ಒಮೈಕ್ರಾನ್ ಬಗ್ಗೆ ಯಾರಿಗೂ ಸ್ಪಷ್ಟತೆ ಇಲ್ಲ: ಮುಖ್ಯಮಂತ್ರಿ ಬೊಮ್ಮಾಯಿಗೆ ಮಾಜಿ ಸಚಿವ ಎಚ್.ಕೆ.ಪಾಟೀಲ್ ಪತ್ರ

Update: 2021-12-03 12:33 GMT
ಫೈಲ್ ಚಿತ್ರ -(ಎಚ್.ಕೆ.ಪಾಟೀಲ್)

ಬೆಂಗಳೂರು, ಡಿ.3: ಒಮೈಕ್ರಾನ್ ವೈರಸ್ ಗಂಭೀರವೋ, ಮಾರಣಾಂತಿಕವೋ, ಮತ್ತಷ್ಟು ಸಂಕಷ್ಕಕ್ಕೀಡು ಮಾಡುವುದೋ ಎಂಬ ಬಗ್ಗೆ ಯಾರಿಗೂ ಯಾವುದೇ ಸ್ಪಷ್ಟತೆ ಇಲ್ಲ. 2019ರಲ್ಲಿ ವಿಶ್ವದಾದ್ಯಂತ ಕೊರೋನ ವೈರಸ್ ಆರಂಭಿಕ ದಿನಗಳಲ್ಲಿ ಇದ್ದಂತಹ ಸ್ಥಿತಿಯೇ ಮತ್ತೊಮ್ಮೆ ಮರುಕಳಿಸಿದೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, ಒಮೈಕ್ರಾನ್ ವೈರಸ್ ಈ ಮೊದಲಿನ ವೈರಸ್‍ಗಳಿಗಿಂತ ತ್ವರಿತವಾಗಿ, ವೇಗವಾಗಿ ಹರಡುತ್ತದೆ. ನ.20ರಂದು ಬೆಂಗಳೂರಿನ ಖಾಸಗಿ ಹೊಟೇಲ್‍ನಲ್ಲಿ ನಡೆದ ವೈದ್ಯಕೀಯ ಸಮ್ಮೇಳನವೊಂದರಲ್ಲಿ 250 ಕ್ಕೂ ಹೆಚ್ಚು ವೈದ್ಯರು ಪಾಲ್ಗೊಂಡಿದ್ದರು. ಈ ಪೈಕಿ ರಾಜ್ಯ ಸರಕಾರದ ವೈದ್ಯರೊಬ್ಬರಿಗೆ ಒಮೈಕ್ರಾನ್ ಸೋಂಕು ಕಾಣಿಸಿಕೊಂಡಿರುವುದು ಗಂಭೀರವಾದ ವಿಷಯ ಎಂದು ಹೇಳಿದ್ದಾರೆ.

ಅವರ ಪತ್ನಿ ಹಾಗೂ ಮಗಳಿಗೂ ಮತ್ತು ಇತರೆ 3 ಜನರಿಗೂ ಪಾಸಿಟಿವ್ ಫಲಿಂತಾಶವಿದೆ. (ಒಮೈಕ್ರಾನ್ ದೃಢಪಡಬೇಕಿದೆ) ಈ ವೈದ್ಯಕೀಯ ಸಮ್ಮೇಳನದಲ್ಲಿ ಪಾಲ್ಗೊಂಡವರ ಪಟ್ಟಿ ಮತ್ತು ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಈವರೆಗೂ (13 ದಿನ ಕಳೆದರೂ) ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದು ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ಈ ಸಂಪರ್ಕಿತರನ್ನು ಪತ್ತೆ ಮಾಡಲು ಸಾಧ್ಯವೂ ಆಗಲಿಕ್ಕಿಲ್ಲ. ಏಕೆಂದರೆ ಸಮ್ಮೇಳನದಲ್ಲಿ ಭಾಗವಹಿಸಿದವರ ದತ್ತಾಂಶ(DATA) ಪತ್ತೆ ಹಚ್ಚಲು ಯಾವುದೇ ಪ್ರಯತ್ನ ರಾಜ್ಯ ಕಣ್ಗಾವಲು ಘಟಕದಿಂದ ನಡೆದಿಲ್ಲ. ಯಾವುದೇ ತಾಂತ್ರಿಕ ವಿಧಾನ ಅನುಸರಿಸಿಲ್ಲ. ಈ ಸಮ್ಮೇಳನಕ್ಕೆ 125 ಕ್ಕೂ ಹೆಚ್ಚು ವಾಹನಗಳು (Cab/Private Vechicle)  ಬಳಕೆಯಾಗಿವೆ. ಸಮ್ಮೇಳನಕ್ಕೆ ಬಂದವರು ಬೆಂಗಳೂರಿನ ಮಾಲ್‍ಗಳಲ್ಲಿ ಶಾಪಿಂಗ್ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ ಬೆಂಗಳೂರಿನಲ್ಲಿ ಐತಿಹಾಸಿಕ ಕಡಲೇಕಾಯಿ ಪರಿಷೆಗೆ ಅನುಮತಿ ನೀಡಲಾಗಿತ್ತು. ಈ ಪರಿಷೆಯಲ್ಲಿ 25,000 ದಿಂದ 1 ಲಕ್ಷ ಜನ ಪ್ರತಿದಿನ ಪಾಲ್ಗೊಂಡಿದ್ದಾರೆ. 7 ದಿನ ಪರೀಕ್ಷೆ ನಡೆಯುತ್ತಿದೆ. ಕೊರೋನ ಪ್ರಕರಣಗಳು ಪತ್ತೆಯಾದರೂ ಸಹಿತ ಜೆನೋಮಿಕ್ ಸಿಕ್ವೆಂನ್ಸಿಂಗ್ ಮೂಲಕ ರೋಗ ಒಮೈಕ್ರಾನ್ ಪತ್ತೆ ಮಾಡಲು 10 ರಿಂದ 12 ದಿನ ವಿಳಂಬವಾಗುತ್ತಿದೆ. ಪರಿಣಾಮಕಾರಿ ಚಿಕಿತ್ಸಾ ವಿಧಾನ (Treatment Protocol) ) ಇನ್ನೂ ಅಂತಿಮಗೊಂಡಿಲ್ಲ. ಆರೋಗ್ಯ ಇಲಾಖೆ ಸನ್ನದ್ಧ ಸ್ಥಿತಿಯಲ್ಲಿ ಇಲ್ಲವೇ ಇಲ್ಲ ಎಂದು ಅವರು ದೂರಿದ್ದಾರೆ.

ಈಗ ಒಮೈಕ್ರಾನ್ ಪತ್ತೆಯಾಗಿರುವ ಇಬ್ಬರೂ ರೋಗಿಗಳ ಜಿನೋಮಿಕ್ ಸಿಕ್ವೆಂನ್ಸಿಂಗ್ ತಪಾಸಣೆಯನ್ನು ಖಾಸಗಿ ಲ್ಯಾಬ್‍ನಲ್ಲಿ ಮಾಡಲಾಗಿತ್ತು. ಆದರೆ ಅಲ್ಲಿ ನೆಗೆಟಿವ್ ವರದಿ ನೀಡಲಾಗಿತ್ತು. ನಂತರ ಸರಕಾರಿ ಲ್ಯಾಬ್ ಪಾಸಿಟಿವ್ ವರದಿ ನೀಡಿದೆ. ದಿನ ಕಳೆದಂತೆ ಒಮೈಕ್ರಾನ್ ವೈರಸ್ ಹರಡುವಿಕೆ, ಆತಂಕ ಹೆಚ್ಚಿಸುತ್ತಲೇ ಹೋಗುತ್ತಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

13 ದಿನ ಕಳೆದರೂ ಅಂತರ್‍ರಾಷ್ಟ್ರೀಯ ಪ್ರಯಾಣಿಕರ ಮೇಲೆ ಎಚ್ಚರಿಕೆ, ಕಣ್ಗಾವಲು ವಹಿಸುವಲ್ಲಿ ಬಿಬಿಎಂಪಿ ಸಂಪೂರ್ಣ ವಿಫಲವಾಗಿದೆ. ನವೆಂಬರ್ ತಿಂಗಳ ಮೊದಲ ವಾರದಲ್ಲಿಯೇ ವಿದೇಶಗಳಲ್ಲಿ ಒಮೈಕ್ರಾನ್ ಪ್ರಕರಣಗಳು ವರದಿಯಾಗಲು ಪ್ರಾರಂಭವಾಗಿತ್ತು. ಆದರೂ ಬೆಂಗಳೂರಿಗೆ ಸಮ್ಮೇಳನಕ್ಕೆ ಆಗಮಿಸಿದ ವೈದ್ಯರು, ಪ್ರಯಾಣಿಕರ ಅಗತ್ಯ ಮತ್ತು ಎಚ್ಚರಿಕೆಯ ತಪಾಸಣೆ ನಡೆಯಲಿಲ್ಲ. ಒಮೈಕ್ರಾನ್ ವೈರಸ್ ತ್ವರಿತಗತಿಯಲ್ಲಿ ವಿಶ್ವದಾದ್ಯಂತ 1:4 ಅನುಪಾತದಲ್ಲಿ ಹರಡುತ್ತಿದೆ ಎಂಬ ವರದಿಗಳಿವೆ ಎಂದು ಅವರು ತಿಳಿಸಿದ್ದಾರೆ.

ವಿನಂತಿ: ತಾಂತ್ರಿಕ ಸಲಹಾ ಸಮಿತಿಯ 136ನೇಯ ಸಭೆಯ ಶಿಫಾರಸ್ಸುಗಳನ್ನು ತಕ್ಷಣ ಜಾರಿಗೊಳಿಸಿ. ಎಲ್ಲ ಅಂತರ್‍ರಾಷ್ಟ್ರೀಯ ಪ್ರಯಾಣಿಕರ ಸಾಂಸ್ಥಿಕ ಕ್ವಾರಂಟೈನ್ ಮಾಡಿ. ವಿದೇಶದಿಂದ ಬಂದವರನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಬೇಕು.

ತಾಂತ್ರಿಕ ಸಲಹಾ ಸಮಿತಿಯ 136ನೇ ಸಭೆಯ ನಡುವಳಿಗಳನ್ನು ಬಹಿರಂಗಪಡಿಸಬೇಕು. ತಕ್ಷಣ ವೀಕೆಂಡ್ ಕರ್ಫ್ಯೂ, ವರ್ಕ್ ಫ್ರಮ್ ಹೋಮ್ ಮತ್ತು ಇತರ ಕಠಿಣ ಕ್ರಮಗಳನ್ನು ಅನುಷ್ಠಾನಗೊಳಿಸಬೇಕು. ಈ ಮೇಲ್ಕಂಡ ಕ್ರಮಗಳನ್ನು ಕೂಡಲೇ ಜಾರಿಗೆ ತನ್ನಿ, ಜನಹಿತದ ದೃಷ್ಟಿಯಿಂದ ಆರೋಗ್ಯ ಇಲಾಖೆಯನ್ನು ಯುದ್ದೋಪಾದಿಯಲ್ಲಿ ಕಾರ್ಯನಿರ್ವಹಿಸುವಂತೆ ಸನ್ನದಗೊಳಿಸಬೇಕು ಎಂದು ಎಚ್.ಕೆ.ಪಾಟೀಲ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News