ಕೊರೋನ ನಿಯಂತ್ರಣ ಕುರಿತ ಅರ್ಜಿ: ಸರಕಾರ ಕೆಲಸ ಮಾಡಿಲ್ಲ ಎಂದು ಒಪ್ಪಲು ಸಾಧ್ಯವಿಲ್ಲ; ಹೈಕೋರ್ಟ್

Update: 2021-12-05 15:12 GMT

ಬೆಂಗಳೂರು, ಡಿ.5: ಕೋರೋನ ವೈರಸ್ ಹೊಸ ರೂಪಾಂತರಿ ಪತ್ತೆಯಾದ ಹಿನ್ನಲೆಯಲ್ಲಿ ರಾಜ್ಯ ಸರಕಾರ ಮತ್ತು ಆಡಳಿತ ಯಂತ್ರ ಸರಣಿ ಸಭೆಗಳನ್ನು ನಡೆಸಿ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಹೀಗಿರುವಾಗ ಸರಕಾರ ಏನೂ ಮಾಡುತ್ತಿಲ್ಲ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಕೊರೋನ ನಿಯಂತ್ರಣ, ನಿರ್ವಹಣೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ 2020ರ ಮಾರ್ಚ್ನಿಂದ ಸಲ್ಲಿಕೆಯಾಗಿದ್ದ ಸುಮಾರು 20 ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ, ಈ ವಿಚಾರಣೆ ನಡೆಸಿತು.

ಈ ವೇಳೆ, ನ್ಯಾಯಾಲಯದ ನಿರ್ದೇಶನವಿದ್ದರೂ, ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಸುವ ಗಣ್ಯರ ವಿರುದ್ಧ ಸರಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಅರ್ಜಿದಾರರೊಬ್ಬರ ಪರ ವಕೀಲರು ನ್ಯಾಯಪೀಠಕ್ಕೆ ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸರಕಾರ ಏನೂ ಮಾಡಿಲ್ಲ ಎನ್ನುವ ನಮ್ಮ ನ್ಯಾಯಾಲಯ ಒಪ್ಪುವುದಿಲ್ಲ. ಹೊಸ ವೈರಸ್‌ನ 2 ಪ್ರಕರಣಗಳು ಪತ್ತೆಯಾದ ಬಳಿಕ ಸರಕಾರ ಎಚ್ಚೆತ್ತುಕೊಂಡಿದೆ, ಸಭೆಗಳನ್ನು ಮಾಡಲಾಗುತ್ತಿದ್ದು ಹೊಸ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಹೀಗಿರುವಾಗ ಹೈಕೋರ್ಟ್ ಮಧ್ಯಪ್ರವೇಶಿಸುವ ಅವಶ್ಯಕತೆ ಕಂಡು ಬರುತ್ತಿಲ್ಲ. ಕೈಗೊಂಡಿರುವ ಕ್ರಮಗಳನ್ನು ಇನ್ನಷ್ಟು ಚುರುಕುಗೊಳಿಸಿ ಎಂದು ನಿರ್ದೇಶನ ನೀಡಬಹುದಷ್ಟೇ. ಏನಾದರೂ ಸಂದರ್ಭ ಅಥವಾ ಸಮಸ್ಯೆ ಎದುರಾದಲ್ಲಿ ನ್ಯಾಯಾಲಯದ ಬಾಗಿಲುಗಳು ಸದಾ ತೆರೆದಿರುತ್ತವೆ ಎಂದು ಹೇಳಿತು.

ವರದಿ ಸಲ್ಲಿಸಲು ಸೂಚನೆ: ಈ ವೇಳೆ ಬಿಬಿಎಂಪಿ ಪರ ವಕೀಲರು ವಾದ ಮಂಡಿಸಿ, ದುಬಾರಿ ಶುಲ್ಕ ಪಡೆದ ಆಸ್ಪತೆಗಳ ವಿರುದ್ಧ ದೂರು ನೀಡುವ ಬಗ್ಗೆ ಪಾಲಿಕೆ ವೆಬ್‌ಸೈಟ್‌ನಲ್ಲಿ ಸೂಚನೆ ಪ್ರಕಟಿಸಲಾಗಿತ್ತು. ಅದರಂತೆ ಒಟ್ಟು 13 ದೂರುಗಳು ಬಂದಿದ್ದವು. ಅದರಲ್ಲಿ 8 ದೂರುಗಳನ್ನು ಇತ್ಯರ್ಥಪಡಿಸಲಾಗಿದ್ದು, ಉಳಿದ ದೂರುಗಳು ಪರಿಶೀಲನೆಯಲ್ಲಿವೆ ಎಂದು ಮಾಹಿತಿ ನೀಡಿದರು. ದುಬಾರಿ ಶುಲ್ಕ ಪಡೆದ ಆಸ್ಪತ್ರೆಗಳ ವಿರುದ್ಧ ಕೈಗೊಂಡ ಕ್ರಮಗಳ ಅನುಪಾಲನಾ ವರದಿ ಸಲ್ಲಿಸುವಂತೆ ಪಾಲಿಕೆಗೆ ನಿರ್ದೇಶಿಸಿದ ಪೀಠ ವಿಚಾರಣೆ ಮುಂದೂಡಿತು. 

17 ಅರ್ಜಿಗಳ ಇತ್ಯರ್ಥ: ಕೋವಿಡ್ ಅರ್ಜಿಗಳಲ್ಲಿ ಹೈಕೋರ್ಟ್ ಗೆ ನೆರವು ನೀಡಲು ನಿಯೋಜಿಸಲಾಗಿದ್ದ ಅಮೈಕಸ್ ಕ್ಯೂರಿ ವಿಕ್ರಂ ಹುಯಿಲಗೋಳ ಅವರು ಎಲ್ಲ ಅರ್ಜಿಗಳಿಗೆ ಸಂಬಂಧಿಸಿದಂತೆ ಲಿಖಿತ ಸಾರಾಂಶವನ್ನು ನ್ಯಾಯಪೀಠಕ್ಕೆ ಸಲ್ಲಿಸಿ, ಕೊರೋನ 1 ಮತ್ತು 2ನೆ ಅಲೆ ವೇಳೆ ಉದ್ಭವಿಸಿದ್ದ ಸಮಸ್ಯೆಗಳಿಗೆ ಅರ್ಜಿಗಳನ್ನು ಸಲ್ಲಿಸಲಾಗಿತ್ತು. 

ಈಗ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. ಅರ್ಜಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ಕಾಲ-ಕಾಲಕ್ಕೆ ನೀಡಿರುವ ನಿರ್ದೇಶನಗಳನ್ನು ನೀಡಿತ್ತು. ಅದರಂತೆ, ಸರಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಹೀಗಾಗಿ, ಬಹುತೇಕ ಅರ್ಜಿಗಳ ವಿಚಾರಣೆ ಮುಂದುವರಿಸುವ ಅವಶ್ಯಕತೆ ಇಲ್ಲ. ಕೆಲವೊಂದು ಅರ್ಜಿಗಳನ್ನು ಮಾತ್ರ ಇನ್ನೂ ವಿಚಾರಣೆಗೆ ಬಾಕಿ ಉಳಿಸಿಕೊಳ್ಳಬಹುದು ಎಂದು ಅರ್ಜಿವಾರು ವಿವರಣೆ ನೀಡಿದರು. ಇದನ್ನು ದಾಖಳಿಸಿಕೊಂಡ ನ್ಯಾಯಪೀಠ, ಸದ್ಯ ಅವಶ್ಯಕತೆ ಇಲ್ಲದ 17 ಅರ್ಜಿಗಳನ್ನು ಇತ್ಯರ್ಥಪಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News