ವಿಧಾನಪರಿಷತ್ ಚುನಾವಣೆ: ರಮೇಶ್ ಜಾರಕಿಹೊಳಿ ಒಬ್ಬ ಅಭ್ಯರ್ಥಿಯನ್ನು ಮಾತ್ರ ಗೆಲ್ಲಿಸಬಹುದಷ್ಟೇ ಎಂದ ಸತೀಶ್ ಜಾರಕಿಹೊಳಿ

Update: 2021-12-03 13:52 GMT
ರಮೇಶ್ ಜಾರಕಿಹೊಳಿ                                 ಸತೀಶ್ ಜಾರಕಿಹೊಳಿ

ಬೆಳಗಾವಿ, ಡಿ. 3: ‘ವಿಧಾನ ಪರಿಷತ್ ಚುನಾವಣೆಯಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿಯಿಂದ ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸಲು ಸಾಧ್ಯವಾಗುವುದಿಲ್ಲ. ಅವರೇನಿದ್ದರೂ ಒಬ್ಬ ಅಭ್ಯರ್ಥಿಯನ್ನು ಮಾತ್ರ ಗೆಲ್ಲಿಸಬಹುದಷ್ಟೇ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಇಂದಿಲ್ಲಿ ತಿರುಗೇಟು ನೀಡಿದ್ದಾರೆ.

ಶುಕ್ರವಾರ ನಗರದ ಕಾಂಗ್ರೆಸ್ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಈಗಾಗಲೇ ಒಂದು ಸುತ್ತಿನ ಪ್ರಚಾರ ಮುಗಿಸಿದ್ದೇವೆ. ಎರಡನೆ ಸುತ್ತಿನ ಪ್ರಚಾರ ಆರಂಭವಾಗಿದೆ. ಚುನಾವಣೆಗೂ ಮುಂಚೆಯೇ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಲಖನ್ ಜಾರಕಿಹೊಳಿ ಬಗ್ಗೆ ನಾವು ಈಗಾಗಲೇ ಏನು ಮಾತನಾಡಬೇಕಿತ್ತೋ ಮಾತನಾಡಿದ್ದೇವೆ ಎಂದು ತಿಳಿಸಿದರು.

ಪಕ್ಷೇತರ ಅಭ್ಯರ್ಥಿ ಲಖನ್‍ಗೂ ನಮ್ಮ ಪಕ್ಷಕ್ಕೂ ಸಂಬಂಧ ಇಲ್ಲ. ನಾವು ಚುನಾವಣೆ ಮಾಡುತ್ತಿರುವುದು ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿ ಲಖನ್ ವಿರುದ್ಧ. ಈ ಚುನಾವಣೆಯಲ್ಲಿ ಕುಟುಂಬ ವಿಷಯ ತರುವುದು ಸರಿಯಲ್ಲ. ಇನ್ನು ಈ ಬಾರಿಯ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಕಾಂಗ್ರೆಸ್ ಮತಗಳನ್ನು ಈಗಾಗಲೇ ನಾವು ಭದ್ರಪಡಿಸಿಕೊಂಡಿದ್ದೇವೆ ಎಂದರು.

‘ರಮೇಶ್ ಜಾರಕಿಹೊಳಿ ನಮ್ಮ ಪಕ್ಷಕ್ಕೆ ಬುದ್ಧಿವಾದ ಹೇಳುವ ಅವಶ್ಯಕತೆ ಇಲ್ಲ. ಅವರ ಪಕ್ಷದಲ್ಲಿಯೇ ಗೊಂದಲಗಳನ್ನು ಮೊದಲು ಸರಿಪಡಿಸಿಕೊಳ್ಳಲಿ. ಒಂದೇ ವೇದಿಕೆಯಲ್ಲಿ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಾರೆ. ಮೊದಲು ಅದನ್ನು ಸರಿಪಡಿಸಿಕೊಳ್ಳಲಿ. ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸುಖಾ ಸುಮ್ಮನೆ ಹೇಳಿಕೆ ನೀಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News