ಹೊಸ ವೈರಾಣು ಸಂಬಂಧಿತ ಚಿಕಿತ್ಸೆಗೆ ಮೆಡಿಕಲ್ ಕಾಲೇಜುಗಳಲ್ಲಿ ಸಿದ್ಧತೆ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

Update: 2021-12-03 12:38 GMT
 ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು, ಡಿ.3: 18 ಸಾವಿರ ದಾದಿಯರಿಗೆ ಒಂದು ತಿಂಗಳ ತರಬೇತಿ, ಮಕ್ಕಳ ಐಸಿಯು ಸಿದ್ಧತೆ ಸೇರಿದಂತೆ ಕೋವಿಡ್ ಸಂಭವನೀಯ ಮೂರನೇ ಅಲೆಗೆ ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಲು ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಶುಕ್ರವಾರ ನಗರದ ಮಾಗಡಿ ರಸ್ತೆಯಲ್ಲಿರುವ ಆರೋಗ್ಯ ಸೌಧದಲ್ಲಿ ವೈದ್ಯಕೀಯ ಕಾಲೇಜುಗಳ ನಿರ್ದೇಶಕರೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಜಿಲ್ಲಾಮಟ್ಟದಲ್ಲಿ ತೃತೀಯ ಹಂತದ ಆರೋಗ್ಯ ಸೇವೆ ನೀಡಲು 21 ವೈದ್ಯಕೀಯ ಕಾಲೇಜುಗಳಿದ್ದು, ಸಂಭವನೀಯ ಮೂರನೇ ಅಲೆ ಅಥವಾ ಹೊಸ ಒಮೈಕ್ರಾನ್ ವೈರಾಣು ಸಂಬಂಧಿತ ಚಿಕಿತ್ಸೆ ಸಿದ್ಧತೆ ಕುರಿತು ಚರ್ಚಿಸಲಾಗಿದೆ. ವೈದ್ಯಕೀಯ ಕಾಲೇಜುಗಳ ಎಚ್‍ಒಡಿ, ಪ್ರೊಫೆಸರ್, ಹಿರಿಯ ವೈದ್ಯರು ಸೇರಿದಂತೆ ಪ್ರತಿಯೊಬ್ಬರೂ ಸಮಯೋಚಿತವಾಗಿ ವರ್ತಿಸಬೇಕು. ಗೃಹ ವೈದ್ಯರು, ಅಂತಿಮ ವರ್ಷದ ವೈದ್ಯ ವಿದ್ಯಾರ್ಥಿಗಳು ಸೇರಿ ಪರಿಣಾಮಕಾರಿ ಚಿಕಿತ್ಸೆ ನೀಡಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಒಂದನೇ ಮತ್ತು ಎರಡನೇ ಅಲೆಯಲ್ಲಿ ಐಸಿಯುನಲ್ಲಿದ್ದ ಸೋಂಕಿತರಿಗೆ ಚಿಕಿತ್ಸೆ ನೀಡಲು ದಾದಿಯರ ಕೊರತೆಯಾಗಿತ್ತು. ಈಗ ಆ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲಾಗಿದೆ. ಅಂತಿಮ ವರ್ಷದ ನಸಿರ್ಂಗ್, ಪ್ಯಾರಾ ಮೆಡಿಕಲ್‍ನಲ್ಲಿ ಸುಮಾರು 18 ಸಾವಿರ ಮಂದಿ ಇದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಅವರಿಗೆ ಒಂದು ತಿಂಗಳ ತರಬೇತಿ ನೀಡಬೇಕೆಂದು ಸೂಚನೆ ನೀಡಲಾಗಿದೆ ಎಂದು ಸುಧಾಕರ್ ಹೇಳಿದರು.

ಮಕ್ಕಳ ಐಸಿಯು ಸಿದ್ಧ: ಸಚಿವ ಸಂಪುಟದ ನಿರ್ಧಾರದಂತೆ ಮಕ್ಕಳ ಐಸಿಯುಗಳ ಸಿದ್ಧತೆಗೆ ಸೂಚಿಸಲಾಗಿದೆ. ಅಗತ್ಯ ಉಪಕರಣಗಳ ಖರೀದಿ ಹಾಗೂ ಇತರ ಎಲ್ಲ್ಲ ವ್ಯವಸ್ಥೆಗಳ ಬಗ್ಗೆ ಸಂಪೂರ್ಣ ವಿವರ ಪಡೆಯಲಾಗಿದೆ. ಸಂಸ್ಥೆಗಳು ಮುಂದಿಟ್ಟ ಸಮಸ್ಯೆಗಳಿಗೂ ಪರಿಹಾರ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಗೃಹ ವೈದ್ಯರ ಕೋವಿಡ್ ರಿಸ್ಕ್ ಭತ್ತೆ ಬಾಕಿ ಇದ್ದು, ಹಣಕಾಸು ಇಲಾಖೆಯಿಂದ 55 ಕೋಟಿ ರೂ. ಬಿಡುಗಡೆ ಮಾಡಿಸಲಾಗಿದೆ. ಒಟ್ಟಾರೆಯಾಗಿ ಬೇಕಾಗಿದ್ದ 73 ಕೋಟಿ ರೂ. ಅನ್ನು ಒಂದೆರಡು ದಿನಗಳಲ್ಲಿ ಖಾತೆಗೆ ಜಮೆಯಾಗುವಂತೆ ಕ್ರಮ ವಹಿಸಲಾಗಿದೆ. ಪ್ರತಿ ತಿಂಗಳು ವೇತನ ಖಾತೆಗೆ ಜಮೆಯಾಗಲು ತಾಂತ್ರಿಕ ಸಮಸ್ಯೆಗಳಿದ್ದವು. ಎಚ್‍ಆರ್‍ಎಂಎಸ್‍ನಲ್ಲಿ ನೋಂದಣಿಗೆ ಸಂಸ್ಥೆಗಳು 20 ದಿನಗಳ ಕಾಲ ತೆಗೆದುಕೊಂಡಿವೆ. ಡಿಸೆಂಬರ್‍ನಿಂದ ವೇತನ ನೇರವಾಗಿ ಖಾತೆಗೆ ಜಮೆಯಾಗಲಿದೆ ಎಂದು ಸುಧಾಕರ್ ವಿವರಿಸಿದರು.

ಕೋವಿಡ್ ತಾಂತ್ರಿಕ ಸಮಿತಿ ಸಲಹೆಯ ಆಧಾರದ ಮೇಲೆ ಒಮೈಕ್ರಾನ್ ಸೋಂಕಿತರಿಗೆ ವಿಶೇಷ ಐಸಿಯು ಹಾಗೂ ವಾರ್ಡ್ ಕಲ್ಪಿಸಲಾಗುವುದು. ಡೆಲ್ಟಾ ಸೋಂಕಿತರಿಗೆ ಪ್ರತ್ಯೇಕ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಮೀಸಲಿಡಬೇಕಾದ ಹಾಸಿಗೆ ಹಾಗೂ ಐಸಿಯು ಬಗ್ಗೆ ನಿರ್ಧರಿಸಲಾಗುವುದು ಎಂದು ಅವರು ಹೇಳಿದರು.

ಆಫ್ರಿಕಾದಿಂದ ಬಂದ 57 ಪ್ರಯಾಣಿಕರ ಪೈಕಿ 10 ಮಂದಿ ಪತ್ತೆ ಆಗದಿರುವ ಬಗ್ಗೆ ಅಧಿಕೃತ ಮಾಹಿತಿ ಪಡೆಯಬೇಕಿದೆ. ಈ ಕುರಿತು ವಿಶೇಷ ಗಮನ ನೀಡಲಾಗಿದೆ. ಈ ಹಿಂದೆ ಪೊಲೀಸ್ ಇಲಾಖೆ ಹೀಗೆ ತಪ್ಪಿಸಿಕೊಂಡವರನ್ನು ಪತ್ತೆಹಚ್ಚಿ ಉತ್ತಮ ಕೆಲಸ ಮಾಡಿತ್ತು. ಈ ಬಾರಿಯೂ ಪೊಲೀಸ್ ಇಲಾಖೆ ದಕ್ಷತೆ ತೋರಬೇಕಿದೆ. ಆದರೆ ಈ ರೀತಿ ತಪ್ಪಿಸಿಕೊಳ್ಳುವ ಪ್ರಯಾಣಿಕರು ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಸುಧಾಕರ್ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News