ಬಿಜೆಪಿಗೆ ಯಾವ ಪಕ್ಷದ ಜೊತೆಗೂ ಮೈತ್ರಿ ಅನಿವಾರ್ಯ ಅಲ್ಲ: ಸಂಸದ ವಿ. ಶ್ರೀನಿವಾಸ ಪ್ರಸಾದ್

Update: 2021-12-07 14:13 GMT

ಮೈಸೂರು,ಡಿ.7: ಬಿಜೆಪಿಗೆ ಯಾವ ಪಕ್ಷದ ಜೊತೆಗೂ ಮೈತ್ರಿ ಅನಿವಾರ್ಯ ಅಲ್ಲ, ಹಾಗಾಗಿ ಜೆಡಿಎಸ್ ಜೊತೆಗಿನ ಮೈತ್ರಿಯ ಅಗತ್ಯ ಇಲ್ಲ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ತಿಳಿಸಿದರು.

ವಿಧಾನಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಮೈಸೂರು- ಚಾಮರಾಜನಗರದ ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ಪರವಾಗಿ ಮತಯಾಚಿಸಲು ಅವರ ಜಯಲಕ್ಷ್ಮಿಪಯರಂ ನಿವಾಸದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಗೆ ಯಾರೊಂದಿಗೂ ಮೈತ್ರಿ ಅಗತ್ಯವಿಲ್ಲ, ಅತೀ ಹೆಚ್ಚು ಸ್ಥಾನಗಳನ್ನು ಗಳಿಸಿ ಕೇಂದ್ರದಲ್ಲಿ ಅಧಿಕಾರ ಹಿಡಿದಿದೆ. ಬಿಜೆಪಿ ಸಂಘಟನಾತ್ಮಕವಾಗಿ ಬಹಳ ಮುಂದಿದ್ದು, ಬಿಜೆಪಿ ಬೆಂಬಲಿತ ಅತೀ ಹೆಚ್ಚು ಗ್ರಾ.ಪಂ.ಸದಸ್ಯರು ಆಯ್ಕೆಯಾಗಿದ್ದಾರೆ. ಹಾಗಾಗಿ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಲಿದ್ದಾರೆ. ಹಾಗಾಗಿ ಯಾರೊಂದಿಗೂ ಮೈತ್ರಿ ಅನಿವಾರ್ಯವಲ್ಲ ಎಂದು ಹೇಳಿದರು.

ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಜೆಡಿಎಸ್ ಪಕ್ಷದ ಬೆಂಬಲ ಅಗತ್ಯವಿಲ್ಲ, ಕೇವಲ ನಾಲ್ಕೈದು ಕ್ಷೇತ್ರಗಳಲ್ಲಿ ಜೆಡಿಎಸ್ ಬೆಂಬಲ ನೀಡಿದರೆ ಬಿಜೆಪಿಗೆ ಅನುಕೂಲವಾಗಲಿದಿಯಷ್ಟೆ, ಹಾಗಾಗಿ ಹೈಕಮಾಂಡ್ ಸೂಚನೆ ಮೇರೆಗೆ ರಾಜ್ಯಮಟ್ಟದ ನಾಯಕರುಗಳು ತೀರ್ಮಾನ ಮಾಡಲಿದ್ದಾರೆ ಎಂದು ಹೇಳಿದರು.

ಆರೆಸ್ಸೆಸ್ ಬಗ್ಗೆ ಪ್ರಬಲವಾಗಿ ಟೀಕೆ ಮಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಬಿಜೆಪಿ ಮೈತ್ರಿ ಎಷ್ಟು ಸರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದ ವಿ.ಶ್ರೀನಿವಾಸ ಪ್ರಸಾದ್, ಆರೆಸ್ಸೆಸ್ ರಾಜಕೀಯ ಪಕ್ಷವಲ್ಲ, ಹಾಗಾಗಿ ಟೀಕೆ ಮಾಡುವುದು ಸರಿಯಲ್ಲ, ಅವರು ಟೀಕೆ ಮಾಡುವುದಿದ್ದರೆ ಬಿಜೆಪಿ ಪಕ್ಷವನ್ನು ಟೀಕೆ ಮಾಡಲಿ, ಆರೆಸ್ಸೆಸ್ ಸಾಂಸ್ಕೃತಿಕ ಸಂಘಟನೆ ಹಾಗಾಗಿ ರಾಜಕೀಯ ಟೀಕೆ ಸಲ್ಲದು. ಇಂತಹ ಸಂದರ್ಭದಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಅಗತ್ಯವಿಲ್ಲ ಎಂದು ಹೇಳಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಶಾಸಕ ಜಿ.ಟಿ.ದೇವೇಗೌಡ ಒಂದಾಗುವುದು ನಗೆಪಾಟೀಲು. ಅವರದು ಅಪಹಾಸ್ಯದ ಮೈತ್ರಿ ಎಂದು ಅವರು ಹೇಳಿದರು.

ವೀರಾವೇಶದಿಂದ ಮಾತನಾಡುತ್ತಿದ್ದ ಸಿದ್ದರಾಮಯ್ಯ ರಾತ್ರೋರಾತ್ರಿ ಕದ್ದು ಓಡಿ ಹೋಗಿ ಬಾದಾಮಿಯಲ್ಲಿ ನಿಂತುಕೊಂಡು ಗೆದ್ದು ಹಾಗೋ ಹೀಗೋ ವಿರೋಧ ಪಕ್ಷದ ಸ್ಥಾನವನ್ನು ಗಿಟ್ಟಿಸಿಕೊಂಡರು. ಸಿದ್ದರಾಮಯ್ಯ ಬಾದಾಮಿಯಲ್ಲಿ ನಿಂತಿದ್ದೆ ಅವರ ಅಸಹಾಯಕತೆ ತೋರಿಸುತ್ತದೆ. ಒಂದು ಕ್ಷೇತ್ರದಲ್ಲಿ ಸೋತ ತಕ್ಷಣ ಪಲಾಯನ ಮಾಡಿ ಮಾತನಾಡುತ್ತಿದ್ದಾರೆ. ಇದು ಮೈಸೂರಿಗರನ್ನು ತಲೆತಗ್ಗಿಸುವ ವಿಚಾರ ಎಂದು ಕಿಡಿಕಾರಿದರು.

ಪತ್ರಿಕಾಗೋಷ್ಠಿಯಲ್ಲಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಅಭ್ಯರ್ಥಿ ರಘು ಕೌಟಿಲ್ಯ, ಶಾಸಕ ನಿರಂಜನ್ ಕುಮಾರ್, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಬಿಜೆಪಿ ಮುಖಂಡರುಗಳಾದ  ಮದೇವನೂರು ಪ್ರತಾಪ್, ಸಿದ್ದರಾಜು, ದೀರಜ್ ಪ್ರಸಾದ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News