ಗುಂಪು ಥಳಿತಕ್ಕೊಳಗಾಗಿದ್ದ ಬಳೆ ಮಾರಾಟಗಾರನಿಗೆ 107 ದಿನಗಳ ಜೈಲುವಾಸದ ನಂತರ ದಕ್ಕಿದ ಜಾಮೀನು

Update: 2021-12-07 11:21 GMT
Photo: Indianexpress

ಇಂದೋರ್ : ಮಧ್ಯ ಪ್ರದೇಶದ ಇಂದೋರ್ ನಗರದಲ್ಲಿ ಮನೆ ಮನೆಗೆ ಬಳೆ ಮಾರಾಟ ಮಾಡುತ್ತಿದ್ದ ವೇಳೆ ತನ್ನ ಗುರುತನ್ನು ಮರೆಮಾಚಿದ್ದಾನೆಂಬ ಆರೋಪದ ಮೇಲೆ 

ಹಿಂದುತ್ವ ಗುಂಪುಗಳಿಂದ ಹಲ್ಲೆಗೊಳಗಾಗಿ ನಂತರ ಬಂಧಿತನಾಗಿದ್ದ ತಸ್ಲೀಂ ಆಲಿಗೆ ಮಧ್ಯ ಪ್ರದೇಶ ಹೈಕೋರ್ಟ್ ಮಂಗಳವಾರ ಜಾಮೀನು ಮಂಜೂರುಗೊಳಿಸಿದೆ. 

ಆಗಸ್ಟ್ 24ರಂದು ಬಂಧಿತನಾಗಿದ್ದ ಆತ ಕಳೆದ 107 ದಿನಗಳ ಕಾಲ ಜೈಲಿನಲ್ಲಿದ್ದ. ಆತನ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ಫೋರ್ಜರಿ ಆರೋಪ ಹೊರಿಸಲಾಗಿದೆ. ಇಂದೋರ್‍ನ ಗೋವಿಂದ ನಗರದಲ್ಲಿ ಬಳೆ ಮಾರಾಟ ಮಾಡುವ ನೆಪದಲ್ಲಿ ಬಾಲಕಿಯೊಬ್ಬಳಿಗೆ ಕಿರುಕುಳ ನೀಡಿದ್ದಾನೆಂದು ಆತನ ವಿರುದ್ಧ ಆರೋಪ ಹೊರಿಸಲಾಗಿತ್ತು.

ಬಳೆ ಮಾರಾಟ ನೆಪದಲ್ಲಿ ಈತ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿದ್ದ ಕೆಲವರು ಆತನಿಗೆ ಥಳಿಸಿ ಮತ್ತೆ ಹಿಂದೂಗಳಿರುವ ಪ್ರದೇಶಕ್ಕೆ ಕಾಲಿಡಬಾರದು ಎಂದು ಎಚ್ಚರಿಸುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈ ಹಿಂದೆ ವೈರಲ್ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು. ಇದಾದ ಮರುದಿನವೇ 25 ವರ್ಷದ ಆಲಿಗೆ ಥಳಿಸಿದವರ ಪೈಕಿ ಒಬ್ಬಾತನ ಪುತ್ರಿ ಆತನ ವಿರುದ್ಧ ಕಿರುಕುಳ ಆರೋಪ ಹೊರಿಸಿದ್ದಳು.

ಆಲಿಗೆ ಥಳಿಸಿದ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದ ರಾಕೇಶ್ ಪವಾರ್, ವಿವೇಕ್ ವ್ಯಾಸ್, ರಾಜಕುಮಾರ್ ಭಟ್ನಾಗರ್ ಮತ್ತು ವಿಕಾಸ್ ಮಾಲವಿಯ ಈಗಾಗಲೇ ಜಾಮೀನಿನ ಮೇಲೆ ಹೊರಬಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News