ಇತ್ತೀಚಿನ ದಿನಗಳಲ್ಲಿ ದೇಶದ ಏಕತೆಗೆ ವಿಷ ಬೆರೆಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ: ಚಿಂತಕ ಪ್ರೊ.ರಾಚಪ್ಪ

Update: 2021-12-07 11:49 GMT

ಚಿಕ್ಕಮಗಳೂರು, ಡಿ.7: ನೂರಾರು ಭಾಷೆ, ಹಲವು ಸಂಸ್ಕೃತಿ, ವಿವಿಧ ಧರ್ಮದರು ಸೇರಿರುವ, ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ ಭಾರತವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಏಕತೆಗೆ ವಿಷ ಬೆರೆಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ವಿವಿಧತೆಯಲ್ಲಿ ಏಕತೆ ಆಶಯವನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಎಚ್ಚರದಿಂದಿರುವುದು ಅತ್ಯಗತ್ಯ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಚಪ್ಪ ಎಚ್ಚರಿಸಿದ್ದಾರೆ.

ನಗರದ ಅಜಾದ್ ಪಾರ್ಕ್ ವೃತ್ತದಲ್ಲಿ ಸೋಮವಾರ ಡಾ.ಬಿ.ಆರ್.ಅಂಬೇಡ್ಕರ್ ಮಹಾ ಪರಿನಿಬ್ಬಾಣ ಆಚರಣಾ ಸಮಿತಿ ಹಾಗೂ ವಿವಿಧ ದಲಿತ ಸಂಘಟನೆಗಳ ಒಕ್ಕೂಟ ಆಯೋಜಿಸಿದ್ದ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಪರಿನಿಬ್ಬಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತ ಒಂದು ವಿಶಿಷ್ಟವಾದ ದೇಶ. ಈ ಕಾರಣಕ್ಕೆ ಪ್ರಪಂಚದಲ್ಲಿ ಭಾರತಕ್ಕೆ ವಿಶಿಷ್ಟ ಸ್ಥಾನಮಾನ ಇದೆ. ಹರಪ್ಪ ಮಹೆಂಜಾದಾರೋ ಸಂಸ್ಕೃತಿ ಕೊಟ್ಟ ಇತಿಹಾಸ ನಮ್ಮದು. ಸಾಮಾಜಿಕ, ಆರ್ಥಿಕ, ಶಿಕ್ಷಣ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಭಾರತ ನೂರಾರು ವರ್ಷಗಳ ಹಿಂದೆಯೇ ಸಾಧನೆ ಮಾಡಿದೆ. ಆದರೆ ಆರ್ಯರ ಸಂಸ್ಕೃತಿಯ ದಾಳಿಯಿಂದಾಗಿ ಭಾರತ ದೇಶ ನಿಧಾನವಾಗಿ ಅವನತಿಯತ್ತ ಸಾಗುತ್ತಿದೆ. ಆರ್ಯರು ಬಂದ ನಂತರ ಈ ದೇಶದ ವಿಶಿಷ್ಟ, ವೈವಿಧ್ಯಮಯ ಸಂಸ್ಕೃತಿಗೆ ವಿಷ ಬಿತ್ತುವ ಕೆಲಸ ನಡೆಯುತ್ತಿದೆ ಎಂದರು.

ಆರ್ಯರ ಇತಿಹಾಸಕ್ಕೆ ಮೂರು ಸಾವಿರ ವರ್ಷದ ಇತಿಹಾಸ ಇದ್ದರೆ, ಈ ದೇಶದ ಮೂಲ ನಿವಾಸಿಗಳ ಇತಿಹಾಸಕ್ಕೆ ಐದು ಸಾವಿರ ವರ್ಷಗಳ ಇತಿಹಾಸವಿದೆ. ಆರ್ಯರು ದೇಶದಲ್ಲಿ ಎಂದು ವರ್ಣ ವ್ಯವಸ್ಥೆಯನ್ನು ಪ್ರಾರಂಭ ಮಾಡಿದರೋ ಅಲ್ಲಿಂದೀಚೆಗೆ ಈ ದೇಶದಲ್ಲಿ ಮಹಿಳೆಯರೂ ಸೇರಿದಂತೆ ಇಲ್ಲಿನ ಮೂಲನಿವಾಸಿಗಳ ನೆಮ್ಮದಿ ಹಾಳಾಗಿದೆ. ಶೇ.62 ರಷ್ಟಿರುವ ಹಿಂದುಳಿದ ಜಾತಿಯವರು ಸುಖಪಡಲಿಲ್ಲ ಹಾಗೂ ಶೇ.23ರಷ್ಟಿರುವ ಪರಿಶಿಷ್ಟ ಸಮುದಾಯದವರೂ ಸುಖ ಪಡಲಿಲ್ಲ ಎಂದು ತಿಳಿಸಿದರು.

ಮಹಿಳೆಯರ, ಹಿಂದುಳಿದ, ಪರಿಶಿಷ್ಟ ವರ್ಗದ ಸ್ಥಾನಮಾನಗಳನ್ನು ಸರಿಪಡಿಸಲು ಬುದ್ಧ, ಮಾಹಾವೀರ, ಬಸವಣ್ಣ, ಕಬೀರ, ಪುರಂದರದಾಸರು, ಕುವೆಂಪು, ಪೆರಿಯಾರ್, ನಾರಯಣ ಗುರು ಅವರಂತಹ ಮಹಾನ್ ನಾಯಕರು ಸಮಾಜ ಸುಧಾರಣೆಗೆ ಸಾಕಷ್ಟು ಶ್ರಮಿಸಿದ್ದಾರೆ. ಅಂತಿಮವಾಗಿ ಎಲ್ಲಾ ಸಮಾಜ ಸುಧಾರಕರ ಸಾರವನ್ನು ಸಂವಿಧಾನದ ಮೂಲಕ ಜಾರಿಗೆ ತಂದವರು ಅಂಬೇಡ್ಕರ್. ಹಾಗಾಗಿ ಅವರು ಭಾರತ ದೇಶದ ಜನರ ಪಾಲಿಗೆ ನಿಜವಾಗಿಯೂ ದೇವರು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ನೌಕರ ನಾಗೇಶ್ ಸಂವಿಧಾನದ ಪ್ರಸ್ತಾವನೆ ಓದುವ ಮೂಲಕ ಪ್ರತಿಜ್ಞಾವಿಧಿ ಭೋದಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಿ.ಬಿ ನಿಂಗಯ್ಯ, ಕಾಂಗ್ರೆಸ್‌ನ ನಾಗರತ್ನಾ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ವಿವಿಧ ದಲಿತ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

ವಕೀಲ ಹೊನ್ನೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಜಗದೀಶ್ ಸ್ವಾಗತಿಸಿದರು. ಕಾರ್ಯಕ್ರಮಕ್ಕೂ ಮುನ್ನ ಸುಮಾರು 2000 ಜನರು ನಗರದ ತಾಲೂಕು ಕಚೇರಿಯಿಂದ ಅಜಾದ್ ಪಾರ್ಕ್ವೃತ್ತದವರಗೆ ಮುಂಬತ್ತಿ ಹಿಡಿದು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಹಾಸ್ಟೆಲ್ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಜನರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News