ವ್ಯವಸ್ಥಾಪಕ ನಿರ್ದೇಶಕರು ಸರ್ವೇಕ್ಷಣೆ ಮತ್ತು ಸಂಬಂಧಿತ ನೀತಿಗಳನ್ನು ರೂಪಿಸುವಲ್ಲಿ ಮುಂಚೂಣಿಯಲ್ಲಿರುತ್ತಾರೆ ಹಾಗೂ ಗರಿಷ್ಠ ಗುಣಮಟ್ಟವನ್ನು ಕಾಪಾಡುವ ದೃಷ್ಟಿಯಿಂದ ಸಂಶೋಧನೆ ಮತ್ತು ಪ್ರಮುಖ ಪ್ರಕರಣೆಗಳ ಮೇಲ್ವಿಚಾರಣೆ ಹೊಂದಿರುತ್ತಾರೆ ಎಂದು ಐಎಂಎಫ್ ಹೇಳಿದೆ.

ಸಾಂಕ್ರಾಮಿಕದ ಅವಧಿಯಲ್ಲಿ ಮತ್ತು 2020ರ ಆರ್ಥಿಕ ಹಿಂಜರಿತದ ಅವಧಿಯಲ್ಲಿ ಐಎಂಎಫ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥರಾಗಿ ಗೋಪಿನಾಥ್ ಕಾರ್ಯ ನಿರ್ವಹಿಸಿದ್ದರು. ಹಾರ್ವರ್ಡ್ ವಿವಿಯಲ್ಲಿ 2005ರಿಂದ ಪ್ರಾಧ್ಯಾಪಕರಾಗಿರುವ ಅವರು, 2019ರಲ್ಲಿ ಐಎಂಎಫ್ ಸೇರಿದ್ದರು. 2020ರ ಮಾರ್ಚ್‌ನಲ್ಲಿ ಪ್ರಥಮ ಉಪ ಎಂಡಿ ಆಗಿ ಅಧಿಕಾರ ಸ್ವೀಕರಿಸಿದ ಒಕಮೊಟೊ ಖಾಸಗಿ ವಲಯಕ್ಕೆ ಮರಳುತ್ತಿರುವ ಹಿನ್ನೆಲೆಯಲ್ಲಿ ಗೀತಾ ಗೋಪಿನಾಥ್ ಅವರನ್ನುಈ ಹುದ್ದೆಗೆ ಆಯ್ಕೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News