ವೈದ್ಯಕೀಯ ಡಿಪ್ಲೋಮಾ ಪ್ರವೇಶಕ್ಕೆ ಕೃಪಾಂಕ: ಅಧಿಸೂಚನೆ ರದ್ದುಪಡಿಸಿದ ಹೈಕೋರ್ಟ್

Update: 2021-12-03 15:23 GMT

ಬೆಂಗಳೂರು, ಡಿ.3: ಸರಕಾರಿ ಸೇವಾನಿರತ ವೈದ್ಯರು 2019-20ನೆ ಶೈಕ್ಷಣಿಕ ವರ್ಷದಲ್ಲಿ ಸ್ನಾತಕೋತ್ತರ ವೈದ್ಯಕೀಯ ಡಿಪ್ಲೋಮಾ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಕೃಪಾಂಕಗಳನ್ನು ನೀಡಲು ಮಾನದಂಡಗಳನ್ನು ನಿಗದಿಪಡಿಸಿ ರಾಜ್ಯ ಸರಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ರದ್ದುಪಡಿಸಿದೆ.

ಸರಕಾರದ ಅಧಿಸೂಚನೆಯನ್ನು ಪ್ರಶ್ನಿಸಿ ಡಾ.ಪ್ರೀತಿ ಜಿ. ರಾಥೋಡ್ ಹಾಗೂ ಇತರೆ ಸೇವಾನಿರತ ವೈದ್ಯರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅಲೋಕ್ ಆರಾಧೆ ಅವರ ನೇತತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಕೀಲರ ವಾದ ಆಲಿಸಿದ ನ್ಯಾಯಪೀಠ, ರಾಜ್ಯ ಸರಕಾರ 2019ರ ಮಾ.8ರಂದು ಹೊರಡಿಸಿರುವ ಅಧಿಸೂಚನೆಯು ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಇದರ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ನಿಯಮಗಳು-2000ರ ಸೆಕ್ಷನ್ 9(4)ಗೆ ವಿರುದ್ಧವಾಗಿದೆ ಎಂದು ಹೇಳಿ ಸರಕಾರದ ಅಧಿಸೂಚನೆಯನ್ನು ರದ್ದುಪಡಿಸಿ ಆದೇಶಿಸಿತು.

ಅರ್ಜಿಗೆ ರಾಜ್ಯ ಸರಕಾರ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿರೋಧ ವ್ಯಕ್ತಪಡಿಸಿದರೆ, ರಾಜೀವಗಾಂಧಿ ಆರೋಗ್ಯ ವಿವಿ ಮತ್ತು ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಅರ್ಜಿದಾರರನ್ನು ಬೆಂಬಲಿಸಿದ್ದವು. ಅರ್ಜಿದಾರರ ಪರ ವಕೀಲೆ ಅಕ್ಕಮಹಾದೇವಿ ಹಿರೇಮಠ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News