ಪರಿಷತ್‌ನ ಕನಿಷ್ಠ 15 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು: ವಿಪಕ್ಷ ನಾಯಕ ಸಿದ್ದರಾಮಯ್ಯ

Update: 2021-12-07 14:25 GMT

ಮಂಡ್ಯ, ಡಿ.7: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲ 20 ಸ್ಥಾನಗಳಿಗೂ ಸ್ಪರ್ಧಿಸಿದ್ದು, ಕನಿಷ್ಠ 15 ಸ್ಥಾನಗಳನ್ನಾದರೂ ಗೆಲ್ಲುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿಗೌಡ ಪರವಾಗಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಂಡ್ಯದಲ್ಲಿ ದಿನೇಶ್ ಗೂಳಿಗೌಡರು ಗೆದ್ದೇಗೆಲ್ಲುತ್ತಾರೆ. ಚುನಾಯಿತು ಪ್ರತಿನಿಧಿಗಳು ಗೂಳಿಗೌಡರನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷ ಯಾವಾಗಲೂ ಸಂವಿಧಾನದ ಮೇಲೆ ನಂಬಿಕೆ ಇಟ್ಟಿದೆ. ಕೋಮುವಾದಿಗಳ ಜೊತೆ ಯಾವುದೇ ಕಾರಣಕ್ಕೂ ಕೂಡ ಕೈ ಜೊಡಿಸುವುದಿಲ್ಲ. ಜೆಡಿಎಸ್‌ನವರು 2005ರಿಂದಲೂ ಬಿಜೆಪಿ ಜೊತೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ಬಂದಿದ್ದಾರೆ. ಈಗ ಮತ್ತೆ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಜಾತ್ಯತೀತ ತತ್ವದ ಮೇಲೆ ನಂಬಿಕೆ ಇಟ್ಟುಕೊಂಡಿರುವ ಎಲ್ಲಾ ಮತದಾರರು ಕೂಡ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ತಿರ್ಮಾನ ಮಾಡಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಬಾರಿ ತಾಲೂಕು ಹಾಗೂ ಜಿಲ್ಲಾಪಂಚಾಯತ್ ಇಲ್ಲದೆ ಚುನಾವಣೆ ನಡೆಯುತ್ತಿದೆ. ಕಾರಣ ಸೋಲುವ ಭಯದಿಂದ ಬಿಜೆಪಿ ಅವರು ಮುಂದೂಡಿದ್ದಾರೆ. ರಾಜ್ಯದಲ್ಲಿ ಬಿಜೆಪಿಗೆ ವಿರುದ್ಧವಾಗಿ ಗಾಳಿ ಬೀಸಲು ಪ್ರಾರಂಭವಾಗಿದೆ. ಇದಕ್ಕೆ ಕಾರಣ ಬಿಜೆಪಿ ಆಡಳಿತದಿಂದ ಚುನಾಯಿತ ಪ್ರತಿನಿಧಿಗಳು ಹಾಗೂ ಸಾಮಾನ್ಯ ಮತದಾರರು ಬೇಸತ್ತಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲೂ ನಾವೇ ಗೆಲ್ಲುತ್ತೇವೆ ಎಂದು ಅವರು ಹೇಳಿದರು.

ಬಿಜೆಪಿ ಭ್ರಷ್ಟಾಚಾರ, ದುರಾಡಳಿತದಿಂದ, ಜನವಿರೋಧಿ, ರೈತ ವಿರೋಧಿ ನೀತಿ, ಅಭಿವೃದ್ಧಿ ಶೂನ್ಯದಿಂದ ಜನರು ಬೇಸತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದು ಎರಡು ವರ್ಷ ಮೀರಿದೆ. ನರೇಂದ್ರ ಮೋದಿ ಬಂದು 8 ವರ್ಷ ಆಗಿದೆ. ಪಂಚಾಯತ್ ರಾಜ್ ವ್ಯವಸ್ಥೆ ಹಾಗೂ ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ಬಿಜೆಪಿ ಹಾಗೂ ಜೆಡಿಎಸ್ ಕೊಡುಗೆ ಶೂನ್ಯ ಎಂದು ಸಿದ್ದರಾಮಯ್ಯ ಆಪಾದಿಸಿದರು.

ಪಂಚಾಯತ್ ವ್ಯವಸ್ಥೆಗೆ ಕಾಂಗ್ರೆಸ್ ಪಕ್ಷ ಎರಡು ಬಾರಿ ಶಕ್ತಿ ಕೊಡುವ ಕೆಲಸ ಮಾಡಿದೆ. ರಾಜೀವ್ ಗಾಂಧಿ ಅವರು ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಂವಿಧಾನಕ್ಕೆ 73 ಮತ್ತು 74ನೇ ತಿದ್ದುಪಡಿಗಳನ್ನು ತಂದು ಹಿಂದುಳಿದ ವರ್ಗಗಳಿಗೆ, ಅಲ್ಪಸಂಖ್ಯಾತರಿಗೆ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನೀಡಿದರು ಎಂದು ಅವರು ವಿವರಿಸಿದರು.

ಅಧಿಕಾರ ವಿಕೇಂದ್ರೀಕರಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ನಂಬಿಕೆ ಹಾಗೂ ಬದ್ಧತೆ ಇದೆ. ಅಧಿಕಾರ 4 ವರ್ಗಗಳಲ್ಲಿ ಹಂಚಿಕೆಯಾಗಬೇಕು. ಇದರಿಂದ ಎಲ್ಲರೂ ಪಾಲ್ಗೊಳ್ಳಲು ಅವಕಾಶ ಸಿಗುತ್ತದೆ. ಇದನ್ನು ಪ್ರಜಾತಂತ್ರದ ವಿಕೇಂದ್ರೀಕರಣ ಎಂದು ಕರೆಯಲಾಗುತ್ತದೆ. ಈ ಅಧಿಕಾರ ವಿಕೇಂದ್ರೀಕರಣಕ್ಕೆ ಬೇರೆ ಪಕ್ಷದವರ ಕೊಡುಗೆ ಏನು ಇಲ್ಲ ಎಂದರು.

ಕಾಂಗ್ರೆಸ್ ಸರಕಾರ ನರೇಗಾದಂತಹ ಯೋಜನೆ ರೂಪಿಸದಿದ್ದರೆ ಹಾಹಾಕಾರ ಉಂಟಾಗುತ್ತಿತ್ತು. ಮೊದಲ ಲಾಕ್ಡೌನ್ ಸಂದರ್ಭದಲ್ಲಿ ಜನರಿಗೆ ಅನುಕೂಲವಾಗಿದ್ದೆ ಈ ನರೇಗದಿಂದ. ಈ ನರೇಗದಿಂದ ಸುಮಾರು 4 ರಿಂದ 5 ಕೋಟಿ ಹಣ ಬಿಡುಯಾಗುತ್ತದೆ ಎಂದು ಅವರು ಹೇಳಿದರು.

ಈ ಬಾರಿ ಹೆಚ್ಚು ಮಳೆಯಿಂದ ಬೆಳೆ ನಾಶವಾಗಿದೆ. ಮನೆಗಳು ನೆಲಸಮವಾಗಿದೆ. ಕೋವಿಡ್ ಕಾಲದಲ್ಲಿ ದೇಶದಲ್ಲಿ 50 ಲಕ್ಷಕ್ಕೂ ಹೆಚ್ಚು ಜನ ನಿಧನರಾದರು. ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ 36 ಜನರು ಮೃತಪಟ್ಟರು. ಆದರೆ, ಆರೋಗ್ಯ ಸಚಿವ ಡಾ.ಸುಧಾಕರ್ ಇಬ್ಬರು ಮಾತ್ರ ಸತ್ತಿದ್ದಾರೆಂದು ಸುಳ್ಳು ಹೇಳಿದರು ಎಂದು ಅವರು ವಾಗ್ದಾಳಿ ನಡೆಸಿದರು.

ಇಷ್ಟೆಲ್ಲಾ ಅನಾಹುತಗಳಾಗಿದ್ದರೂ ಪರಿಹಾರ ನೀಡಿಯೇ ಇಲ್ಲ. ಅಸೆಂಬ್ಲಿಯಲ್ಲಿ ಸಚಿವರನ್ನು ಕೇಳಿದರೆ ಹಣ ಇಲ್ಲ ಎಂದು ಸಬೂಬು ಹೇಳುತ್ತಾರೆ. ಗುತ್ತಿಗೆದಾರರು ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಈ ಸರಕಾರದಲ್ಲಿ ಶೇ.40  ಕಮೀಷನ್ ಎಂದಿದ್ದಾರೆ. ಇದರಿಂದ ಗುತ್ತಿಗೆದಾರರಿಗೆ ಎಷ್ಟೆಲ್ಲಾ ತೊಂದರೆಯಾಗಿದೆ ಎಂಬುದು ಮೋದಿಗೆ ಮನವರಿಕೆಯಾಗಿಲ್ಲ. ಅದಕ್ಕಾಗಿ ಅವರು ಯಾವ ಪ್ರತಿಕ್ರಿಯೆ ನೀಡಿಲ್ಲ ಹಾಗೂ ತನಿಖೆಗೂ ಆದೇಶಿಸಿಲ್ಲ ಎಂದು ಅವರು ಟೀಕಿಸಿದರು.

ಕಾಂಗ್ರೆಸ್ ಪಕ್ಷ ತಂದಿರುವ ಅನೇಕ ಯೋಜನೆಗಳನ್ನು ಬಿಜೆಪಿ ನಿಲ್ಲಿಸುತ್ತಾ ಬಂದಿದೆ. ಅನ್ನಭಾಗ್ಯ ಯೋಜನೆಯಡಿ ಕೊಡುತ್ತಿದ್ದ 7 ಕೆ.ಜಿ ಅಕ್ಕಿಯನ್ನು 5 ಕೆ.ಜಿಗೆ ಇಳಿಸಿದ್ದಾರೆ. ಪೆಟ್ರೋಲ್, ಡಿಸೆಲ್ ಬೆಲೆ ಏರಿಸಿ ಕಾಂಗ್ರೆಸ್ ಪಕ್ಷದ ಮೇಲೆ ಅಪವಾದ ಹೊರಿಸುತ್ತಿದ್ದಾರೆ. ಸರಕಾರದಲ್ಲಿ ಹಣ ಇದ್ದರೂ ಕಾಂಗ್ರೆಸ್ ಪೆಟ್ರೋಲ್, ಡೀಸೆಲ್ ಮೇಲೆ ಸಾಲ ಮಾಡಿರುವ ಕಾರಣ ಬೆಲೆ ಹೆಚ್ಚಳ ಮಾಡಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಅವರು ತರಾಟೆಗೆ ತೆಗೆದುಕೊಂಡರು.

ಮಾಜಿ ಸಚಿವ ಕೆಪಿಸಿಸಿ ವಕ್ತಾರ ಎನ್.ಚಲುವರಾಯಸ್ವಾಮಿ, ಮಾಜಿ ಸಚಿವರಾದ ಪಿ.ಎಂ.ನರೇಂದ್ರಸ್ವಾಮಿ, ಎಂ.ಎಸ್.ಆತ್ಮಾನಂದ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ರಮೇಶ್ ಬಾಬು ಬಂಡಿಸಿದ್ದೆಗೌಡ, ಬಿ.ಪ್ರಕಾಶ್, ಮಲ್ಲಾಜಮ್ಮ, ಕೆ.ಬಿ.ರಾಮಕೃಷ್ಣ, ಅಭ್ಯರ್ಥಿ ದಿನೇಶ್ ಗೂಳಿಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ಸೋಸಿಯಲ್ ಮೀಡಿಯಾ ಅಧ್ಯಕ್ಷ ಅನಿಲ್‌ಕುಮಾರ್, ಎಂ.ಎಸ್.ಚಿದಂಬರ್, ಸಿ.ಎಂ.ದ್ಯಾವಪ್ಪ, ಅನಿಲ್‌ಕುಮಾರ್, ಸಿ.ಎಂ.ದ್ಯಾವಪ್ಪ, ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News