ಅಧಿಕಾರ ವಿಕೇಂದ್ರೀಕರಣದಲ್ಲಿ ಬಿಜೆಪಿಯವರಿಗೆ ನಂಬಿಕೆ ಇಲ್ಲ: ಸಿದ್ದರಾಮಯ್ಯ

Update: 2021-12-03 09:00 GMT

ಚಿಕ್ಕಮಗಳೂರು, ಡಿ.3: ಬಿಜೆಪಿಯವರು ಜನ ಸ್ವರಾಜ್ಯ ಯಾತ್ರೆ ಆರಂಭಿಸಿದ್ದಾರೆ.‌ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಕಿ ಇದ್ದರೂ ಅವರು ಸ್ಥಳೀಯ ಸಂಸ್ಥೆಗಳ ಬಲವರ್ಧನೆ ಮಾಡಲಿಲ್ಲ. ಅಧಿಕಾರ ವಿಕೇಂದ್ರೀಕರಣದಲ್ಲಿ ಬಿಜೆಪಿಯವರಿಗೆ ನಂಬಿಕೆ ಇಲ್ಲ. ಆ ವ್ಯವಸ್ಥೆಯಲ್ಲಿ ಪ್ರಾಮಾಣಿಕವಾಗಿ ಕೆಲಸವನ್ನೂ ಮಾಡಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ನಂಬಿಕೆ ಇದ್ದಿದ್ದರೆ ರಾಜ್ಯ ಬಿಜೆಪಿ ಸರಕಾರ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಮುಂದೂಡುತ್ತಿರಲಿಲ್ಲ. ಚುನಾವಣೆ ಮುಂದೂಡಲು ಒಂದು ಕಾನೂನು ಬೇರೆ  ತಂದಿದ್ದಾರೆ. ಚುನಾವಣೆ ನಡೆಸುವ ವಿಚಾರದಲ್ಲಿ ಬಿಜೆಪಿಯವರಿಗೆ ಬದ್ಧತೆ ಇಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.

ಮೋದಿಯವರು ಪ್ರಧಾನಿಯಾಗಿ ಎಂಟು ವರ್ಷಗಳಾದರೂ ಸ್ಥಳೀಯ ಸಂಸ್ಥೆಗಳಿಗೆ ಹಣಕಾಸು ಶಕ್ತಿ ತುಂಬಲಿಲ್ಲ. ಯಾವುದೇ ಕಾರ್ಯಕ್ರಮವ ರೂಪಿಸಲಿಲ್ಲ. ಸಾಮಾಜಿಕ ನ್ಯಾಯ ಮತ್ತು ಅಧಿಕಾರ ವಿಕೇಂದ್ರೀಕರಣಕ್ಕೆ ವಿರುದ್ಧವಾಗಿರುವ ಬಿಜೆಪಿಯವರಿಗೆ 'ಜನ ಸ್ವರಾಜ್ಯ ಯಾತ್ರೆ' ನಡೆಸಲು ನೈತಿಕ ಹಕ್ಕಿಲ್ಲ ಎಂದು ಕಿಡಿಕಾರಿದರು.

ಚಿಕ್ಕಮಗಳೂರು ಕ್ಷೇತ್ರದಿಂದ ಕಳೆದ ಬಾರಿ ವಿಧಾನ ಪರಿಷತ್ ಗೆ ಆಯ್ಕೆಯಾಗಿ ಹೋದ ಪ್ರಾಣೇಶ್ ಒಂದು ದಿನವೂ ಪಂಚಾಯತ್ ರಾಜ್ ವ್ಯವಸ್ಥೆ ಕುರಿತು ಮಾತಾಡಿಲ್ಲ. ಯಾವುದೇ ಪಂಚಾಯತ್ ಗೆ ಹೋಗಿಲ್ಲ ಎಂದು ಆರೋಪಿಸಿದರು.

ರಾಜ್ಯ ಬಿಜೆಪಿ ಸರ್ಕಾರ ಮೂರೂವರೆ ವರ್ಷದಲ್ಲಿ  ಬಡವರಿಗೆ ಒಂದೇ ಒಂದು ಮನೆ ಕೊಟ್ಟಿಲ್ಲ. ಕೊಟ್ಟಿದ್ದರೆ ಸಿ.ಟಿ.ರವಿ ಹೇಳಲಿ. ನಮ್ಮ ಅವಧಿಯಲ್ಲಿ‌ ಮಂಜೂರಾದ ಮನೆಗಳಿಗೆ ಎರಡನೇ ಕಂತಿನ ಅನುಸಾನ ಕೊಡದೆ ಲಾಕ್ ಮಾಡಿದರು ಎಂದು ಸಿದ್ದರಾಯ್ಯ ಹೇಳಿದರು.

ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ ಕಾಯಿದೆಗಳನ್ನು ವಿರೋಧಿಸಿ ನಡೆದ ಹೋರಾಟದಲ್ಲಿ  700 ರೈತರು ಸತ್ತರು. ಇದಕ್ಕೆ ಯಾರು ಜವಾಬ್ದಾರಿ. ಕಾಯಿದೆ ಜಾರಿಗೆ ತರದೇ ಹೋಗಿದ್ದರೆ ರೈತರು ಹೋರಾಟ ನಡೆಸಿ ಪ್ರಾಣ ಕಳೆದುಕೊಳ್ಳುತ್ತಿರಲಿಲ್ಲ. ರೈತರ ಸಾವಿಗೆ ಕೇಂದ್ರ ಸರ್ಕಾರ, ಮೋದಿ ಜವಾಬ್ದಾರಿ ಎಂದರು.

 ಮಳೆಯಿಂದಾಗಿ ಬೆಂಗಳೂರಿನ ರಸ್ತೆಗಳು ಹಾಳಾಗಿವೆ. ಈವರೆಗೆ ಒಂದು ಗುಂಡಿ ಮುಚ್ವಿಲ್ಲ, ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡವರಿಗೆ ಪರಿಹಾರ ಕೊಟ್ಟಿಲ್ಲ. ಈವರೆಗೆ ಬೆಳೆ ಹಾನಿ ಕುರಿತು ಸಮೀಕ್ಷೆ ಮಾಡಿಲ್ಲ ಎಂದು ತಿಳಿಸಿದರು.

ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗುತ್ತಿಗೆದಾರರ ಸಂಘ ಪ್ರಧಾನಿಯವರಿಗೆ ಪತ್ರ ಬರೆದು ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದೆ. ಈ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಒಂದು ಆಯೋಗ ರಚಿಸಬೇಕು. ನಮ್ಮ ಸರಕಾರದ ಅವಧಿಯಲ್ಲಿ ಭ್ರಷ್ಟಾಚಾರ ಆಗಿದ್ದರೆ ಆ ಬಗ್ಗೆ ಕೂಡ ತನಿಖೆ ನಡೆಸಲಿ. ಆದರೆ ಸರಕಾರಕ್ಕೆ ಧಮ್ ಇಲ್ಲ. ಕುರಿ ಕಾಯೋ ತೋಳ ಸಂಬಳ ಬೇಡ ಎಂದಂತೆ ಅಧಿಕಾರಿಗಳ ಮೂಲಕ ತನಿಖೆಗೆ ಆದೇಶಿಸಲಾಗಿದೆ ಎಂದು ಟೀಕಿಸಿದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನ ಗೆಲ್ಲುವ ವಿಶ್ವಾಸವಿದೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಗಾಯತ್ರಿ ಶಾಂತೇಗೌಡರ ಗೆಲುವು ಖಚಿತ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News