ಸ್ವಾಧಾರ ಕೇಂದ್ರ ನಿರ್ವಹಣೆಗೆ ಅನುದಾನ ಬಿಡುಗಡೆ ಮಾಡದ ಕೇಂದ್ರ ಸರಕಾರ: ಮೋಹಿನಿ ಸಿದ್ದೇಗೌಡ

Update: 2021-12-07 13:25 GMT

ಚಿಕ್ಕಮಗಳೂರು: ಕಸ್ತೂರಿ ಬಾ ಸದನ ಸಂಸ್ಥೆ ನಡೆಸುತ್ತಿರುವ ನಗರದ ಸ್ವಾಧಾರ ಕೇಂದ್ರದ ನಿರ್ವಹಣೆಗೆ ಸರಕಾರ ಸಕಾಲದಲ್ಲಿ ಅನುದಾನ ಬಿಡುಗಡೆ ಮಾಡದ ಪರಿಣಾಮ ಕೇಂದ್ರದ ನಿರ್ವಹಣೆ, ಸಿಬ್ಬಂದಿ ವೇತನ ಪಾವತಿ ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ದಾನಿಗಳಿಂದ ಆರ್ಥಿಕ ನೆರವು ಕೋರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಸ್ತೂರಿ ಬಾ ಸದನದ ಗೌರವಾಧ್ಯಕ್ಷೆ ಮೋಹಿನಿ ಸಿದ್ದೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಧಾರ ಕೇಂದ್ರ ಕೇಂದ್ರ ಸರಕಾರದ ಯೋಜನೆಯಾಗಿದ್ದು, ನೊಂದ ಮಹಿಳೆಯರು, ದೌರ್ಜನ್ಯಕ್ಕೊಳಗಾದ ಯುವತಿ, ಬಾಲಕಿಯರಿಗೆ ಆಶ್ರಯ ನೀಡುವ ಸಂಸ್ಥೆಯಾಗಿದ್ದು, ಈ ಸಂಸ್ಥೆಯ ನಿರ್ವಹಣೆಗೆ ಕೇಂದ್ರ ಸರಕಾರದಿಂದ ಇದುವರೆಗೆ 22 ಲಕ್ಷ ರೂ. ಅನುದಾನ ಬಿಡುಗಡೆಯಾಗಬೇಕಿದ್ದು, ಇದುವರೆಗೂ ಅನುದಾನ ಬಿಡುಗಡೆಯಾಗಿಲ್ಲ. ಅನುದಾನವಿಲ್ಲದೇ ಸ್ವಾಧಾರ ಕೇಂದ್ರದ ನಿರ್ವಹಣೆ, ಸಿಬ್ಬಂದಿ ವೇತನ ಪಾವತಿ ಮಾಡಲು ಸಂಕಷ್ಟ ಎದುರಾಗಿದೆ ಎಂದು ಅಳಲು ತೋಡಿಕೊಂಡರು.

ಅನುದಾನ ಬಿಡುಗಡೆಗೆ ಕಳೆದೊಂದು ವರ್ಷದಿಂದ ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಿಸಿದ ಇಲಾಖಾಧಿಕಾರಿಗಳ ಮೂಲಕ ಕೇಂದ್ರ ಸರಕಾರಕ್ಕೆ ಅನೇಕ ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಕ್ಷೇತ್ರದ ಸಂಸದೆ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೂ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ರಾಜ್ಯದ ಯಾವ ಸ್ವಾಧಾರ ಕೇಂದ್ರಕ್ಕೂ ಅನುದಾನ ಬಿಡುಗಡೆಯಾಗಿಲ್ಲ. ಅನುದಾನದ ಕೊರತೆಯಿಂದಾಗಿ ಸ್ವಾಧಾರ ಕೇಂದ್ರದಲ್ಲಿರುವ ಸಂತ್ರಸ್ಥರ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ, ಕೇಂದ್ರದ ಸಿಬ್ಬಂದಿಗೆ ಕಳೆದ 8 ತಿಂಗಳುಗಳಿಂದ ವೇತನ ನೀಡಲು ಹರಸಾಹಸ ಪಡುವಂತಾಗಿದೆ ಎಂದ ಅವರು, ಅನುದಾನದ ಬಿಡುಗಡೆ ವಿಳಂಬದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ದಾನಿಗಳಿಂದ ಆರ್ಥಿಕ ನೆರವು ಯಾಚಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಇದೇ ವೇಳೆ ಬೇಸರ ವ್ಯಕ್ತಪಡಿಸಿದರು.

ಸ್ವಾಧಾರ ಕೇಂದ್ರಕ್ಕೆ ಇದುವರೆಗೆ 18 ಕೌಟುಂಬಿಕ ಸಮಸ್ಯೆಗಳ ಪ್ರಕರಣಗಳು, 3 ಪ್ರೇಮ ಪ್ರಕರಣ, 5 ನಾಪತ್ತೆ ಪ್ರಕರಣ, 4 ನಿರಾಶ್ರಿತರ ಪ್ರಕರಣ, 4 ಬಾಲ್ಯ ವಿವಾಹ, ಮಕ್ಕಳ ಪಾಲನೆ ಪೋಷಣೆಗೆ ಸಂಬಂಧಿಸಿದ 19 ಪ್ರಕರಣ, 3 ಪೊಕ್ಸೊ, 2 ಲೈಂಗಿನ ದೌರ್ಜನ್ಯ, 1 ವಿವಾಹ ವಿಚ್ಚೇದನ ಪ್ರಕರಣ ಸೇರಿದಂತೆ 59 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 38 ಪ್ರಕರಣಗಳನ್ನು ನೋಂದಣಿಯಾಗಿವೆ. 28 ಪ್ರಕರಣಗಳು ಬಾಕಿ ಇದ್ದು, ಸದ್ಯ ಸ್ವಾಧಾರ ಕೇಂದ್ರದಲ್ಲಿ 14 ಮಹಿಳೆಯರು, 14 ಮಕ್ಕಳು ಆಶ್ರಯ ಪಡೆದಿದ್ದಾರೆ ಎಂದರು.

ಕಸ್ತೂರಿ ಬಾ ಸದನದಿಂದಲೇ ನಿರ್ವಹಣೆ ಮಾಡಲಾಗುತ್ತಿರುವ ಕೌಟುಂಬಿಕ ಸಲಹಾ ಕೇಂದ್ರದಲ್ಲಿ ಈ ಬಾರಿ  71 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 38 ಪ್ರಕರಣಗಳು ಇತ್ಯರ್ಥಗೊಂಡಿವೆ. 33 ಪ್ರಕರಣಗಳು ಬಾಕಿ ಇವೆ ಎಂದ ಅವರು, ಮೊಬೈಲ್‌ನಿಂದಾಗಿ ಇತ್ತೀಚಿಗೆ ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಪೋಷಕರ ತಮ್ಮ ಮಕ್ಕಳ ಮೇಲೆ ಸರಿಯಾದ ನಿಗಾ ವಹಿಸದಿರುವುದರಿಂದ ಹೆಣ್ಣು ಮಕ್ಕಳು ಅಪ್ರಾಪ್ತ ವಯಸ್ಸಿನಲ್ಲೇ ಪ್ರೇಮ ಪ್ರಕರಣಗಳಿಗೆ ಸಿಲುಕುತ್ತಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಸ್ತೂರಿ ಬಾ ಸದನದ ಅಧ್ಯಕ್ಷೆ ಯುಮುನಾ ಶೆಟ್ಟಿ, ಕಾರ್ಯದರ್ಶಿ ಶುಭಾ, ಖಜಾಂಚಿ ಪಾರ್ವತಿ, ಸದಸ್ಯರಾದ ಅರ್ಚನಾ, ಟೀನಾ, ಗೀತಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News