ಸಶಸ್ತ್ರ ಪಡೆಗಳ ವಿಶೇಷ ಅಧಿಕಾರಗಳ ಕಾಯ್ದೆ ರದ್ದತಿಗೆ ಕೇಂದ್ರಕ್ಕೆ ಪತ್ರ ಬರೆಯಲಿರುವ ನಾಗಾಲ್ಯಾಂಡ್‌

Update: 2021-12-07 16:41 GMT

ಕೊಹಿಮಾ,ಡಿ.7: ರಾಜ್ಯದಲ್ಲಿ ಸಶಸ್ತ್ರ ಪಡೆಗಳ (ವಿಶೇಷಾಧಿಕಾರ) ಕಾಯ್ದೆ ಅಥವಾ ಅಫ್‌ಸ್ಪಾವನ್ನು ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿ ಕೇಂದ್ರಕ್ಕೆ ಪತ್ರ ಬರೆಯಲು ನಾಗಾಲ್ಯಾಂಡ್ ಸರಕಾರವು ನಿರ್ಧರಿಸಿದೆ.
  
ಶನಿವಾರ ಮತ್ತು ರವಿವಾರ ಮೊನ್ ಜಿಲ್ಲೆಯಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಭದ್ರತಾ ಪಡೆಗಳಿಂದ 14 ನಾಗರಿಕರ ಹತ್ಯೆಯ ನಂತರದ ಸ್ಥಿತಿಯನ್ನು ಚರ್ಚಿಸಲು ನಡೆದಿದ್ದ ನಾಗಾಲ್ಯಾಂಡ್ ಸಂಪುಟದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಸೋಮವಾರ ನಾಗಾಲ್ಯಾಂಡ್ ಮುಖ್ಯಮಂತ್ರಿ ನಿಫಿಯು ರಿಯೊ ಮತ್ತು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ಅಫ್‌ಸ್ಪಾ (AFSPA) ರದ್ದತಿಗೆ ಕರೆ ನೀಡಿದ್ದರು. ರಿಯೊ ಮತ್ತು ಸಂಗ್ಮಾರ ಪಕ್ಷಗಳು ಬಿಜೆಪಿಯ ಮಿತ್ರರಾಗಿವೆ. ಪ್ರತಿಪಕ್ಷಗಳೂ ಅಫ್‌ಸ್ಪಾ ರದ್ದತಿಗಾಗಿ ಸಂಸತ್ತಿನಲ್ಲಿ ಆಗ್ರಹಿಸಿದ್ದವು.

ಮಂಗಳವಾರ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಗಾಲ್ಯಾಂಡ್‌ನ ಬುಡಕಟ್ಟು ವ್ಯವಹಾರಗಳ ಸಚಿವ ತೆಮ್ಜೆನ್ ಇಮ್ನಾ ಅಲಂಗ್ ಅವರು,ಅಫ್‌ಸ್ಪಾ ರಾಜ್ಯದ ವಿಷಯವಲ್ಲ. ಪರಿಸ್ಥಿತಿಯನ್ನು ಅವಲೋಕಿಸಿ ನಾಗಾಲ್ಯಾಂಡ್‌ನಿಂದ ಅಫ್‌ಸ್ಪಾ ಹಿಂದೆಗೆದುಕೊಳ್ಳುವಂತೆ ಕೇಂದ್ರವನ್ನು ಕೋರುವುದಷ್ಟೇ ರಾಜ್ಯ ಸರಕಾರದ ಕೆಲಸವಾಗಿದೆ. ಅಫ್‌ಸ್ಪಾ ರದ್ದುಗೊಳಿಸುವಂತೆ ಕೇಂದ್ರವನ್ನು ಕೋರುವ ನಿರ್ಧಾರವನ್ನು ಪಕ್ಷಭೇದಗಳಿಲ್ಲದೆ ಕೈಗೊಳ್ಳಲಾಗಿದೆ. ರಾಜ್ಯದ ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದು ಈಗ ಕೇಂದ್ರಕ್ಕೆ ಬಿಟ್ಟ ವಿಷಯವಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ನಡೆಯುತ್ತಿರುವ ಹಾರ್ನಬಿಲ್ ಉತ್ಸವವನ್ನು ರದ್ದುಗೊಳಿಸಲೂ ಸಂಪುಟ ಸಭೆಯು ನಿರ್ಧರಿಸಿದೆ. ಕೊನ್ಯಾ ಯೂನಿಯನ್‌ನ ಬೇಡಿಕೆಗಳನ್ನು ರಾಜ್ಯ ಸರಕಾರವು ಬೆಂಬಲಿಸುತ್ತದೆ ಎಂದು ರಾಜ್ಯದ ಇನ್ನೋರ್ವ ಸಚಿವ ನೀಬಾ ಕ್ರೋನು ತಿಳಿಸಿದರು.
ಹತ್ಯೆಗಳ ಕುರಿತು ತನಿಖೆಗಾಗಿ ಸ್ವತಂತ್ರ ವಿಚಾರಣಾ ಸಮಿತಿಯನ್ನು ರಚಿಸಬೇಕು. ರವಿವಾರ ರಚಿಸಲಾಗಿರುವ ವಿಶೇಷ ತನಿಖಾ ತಂಡದಲ್ಲಿ ಇಬ್ಬರು ನಾಗಾ ನಾಗರಿಕ ಸಮಾಜ ಸಂಘಟನೆಗಳಿಗೆ ಸೇರಿದವರಾಗಿರಬೇಕು ಎಂದು ಕೊನ್ಯಾಕ್ ನಾಗಾ ಬುಡಕಟ್ಟನ್ನು ಪ್ರತಿನಿಧಿಸುವ ಕೊನ್ಯಾ ಯೂನಿಯನ್ ಆಗ್ರಹಿಸಿದೆ. ಭದ್ರತಾ ಪಡೆಗಳಿಂದ ಕೊಲ್ಲಲ್ಪಟ್ಟವರಲ್ಲಿ ಹೆಚ್ಚಿನವರು ಕೊನ್ಯಾಕ್ ಸಮುದಾಯಕ್ಕೆ ಸೇರಿದವರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News